ಕನ್ನಡ ವಾರ್ತೆಗಳು

ಡಿ.5: ಸೋಲಾರ್ ಮೇಲ್ಛಾವಣಿ ಅಳವಡಿಕೆಗೆ ಸಾಲ ಸೌಲಭ್ಯ ಕಾರ್ಯಗಾರ

Pinterest LinkedIn Tumblr

Ivan_press_meet_2

ಮಂಗಳೂರು, ಡಿ.02 : ಮನೆಗಳಿಗೆ ಸೋಲಾರ್ ಮೇಲ್ಛಾವಣಿ ಮೂಲಕ ಘಟಕಗಳ ಸ್ಥಾಪನೆಗೆ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸಲು ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸುವ ಸಲುವಾಗಿ ಡಿ.5ರಂದು ಜಿಲ್ಲಾ ಬ್ಯಾಂಕ್‌ಗಳು, ಬಳಕೆದಾರರು, ಸೇವಾ ಸೌಲಭ್ಯ ಒದಗಿಸುವ ಪ್ರತಿನಿಧಿಗಳ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ದ.ಕ. ಜಿಲ್ಲೆಯನ್ನು ಸೋಲಾರ್ ಬಳಕೆಯ ಜಿಲ್ಲೆಯನ್ನಾಗಿಸಲು ಹೆಚ್ಚಿನ ಅನುದಾನವನ್ನು ಒದಗಿಸಿ ಪೈಲಟ್ ಯೋಜನೆಗೆ ಜಿಲ್ಲೆಯನ್ನು ಆಯ್ಕೆ ಮಾಡುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾಪ ಸಲ್ಲಿಸಬೇಕೆಂದು ಆಗ್ರಹಿಸಿದರು.

ಸೋಲಾರ್ ಅಳವಡಿಕೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸುವಂತೆ ರಾಜ್ಯ ಸರಕಾರಕ್ಕೆ ಬೇಡಿಕೆ ಸಲ್ಲಿಸಬೇಕು ಎಂದು ಹೇಳಿದ ಅವರು, ಡಿ.5ರಂದು ನಡೆಯುವ ಕಾರ್ಯಾಗಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಭಾಗವಹಿಸಲಿದ್ದಾರೆ ಎಂದರು.

ಜಿಲ್ಲಾಧಿಕಾರಿ ಕಚೇರಿಯ ಮೇಲ್ಛಾವಣಿಯಲ್ಲಿ 20 ಕಿಲೋ ವ್ಯಾಟ್ ಸಾಮರ್ಥ್ಯದ ಸೌರಶಕ್ತಿ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ದ.ಕ.ಜಿಲ್ಲಾ ಪಂಚಾಯತ್ ಕಚೇರಿಯ ಮೇಲ್ಛಾವಣಿಯಲ್ಲಿ 80 ಲಕ್ಷ ರೂ. ವೆಚ್ಚದಲ್ಲಿ 100 ಕಿಲೋ ವ್ಯಾಟ್ ಸಾಮರ್ಥ್ಯದ ಸೌರಶಕ್ತಿ ಘಟಕ ಸ್ಥಾಪಿಸಲಾಗುತ್ತಿದೆ.

ಇದಕ್ಕಾಗಿ ತಲಾ 5 ಲಕ್ಷ ರೂ. ಅನುದಾನವನ್ನು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ತಾವು ನೀಡುವುದಾಗಿ ಈ ಸಂದರ್ಭ ಪ್ರಕಟಿಸಿದರು. ಇತ್ತೀಚೆಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿಯೂ ರಾಜ್ಯದ ಎಲ್ಲೆಡೆ ಸೌರಶಕ್ತಿ ಬಳಕೆ ವಿಸ್ತರಿಸಲು ಸರಕಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ವಿಧಾನಸೌಧ ಹಾಗೂ ವಿಕಾಸಸೌಧಗಳಲ್ಲಿಯೂ ಸೌರಶಕ್ತಿ ಮೇಲ್ಛಾವಣಿ ಘಟಕವನ್ನು ಸ್ಥಾಪಿಸಲು ಸರಕಾರದಿಂದ ಕ್ರಮಗೊಳ್ಳುವ ಭರವಸೆ ದೊರಕಿದೆ ಎಂದು ಅವರು ಹೇಳಿದರು.

ಸೌರಶಕ್ತಿ ಘಟಕದ ಕುರಿತಂತೆ ಅರಿವು ಮೂಡಿಸಲು ಮಂಗಳೂರು ಮತ್ತು ಸುತ್ತಮುತ್ತ ಸಾಮಾಜಿಕ ಸಂಘಟನೆಗಳು, ವಾರ್ಡ್ ಕಮಿಟಿಗಳ ಮೂಲಕ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, 45,000 ಕೈಪಿಡಿಗಳನ್ನು ಮನೆಗಳಿಗೆ ತಲುಪಿಸುವ ಕೆಲಸ ಮಾಡಲಾಗಿದೆ.

ಶೈಕ್ಷಣಿಕ ಹಾಗೂ ಆರೋಗ್ಯ ಸಂಸ್ಥೆಗಳನ್ನು ಈಗಾಗಲೇ ಭೇಟಿ ಮಾಡಿ ಅರಿವು ಮೂಡಿಸಲಾಗಿದೆ. ನಿಟ್ಟೆ ಎಜುಕೇಶನ್ ಟ್ರಸ್ಟ್, ಫಾದರ್ ಮುಲ್ಲರ್ ವೈದ್ಯಕೀಯ ಶಿಕ್ಷಣ ಸಂಸ್ಥೆ, ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು, ಯೆನೆಪೊಯ ವೈದ್ಯಕೀಯ ಶಿಕ್ಷಣ ಸಂಸ್ಥೆಯೂ ಈ ಯೋಜನೆ ಜಾರಿಗೊಳಿಸಲು ಮುಂದಾಗಿದೆ ಎಂದು ಐವನ್ ವಿವರಿಸಿದರು.

ಮೇಯರ್ ಜೆಸಿಂತಾ ವಿಜಯಾ ಆಲ್ಪೆರ್ಡ್ ಈ ಸಂದರ್ಭ ಉಪಸ್ಥಿತರಿದ್ದರು.

Write A Comment