ಕುಂದಾಪುರ: ಇನ್ನೋವಾ ಕಾರಿಗೆ ಮೀನು ಸಾಗಾಟದ ಪಿಕಪ್ ವಾಹನ (ಗೂಡ್ಸ್ ವಾಹನ) ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಬೀಜಾಡಿ ಬೈಪಾಸ್ ಸಮೀಪ ಮಂಗಳವಾರ ಸಂಜೆ ನಡೆದಿದೆ. ಅಪಘಾತದಲ್ಲಿ ಇನ್ನಿಬ್ಬರು ಪ್ರಯಾಣಿಕರಾದ ಅರುಣ ಹಾಗೂ ಮಣಿಕಂಠ ಅವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಬೆಂಗಳುರು ಮಹೀಂದ್ರಾ ಕಂಪೆನಿ ಉದ್ಯೋಗಿಯಾಗಿರುವ ಬಾಲಕೃಷ್ಣ ಎನ್ನುವವರೇ ಅಪಘಾತದಲ್ಲಿ ಸಾವನ್ನಪ್ಪಿದ ದುರ್ಧೈವಿ.
ಘಟನೆ ವಿವರ: ಬೀಜಾಡಿಯ ಬೈಪಾಸ್ ತಿರುವಿನಲ್ಲಿ ಕಾರಾವಾರದಿಂದ ಕುಂದಾಪುರ ಮಾರ್ಗವಾಗಿ ಮಲ್ಪೆ ಕಡೆಗೆ ಹೊರಟಿದ್ದ ಪಿಕಪ್ 300 ಮೀಟರ್ ಗಳಷ್ಟು ಚತುಷ್ಪಥ ರಸ್ತೆಯ ವಿಭಾಜಕದ ಮೇಲೆ ಹರಿದು ಬರುತ್ತಿದುದ್ದನ್ನು ಗಮನಿಸಿದ ಇನ್ನೋವಾ ಚಾಲಕ ಬೆದರಿ ತನ್ನ ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದಾರೆ. ಆದಾಗ್ಯೂ ಪಿಕಪ್ ಚಾಲಕನ ಅತೀ ವೇಗದ ಚಲನೆಗೆ ನಿಯಂತ್ರಣ ತಪ್ಪಿದ ಪಿಕಪ್ ಕಾರಿಗೆ ಢಿಕ್ಕಿ ಹೊಡೆದಿದೆ. ಬೆಂಗಳೂರಿನ ಮಹೀಂದ್ರಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳ ತಂಡ ಕುಂದಾಪುರಕ್ಕೆ ಸಂಸ್ಥೆಯ ಕೆಲಸದ ನಿಮಿತ್ತದ ಬಂದಿದ್ದರು. ತಂಡದ ಮೂವರು ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಆನೆಗುಡ್ಡೆಯ ವಿನಾಯಕನ ದರ್ಶನಕ್ಕೆ ತೆರಳಿದ್ದರು. ದರ್ಶನ ಮುಗಿಸಿಕೊಂಡು ಬರುವಾಗ ಬೀಜಾಡಿ ಬೈಪಾಸ್ ಸಮೀಪದಲ್ಲಿ ಈ ಅಪಘಾತ ನಡೆದಿದೆ.
ಅಪಘಾತದಿಂದ ಎರಡು ತಾಸುಗಳ ಕಾಲ ಸುಗಮ ಸಂಚಾರಕ್ಕೆ ತೊಡಕುಂಟಾಗಿತ್ತು. ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕುಂದಾಪುರ ಉಪವಿಭಾಗದ ಡಿವೈಎಸ್‌ಪಿ ಎಂ.ಮಂಜುನಾಥ ಶೆಟ್ಟಿ, ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಂ, ಎಸ್.ಐ ಗಳಾದ ನಾಸೀರ್ ಹುಸೇನ್, ಜಯ ಸ್ಥಳಕ್ಕೆ ತೆರಳಿ ಅಪಘಾತ ವಾಹನಗಳನ್ನು ತೆರವುಗೊಳಿಸಿ ಸಂಚಾರ ಮುಕ್ತಗೊಳಿಸಿದರು.












