ಕನ್ನಡ ವಾರ್ತೆಗಳು

ಮೆಲ್ಕಾರ್‌ನ ಆಪತ್ಪಾಂಧವ ರವಿಕುಮಾರ್ ಮೆಲ್ಕಾರ್ ಅಂತಿಮ ದರ್ಶನಕ್ಕೆ ಜನಸಾಗರ  

Pinterest LinkedIn Tumblr

Ravi_Melkar_died

ಬಂಟ್ವಾಳ, ನ.6 : ಅನಾರೋಗ್ಯದಿಂದ ನಿಧನರಾದ ಮೆಲ್ಕಾರ್ ಪರಿಸರದ `ಆಪತ್ಪಾಂಧವ’, ಜನಾನುರಾಗಿ ರವಿಕುಮಾರ್ ಮೆಲ್ಕಾರ್ (47) ಅವರ ಅಂತ್ಯಕ್ರಿಯೆ ಭಾರೀ ಸಂಖ್ಯೆಯ ಅಭಿಮಾನಿಗಳು, ಸ್ನೇಹಿತರು, ಬಂಧು ಬಳಗದ ಅಶ್ರುತರ್ಪಣದೊಂದಿಗೆ ಗುರುವಾರ ನೆರವೇರಿತು.

ಕಳೆದ ಶನಿವಾರ ಶಂಕಿತ ಡೆಂಗ್ಯು ಜ್ವರಕ್ಕೆ ತುತ್ತಾಗಿದ್ದ ಇವರನ್ನು ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನದ ವೇಳೆಗೆ ಕೊನೆಯುಸಿರೆಳೆದಿದ್ದಾರೆ. ಮೃತರು ತಾಯಿ, ಪತ್ನಿ, ಪುತ್ರಿ, ಸಹೋದರ ಹಾಗೂ ಸಹೋದರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಅಂತಿಮ ದರ್ಶನಕ್ಕೆ ಜನಸಾಗರ:
ಮಂಗಳೂರಿನಿಂದ ರವಿ ಅವರ ಮೃತದೇಹವನ್ನು ಮೆಲ್ಕಾರ್‍ಗೆ ತರುತ್ತಿದ್ದಂತೆಯೇ ಬಿ.ಸಿ. ರೋಡಿನಲ್ಲಿಯೇ ಅವರ ಅಭಿಮಾನಿಗಳು ಮೆರವಣಿಗೆಯ ಮೂಲಕ ಮನೆಯವರೆಗೂ ಕರೆದೊಯ್ದರು. ರವಿ ನಿಧನದ ಹಿನ್ನೆಲೆಯಲ್ಲಿ ಮೆಲ್ಕಾರ್ ವೃತ್ತ ಹಾಗೂ ಕೆಲ ವಾಹನಗಳು ಕರಿಪತಾಕೆಯನ್ನು ಹಾರಿಸಿ ಸಂತಾಪ ವ್ಯಕ್ತಪಡಿಸಿದವು. ದಾರಿಯುದ್ದಕ್ಕೂ ಅಲ್ಲಲ್ಲಿ ಸಾರ್ವಜನಿಕರು ಮೃತದೇಹದ ಅಂತಿಮದರ್ಶನ ಪಡೆದರು. ಮನೆಯ ಮುಂಭಾಗದಲ್ಲಿ ಮೃತದೇಹವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ಮೆಲ್ಕಾರ್ ಸೇರಿದಂತೆ ಆಸುಪಾಸಿನ ಗ್ರಾಮಸ್ಥರು ಭಾರೀ ಸಂಖ್ಯೆಯಲ್ಲಿ ಆಗಮಿಸಿ, ಅಂತಿಮನಮನ ಸಲ್ಲಿಸಿದರು.
ವಿವಿಧ ಗಣ್ಯರ ಭೇಟಿ :
ಸಚಿವ ಯು.ಟಿ. ಖಾದರ್ ಅವರು ಮಂಗಳವಾರ ರಾತ್ರಿಯೇ ಆಸ್ಪತ್ರೆಗೆ ಭೇಟಿ ನೀಡಿದ್ದು, ಆರೋಗ್ಯ ವಿಚಾರಿಸಿದ್ದರು. ರವಿ ಅವರ ನಿಧನವಾರ್ತೆ ತಿಳಿಯುತ್ತಿದ್ದಂತೆಯೇ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ ಭಟ್, ಸಂಸದ ನಳಿನ್‍ಕುಮಾರ್ ಕಟೀಲು, ಜಿ.ಪಂ. ಉಪಾಧ್ಯಕ್ಷ ಸತೀಶ್ ಕುಂಪಲ, ಸದಸ್ಯರಾದ ಚೆನ್ನಪ್ಪ ಕೋಟ್ಯಾನ್, ಸಂತೋಷ್ ಕುಮಾರ್ ರೈ, ತಾ.ಪಂ. ಅಧ್ಯಕ್ಷ ಯಶವಂತ ದೇರಾಜೆ, ಸದಸ್ಯರಾದ ಆನಂದ ಶಂಭೂರು, ದಿನೇಶ್ ಅಮ್ಟೂರು, ಬಿಜೆಪಿ ಮುಖಂಡರಾದ ರಾಜೇಶ್ ನಾೈಕ್ ಉಳೀಪಾಡಿಗುತ್ತು, ದೇವದಾಸ್ ಶೆಟ್ಟಿ, ಜಿ. ಆನಂದ, ಗೋವಿಂದ ಪ್ರಭು, ರಾಮದಾಸ್ ಬಂಟ್ವಾಳ, ಬಂಟ್ವಾಳ ತಾಲೂಕು ಗಾಣಿಗರ ಸಮಾಜ ಸೇವಾ ಸಂಘದ ಅಧ್ಯಕ್ಷ ರಘು ಸಫಲ್ಯ ಹಾಗೂ ಪದಾಧಿಕಾರಿಗಳು, ಕಾಂಗ್ರೆಸ್ ಮುಖಂಡರಾದ ಎ.