ಮನೋರಂಜನೆ

ಐಪಿಎಲ್‌ಗೆ ಪುಣೆ, ರಾಜ್‌ಕೋಟ್ ತಂಡಗಳ ಸೇರ್ಪಡೆ; ಎ.9 ರಿಂದ 9ನೆ ಆವೃತ್ತಿಯ ಐಪಿಎಲ್ ಆರಂಭ

Pinterest LinkedIn Tumblr

ipl

ಹೊಸದಿಲ್ಲಿ, ಡಿ.9: ಐಪಿಎಲ್‌ನಿಂದ ಎರಡು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ಬದಲಿಗೆ ಪುಣೆ ಹಾಗೂ ರಾಜ್‌ಕೋಟ್ ತಂಡಗಳು ಮಂಗಳವಾರ ಐಪಿಎಲ್‌ಗೆ ಸೇರ್ಪಡೆಯಾಗಿವೆ.

ನೂತನ ಪುಣೆ ಫ್ರಾಂಚೈಸಿಯನ್ನು ಕೋಲ್ಕತಾ ಮೂಲದ ಉದ್ಯಮಿ ಸಂಜೀವ್ ಗೋಯೆಂಕಾ ಕಂಪೆನಿ ಖರೀದಿಸಿದರೆ, ರಾಜ್‌ಕೋಟ್ ಫ್ರಾಂಚೈಸಿಯನ್ನು ಇಂಟೆಕ್ಸ್ ಮೊಬೈಲ್ಸ್ ಕಂಪೆನಿ ಖರೀದಿಸಿದೆ. ಒಪ್ಪಂದದ ಪ್ರಕಾರ ಗೊಯೆಂಕಾ ಕಂಪೆನಿ ಬಿಸಿಸಿಐಗೆ ಪ್ರತಿ ವರ್ಷ 10 ಕೋಟಿ ರೂ. ಹಾಗೂ ಇಂಟೆಕ್ಸ್ ಮೊಬೈಲ್ಸ್ 16 ಕೋಟಿ ರೂ.ಪಾವತಿಸಬೇಕಾಗುತ್ತದೆ.

‘‘ಎರಡು ಹೊಸ ಫ್ರಾಂಚೈಸಿಗಳು ಬಿಸಿಸಿಐಯಿಂದ ಒಂದೂ ಪೈಸೆಯನ್ನು ತೆಗೆದುಕೊಂಡಿಲ್ಲ. ಫ್ರಾಂಚೈಸಿಗಳೇ ನಮಗೆ ಹಣ ನೀಡುತ್ತವೆ’’ ಎಂದು ಐಪಿಎಲ್ ಆಡಳಿತ ಮಂಡಳಿಯ ಸಭೆಯ ಬಳಿಕ ಸುದ್ದಿಗಾರರಿಗೆ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ತಂಡಗಳನ್ನು ರಿವರ್ಸ್ ಬೆಡ್ಡಿಂಗ್‌ನ ಮೂಲಕ ಮಾರಾಟ ಮಾಡಲಾಗಿದೆ. ಐಪಿಎಲ್‌ನ ಹೊಸ ತಂಡಗಳ ಮೂಲ ಬಿಡ್ ಬೆಲೆ 40 ಕೋಟಿ ರೂ. ಬಿಡ್ಡರ್‌ಗಳು ಮೂಲ ಬೆಲೆಗಿಂತ ಕಡಿಮೆ ಮೊತ್ತಕ್ಕೆ ಬಿಡ್ ಸಲ್ಲಿಸಬೇಕಿತ್ತು. ಕ್ರಮವಾಗಿ ಮೈನಸ್ 16 ಕೋಟಿ ರೂ. ಹಾಗೂ ಮೈನಸ್ 10 ಕೋಟಿ ರೂ. ಬಿಡ್ ಸಲ್ಲಿಸಿದ ನ್ಯೂ ರೈಸಿಂಗ್ ಹಾಗೂ ಇಂಟೆಕ್ಸ್ ಮೊಬೈಲ್ ಕಂಪೆನಿಗಳಿಗೆ ಫ್ರಾಂಚೈಸಿಗಳನ್ನು ನೀಡಲಾಗಿದೆ.

ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಇತರ ಮೂರು ಕಂಪೆನಿಗಳಾದ ಆರ್‌ಪಿಜಿ ಪ್ರಾಪರ್ಟೀಸ್, ಅಕ್ಸಿಸ್ ಕ್ಲಿನಿಕಲ್ ಹಾಗೂ ಚೆಟ್ಟಿನಾಡ್ ಸಿಮೆಂಟ್ಸ್ ಗರಿಷ್ಠ ಮೊತ್ತದ ಬಿಡ್ ಸಲ್ಲಿಸಿದ್ದವು. 2013ರ ಐಪಿಎಲ್ ಸ್ಪಾಟ ಫಿಕ್ಸಿಂಗ್ ಪ್ರಕರಣದಲ್ಲಿ ಚೆನ್ನೈ ಹಾಗೂ ರಾಜಸ್ಥಾನ ತಂಡಗಳ ಕೆಲವು ಅಧಿಕಾರಿಗಳು ಹಾಗೂ ಸಹ-ಮಾಲಕರು ಭಾಗಿಯಾದ ಹಿನ್ನೆಲೆಯಲ್ಲಿ ಈ ಎರಡು ತಂಡಗಳನ್ನು ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ನಿವೃತ್ತ ನ್ಯಾಯಮೂರ್ತಿ ಆರ್‌ಎಂ ಲೋಧಾ ಸಮಿತಿ ಎರಡು ವರ್ಷಗಳ ಕಾಲ ನಿಷೇಧ ಹೇರಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಎರಡು ಹೊಸ ತಂಡಗಳನ್ನು ಸೇರಿಸಿಕೊಳ್ಳಲಾಗಿದೆ.

