ಕಾಸರಗೋಡು, ನ.07:ಬೇಕಲ ಠಾಣಾ ವ್ಯಾಪ್ತಿಯ ಉಡುಮದಲ್ಲಿ ವಿವಾಹಿತೆ ಮಹಿಳೆಯ ಮೃತದೇಹವೊಂದು ಬಾವಿಯಲ್ಲಿ ಪತ್ತೆಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಮೃತಪಟ್ಟ ಮಹಿಳೆ ಉಡುಮ ನಿವಾಸಿ ಮುಕ್ಕುನ್ನತ್‌ನ ಬಿಜು ಎಂಬವರ ಪತ್ನಿ ಶ್ರೀಲತಾ(25) ಎಂದು ಗುರುತಿಸಲಾಗಿದೆ. ಪತಿ ಬಿಜು ಗಲ್ಫ್‌ನಲ್ಲಿ ಉದ್ಯೋಗಿಯಾಗಿದ್ದು, ಕಾಸರಗೋಡು ನೆಲ್ಲಿಕುಂಜೆ ನಿವಾಸಿಯಾಗಿದ್ದ ಶ್ರೀಲತಾ ಹತ್ತು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು.
ಗುರುವಾರ ರಾತ್ರಿಯಿಂದ ನಾಪತ್ತೆಯಾಗಿದ್ದ ಇವರನ್ನು ಮನೆಯವರು ಶೋಧ ನಡೆಸಿದ್ದು, ಶುಕ್ರವಾರ ಪಕ್ಕದ ಮನೆಯವರ ಬಾವಿಯಲ್ಲಿ ಮೃತ ದೇಹ ಪತ್ತೆಯಾಗಿದೆ,
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಕಾಸರಗೋಡು ಅಗ್ನಿಶಾಮಕ ದಳ ಮತ್ತು ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತಿ ಮಹಜರು ನಡೆಸಿದ್ದು ,ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು, ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ .
ಸಾವಿನ ಬಗ್ಗೆ ಸಂಶಯಗಳು ಉಂಟಾಗಿದ್ದು, ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
