ಉಳ್ಳಾಲ, ನ.07 : ರಾ.ಹೆ 66ರ ಉಚ್ಚಿಲಗುಡ್ಡೆ ಎಂಬಲ್ಲಿ ಲಾರಿ ಮತ್ತು ರಿಕ್ಷಾ ನಡುವೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಮೂಲತಃ ಗುರುಪುರ ಪರಾರಿ ನಿವಾಸಿ ಪ್ರಸ್ತುತ ತಲಪಾಡಿ ಕೆ. ಸಿ.ರೋಡ್‌ನಲ್ಲಿ ವಾಸವಾಗಿದ್ದ ಮುಹಮ್ಮದ್ ರಫೀಕ್(45) ಮೃತ ಪಟ್ಟ ದುರ್ದೈವಿ.
ಘಟನೆಯ ವಿವರ: ಮುಹ ಮ್ಮದ್ ರಫೀಕ್ ಸೋಮೇಶ್ವರ ರೈಲ್ವೆ ನಿಲ್ದಾಣದ ರಿಕ್ಷಾ ಪಾರ್ಕ್‌ನಲ್ಲಿ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಶುಕ್ರವಾರ ಬೆಳಗ್ಗೆ 4:30ರ ಸಮಯದಲ್ಲಿ ಕೆ.ಸಿ.ರೋಡ್‌ನಿಂದ ಸೋಮೇಶ್ವರ ಕಡೆಗೆ ರಿಕ್ಷಾ ಬಾಡಿಗೆಗೆಂದು ಹೋಗುತ್ತಿದ್ದಾಗ ಉಚ್ಚಿಲಗುಡ್ಡೆ ಬಳಿ ಮಂಗಳೂರಿನಿಂದ ಕೇರಳ ಕಡೆಗೆ ಮೀನು ಸಾಗಿಸುತ್ತಿದ್ದ ಲಾರಿ ಬಡಿದಿದ್ದು, ರಿಕ್ಷಾ ಚಲಾಯಿಸುತ್ತಿದ್ದ ರಫೀಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮನೆಯ ಆಧಾರ ಸ್ತಂಭವಾಗಿದ್ದರು: ಮಹಮ್ಮದ್ ರಫೀಕ್ ಪತ್ನಿ, ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದು, ಬಾಡಿಗೆ ಮನೆಯಲ್ಲಿ ವಾಸವಿದ್ದ ಇವರು ರಿಕ್ಷಾ ಬಾಡಿಗೆ ಮಾಡಿ ಕುಟುಂಬವನ್ನು ಸಲಹುತ್ತಿದ್ದರು. ರಫೀಕ್ ಸಾವಿನಿಂದ ಕುಟುಂಬ ಅತಂತ್ರವಾಗಿದೆ.