ಚೆನ್ನೈ ಹಾಗೂ ರಾಜಸ್ಥಾನ ತಂಡಗಳು ನಿಷೇಧದ ಅವಧಿ ಮುಗಿದ ತಕ್ಷಣ ಐಪಿಎಲ್ ಲೀಗ್‌ಗೆ ವಾಪಸಾಗುತ್ತವೆ. ಸಿಎಸ್‌ಕೆ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ಆಟಗಾರರನ್ನು ಹೊಸಬರು ಹಾಗೂ ಅನುಭವಿ ಆಟಗಾರರನ್ನಾಗಿ ವಿಭಜಿಸಲಾಗುತ್ತದೆ. ಅಗ್ರ ಆಟಗಾರರು ಡ್ರಾಫ್ಟ್ ಪದ್ಧತಿಯ ಮೂಲಕ ಮಾರಾಟವಾಗಲಿದ್ದಾರೆ. ಎರಡು ನೂತನ ತಂಡಗಳು ಆಟಗಾರರನ್ನು ಖರೀದಿಸಲು ಕನಿಷ್ಠ 40 ಕೋಟಿ ರೂ. ಹಾಗೂ 66 ಕೋಟಿ ರೂ.ಗಳನ್ನು ಬಳಸಬೇಕಾಗಿದೆ.

ಟೀಮ್ ಇಂಡಿಯಾಕ್ಕೆ 2 ಕೋಟಿ ರೂ.ಬಹುಮಾನ

ಹೊಸದಿಲ್ಲಿ: ದಕ್ಷಿಣ ಆಫ್ರಿಕ ವಿರುದ್ಧದ ಸರಣಿಯನ್ನು 3-0 ಅಂತರದಿಂದ ಜಯಿಸಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾಕ್ಕೆ ಬಿಸಿಸಿಐ 2 ಕೋಟಿ ರೂ. ಬಹುಮಾನ ಘೋಷಿಸಿದೆ.

ಭಾರತ ಹೊಸದಿಲ್ಲಿಯಲ್ಲಿ ಸೋಮವಾರ ಕೊನೆಗೊಂಡ ನಾಲ್ಕನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕವನ್ನು 337 ರನ್‌ಗಳಿಂದ ಮಣಿಸಿ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿತ್ತು. ಕೊನೆಯ ಟೆಸ್ಟ್ ಗೆಲುವಿಗೆ 481 ರನ್ ಸವಾಲು ಪಡೆದಿದ್ದ ಆಫ್ರಿಕ ತಂಡ 143 ರನ್‌ಗೆ ಆಲೌಟಾಗಿತ್ತು.

ಭಾರತ ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 108 ರನ್‌ಗಳಿಂದಲೂ ನಾಗ್ಪುರದಲ್ಲಿ ನಡೆದಿದ್ದ 3ನೆ ಪಂದ್ಯವನ್ನು 124 ರನ್‌ಗಳಿಂದ ಗೆದ್ದುಕೊಂಡಿತ್ತು. ಬೆಂಗಳೂರಿನಲ್ಲಿ ನಡೆದಿದ್ದ 2ನೆ ಪಂದ್ಯ ಮಳೆಗಾಹುತಿಯಾಗಿತ್ತು.

ದಕ್ಷಿಣ ಆಫ್ರಿಕ ವಿರುದ್ಧದ ಸರಣಿಯನ್ನು 3-0 ಅಂತರದಿಂದ ಜಯಿಸಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ ಬಿಸಿಸಿಐ 2 ಕೋಟಿ ರೂ. ಬಹುಮಾನ ಘೋಷಿಸುತ್ತಿದೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಎ.9 ರಿಂದ 9ನೆ ಆವೃತ್ತಿಯ ಐಪಿಎಲ್ ಆರಂಭ

ಹೊಸದಿಲ್ಲಿ: ಒಂಬತ್ತನೆ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2016ರ ಎಪ್ರಿಲ್ 9 ರಿಂದ ಮೇ 29ರ ತನಕ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಮಂಗಳವಾರ ಧೃಢಪಡಿಸಿದರು.

ಭಾರತದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿ ಕೊನೆಗೊಂಡ ಐದು ದಿನಗಳ ಬಳಿಕ ಐಪಿಎಲ್ ಆರಂಭವಾಗಲಿದೆ. ಮಂಗಳವಾರ ಇಲ್ಲಿ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ನಿಷೇಧ ಎದುರಿಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ಬದಲಿಗೆ ಎರಡು ಹೊಸ ತಂಡಗಳನ್ನು ಅಂತಿಮಗೊಳಿಸಲಾಗಿದೆ.

‘‘ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ 2016ರ ಫೆ.6 ರಂದು ಬೆಂಗಳೂರಿನಲ್ಲಿ ನಡೆಯಲಿದೆ’’ ಎಂದು ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಘೋಷಿಸಿದ್ದಾರೆ. ಮುಂದಿನ ವರ್ಷ ಆಟಗಾರರ ಹರಾಜು ಪ್ರಕ್ರಿಯೆಯ ಮೊದಲು ಡಿಸೆಂಬರ್ 15 ರಿಂದ ಐಪಿಎಲ್ ಆಟಗಾರರ ಡ್ರಾಫ್ಟ್ ಪ್ರಕ್ರಿಯೆ ಆರಂಭವಾಗಲಿದೆ.

Write A Comment