ಮಂಗಳೂರು: ಕಾಸರಗೋಡು ಜಿಲ್ಲೆಯ ಮಂಜೇಶ್ವರ ಬಳಿಯ ಪಾವೂರಿನಲ್ಲಿ ‘ಸ್ನೇಹಾಲಯ’ ಎಂಬ ನೋಂದಾಯಿತ ಸಂಸ್ಥೆಯನ್ನು ಸ್ಥಾಪಿಸಿ ಮನೆ ತಪ್ಪಿ ಬಂದ, ಮಾನಸಿಕ ರೋಗಿಗಳಿಗೆ ವಸತಿ, ಚಿಕಿತ್ಸೆ ನೀಡಿ ಮನೆಗಳಿಗೆ ತಲುಪಿಸುತ್ತಿರುವ ಜೋಸೆಫ್ ಕ್ರಾಸ್ತಾ ಎಂಬವರನ್ನು ಈ ಬಾರಿ 2015ನೇ ಸಾಲಿನ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಗೊಳಿಸಲಾಗಿದೆ ಎಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ ಹೇಳಿದ್ದಾರೆ.
ಮಂಗಳವಾರ ನಗರದ ಹೋಟೆಲ್ ವುಡ್‌ಲ್ಯಾಂಡ್ಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ನೇಹಾಲಯ’ ಸಂಸ್ಥೆಯನ್ನು ಯಶಸ್ವಿಯಾಗಿ ನಡೆಸುತ್ತಿರುವ ಜೊತೆಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತಿದಿನ 700ಕ್ಕೂ ಅಧಿಕ ಮಂದಿ ರೋಗಿಗಳಿಗೆ ಉಚಿತ ಊಟವನ್ನು ಜೋಸೆಫ್ ಕ್ರಾಸ್ತಾರವರು ನೀಡುತ್ತಾ ಬಂದಿದ್ದಾರೆ. ಇವರ ಸಾಮಾಜಿಕ ಸೇವೆಯನ್ನು ಗುರುತಿಸಿ ಈ ಬಾರಿ 2015ನೇ ಸಾಲಿನ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಪ್ರಶಸ್ತಿ ಪ್ರಧಾನ ಸಮಾರಂಭ ಬರುವ ತಿಂಗಳು ನವೆಂಬರ್ 17ರಂದು ಮಂಗಳೂರಿನ ಡಾನ್‍ಬಾಸ್ಕೋ ಹಾಲ್‍ನಲ್ಲಿ ನಡೆಯಲಿದ್ದು, ಮಂಗಳೂರಿನ ಬಿಷಫ್ ವಂದನೀಯ ಡಾ. ಅಲೋಶಿಯಸ್ ಪೌವ್ಲ್ ಡಿಸೋಜಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಕ್ಯಾಸ್ಟಲಿನೊ ಹೇಳಿದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು, ಎಲಿಯಾಸ್ ಫೆರ್ನಾಂಡಿಸ್, ರೇಮಂಡ್ ಡಿ,ಕುನ್ಹಾ, ಡಾ.ರೊನಾಲ್ಡ್ ಫೆರ್ನಾಂಡಿಸ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



