ಕನ್ನಡ ವಾರ್ತೆಗಳು

ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಮ್‌ಗಾರ್ಡ್‌‌ನ ರಂಪಾಟ..!

Pinterest LinkedIn Tumblr

Mulki_homguard_fight

ಮುಲ್ಕಿ, ಡಿ.9: ಹೋಮ್‌ಗಾರ್ಡ್ ಓರ್ವ ಮೀನಿನ ಲಾರಿಯನ್ನು ತಡೆದು ಚಾಲಕನಿಗೆ ವಿನಾಕಾರಣ ಹಲ್ಲೆ ನಡೆಸಿದ್ದು, ಘಟನೆಯನ್ನು ಖಂಡಿಸಿ ಸಾರ್ವಜನಿಕರು ಹೋಮ್‌ಗಾರ್ಡ್‌ನ್ನು ತರಾಟೆಗೆ ತೆಗೆದುಕೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ ಬಳಿ ಮಂಗಳವಾರ ಸಂಜೆ ನಡೆದಿದೆ.

ಘಟನೆ ಕಂಡ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿ ಚಾಲಕನಿಗೆ ಹಲ್ಲೆ ನಡೆಸಿರುವ ಬಗ್ಗೆ ವಿಚಾರಿಸಿದ್ದು, ಸುರತ್ಕಲ್ ಎನ್‌ಐಟಿಕೆ ಬಳಿ ತಪಾಸಣೆಗೆಂದು ಲಾರಿಯನ್ನು ನಿಲ್ಲಿಸಿದ್ದು ಚಾಲಕ ನಿಲ್ಲಿಸದೆ ಅತಿ ವೇಗದಿಂದ ಚಲಾಯಿಸಿಕೊಂಡು ಬಂದಿದ್ದಾನೆ ಎಂದು ಸಾರ್ವಜನಿಕರಿಗೆ ಹೋಮ್‌ಗಾರ್ಡ್ ಸಮಜಾಯಿಷಿ ನೀಡಿದ್ದಾನೆ ಎಂದು ತಿಳಿದು ಬಂದಿದೆ.

ಎನ್‌ಐಟಿಕೆ ಬಳಿ ತಪಾಸಣೆಗೆಂದು ಲಾರಿ ನಿಲ್ಲಿಸಿದ ವೇಳೆ ಲಾರಿ ಖಾಲಿಯಾಗಿದ್ದು, ಮಲ್ಪೆಗೆ ಮೀನು ತುಂಬಲು ಹೋಗುತ್ತಿರುವುದಾಗಿ ಪೊಲೀಸರಿಗೆ ತಿಳಿಸಿಯೇ ಬಂದಿದ್ದೇನೆ ಎಂದು ಚಾಲಕ ಸಾರ್ವಜನಿಕರಿಗೆ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.

ಕೂಡಲೇ ಸುರತ್ಕಲ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿ ಪ್ರಕರಣವನ್ನು ರಾಜಿಯಲ್ಲಿ ಮುಗಿಸಿದ್ದಾರೆ ಎಂದು ತಿಳಿದುಬಂದಿದೆ. ಹೋಮ್‌ಗಾರ್ಡ್ ಸಿಬ್ಬಂದಿ ಮೂಲತಃ ಹಳೆಯಂಗಡಿ ಪರಿಸರದ ನಿವಾಸಿ ಎಂದು ಸಾರ್ವಜನಿಕರು ಪತ್ರಿಕೆಗೆ ತಿಳಿಸಿದ್ದಾರೆ.

ರಸ್ತೆ ಮಧ್ಯೆ ಈತನ ರಂಪಾಟಗಳು ಹೆಚ್ಚಾಗುತ್ತಿದೆ ಎಂದಿರುವ ಜನತೆ ಈತ ಅನಗತ್ಯವಾಗಿ ಹೆದ್ದಾರಿಯ ಮಧ್ಯದಲ್ಲಿ ನಿಂತು ಕೊಂಡು ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನಗಳನ್ನು ನಿಲ್ಲಿಸುವುದು ಹಾಗೂ ಸಾರ್ವಜನಿಕರಿಗೆ ಕಿರುಕುಳ ನೀಡುವ ಜೊತೆಗೆ, ವಿನಾ ಕಾರಣ ದ್ವಿಚಕ್ರ ಹಾಗೂ ಲಾರಿಗಳನ್ನು ನಿಲ್ಲಿಸಿ ತಪಾಸಣೆ ನಡೆಸುವ ನೆಪದಲ್ಲಿ ಚಾಲಕರಿಂದ ಹಣ ಕೀಳುತ್ತಿರುತ್ತಾನೆ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮೇಲಕಾರಿಗಳು ಗಮನ ಹರಿಸಿ ಶೀಘ್ರ ಶಿಸ್ತು ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Write A Comment