ಸಿ. ಭಂಡಾರಿ, ವಿಶ್ವಾಸ್ ದಾಸ್, ಸಂಜೀವ ಪೂಜಾರಿ, ಮಾಜಿ ವಕ್ಫ್ ಅಧ್ಯಕ್ಷ ಉಸ್ಮಾನ್ ಹಾಜಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಲತೀಫ್ ನೇರಳಕಟ್ಟೆ, ಹಿ.ಜಾ.ವೇ ಮುಖಂಡ ರವಿರಾಜ್ ಬಿ.ಸಿ. ರೋಡು ಮೊದಲಾದವರು ಭೇಟಿ ನೀಡಿ ಮೃತರ ಅಂತಿಮ ದರ್ಶನಪಡೆದರು.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ರವಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ. ರವಿ ಅವರ ನಿಧನಕ್ಕೆ ಮೆಲ್ಕಾರ್ ಪರಿಸರದ ವ್ಯಾಪಾರಿಗಳು ಅಂಗಡಿ ಮುಗ್ಗಟ್ಟುಗಳು ಮುಚ್ಚಿ ಸಂತಾಪ ಸೂಚಿಸಿದರು. ಸದಾ ಗಿಜಿಗಿಡುತ್ತಿದ್ದ ಮೆಲ್ಕಾರ್ ಪರಿಸರ ಶೋಕಸಾಗರದಲ್ಲಿ ಮುಳುಗಿತ್ತು.
ಮೆಲ್ಕಾರ್‍ನ ಆಪತ್ಪಾಂಧವ:
ಮೆಲ್ಕಾರ್ ಜಂಕ್ಷನ್‍ನಲ್ಲಿ ಕುಮಾರ ಏಜೆನ್ಸಿ ನಡೆಸುತ್ತಿದ್ದ ಅವರು, ಜಿಲ್ಲೆಯಿಂದ ಪ್ರಕಟಗೊಳ್ಳುವ ಎಲ್ಲಾ ಪತ್ರಿಕೆಗಳ ಏಜೆಂಟರ ಸಹಿತ ಮಾರಾಟಗಾರರೂ ಆಗಿದ್ದರು. ಮುಂಜಾನೆಯಿಂದ ತಡ ರಾತ್ರಿವರೆಗೂ ತನ್ನ ಅಂಗಡಿಯನ್ನು ತೆರೆದಿಟ್ಟು ವ್ಯವಹಾರ ನಡೆಸುತ್ತಿದ್ದ ಇವರು, ಸ್ಥಳೀಯ ಪರಿಸರದ ಎಲ್ಲಾ ವರ್ಗದ ಜನರ ಕಷ್ಟಸುಖಗಳಲ್ಲಿ ಸ್ಪಂದಿಸುವ ಮೂಲಕ ಮೆಲ್ಕಾರ್‍ನ ಆಪತ್ಪಾಂಧವ ಎಂದೇ ಜನಾನುರಾಗಿದ್ದರು.
ಸಾಮಾಜಿಕ ಕಳಕಳಿಯ ಜತೆಗೆ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿಯೂ ಇದ್ದ ಇವರು, ಒಂದೊಮ್ಮೆ ಬಂಟ್ವಾಳ ಪುರಸಭೆಯ ನಾಮನಿರ್ದೇಶಿತ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಮೆಲ್ಕಾರ್ ಪರಿಸರದಲ್ಲಿ ಯಾವುದೇ ಅಪಘಾತ, ಕೌಟುಂಬಿಕ ಕಲಹ, ಸಣ್ಣಪುಟ್ಟ ಅಹಿತಕರ ಘಟನೆಗಳಾದ ಸಂದರ್ಭದಲ್ಲಿ ಇವರು ಮುಂಚೂಣಿಯಲ್ಲಿ ನಿಂತು ಅದನ್ನು ಪರಿಹರಿಸುವಲ್ಲಿ ಯಶಸ್ವಿಯಾಗುತ್ತಿದ್ದರು.
ಬಂಟ್ವಾಳ ಪೊಲೀಸರು ಕೂಡ ಇಂತಹಾ ಸಂದರ್ಭದಲ್ಲಿ ರವಿ ಅವರನ್ನು ಸಂಪರ್ಕಿಸಿ ನೆರವು ಪಡೆದುಕೊಳ್ಳುತ್ತಿದ್ದರು. ಸ್ನೇಹ ಮತ್ತು ಶ್ರಮಜೀವಿಯಾಗಿದ್ದ ಅವರು ಸ್ವಂತಕ್ಕಾಗಿ ಏನೂ ಮಾಡದೆ, ಸಮಾಜಕ್ಕೆ ಸರ್ವಸ್ವವನ್ನು ಅರ್ಪಿಸಿ, ಸ್ಥಳೀಯವಾಗಿ ಎಲ್ಲಾ ವರ್ಗದವರಿಗೂ ರವಿಯಣ್ಣ ಎಂದೇ ಚಿರಪರಿಚಿತರಾಗಿದ್ದರು.

 

 

Write A Comment