ಮಂಗಳೂರು, ಅ.21 : ಫಳ್ನೀರ್ ವಾರ್ಡ್ನ ಸೂಟರ್ಪೇಟೆ ಪರಿಸರದಲ್ಲಿ ಕುಡಿಯಲು ನೀರು ನೀಡದೆ ದ್ವೇಷ ರಾಜಕಾರಣ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ಕಾರ್ಪೊರೇಟರ್ ಹಾಗೂ ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್ ವಿರುದ್ಧ ಸಿಪಿಎಂ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯೆದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಸೂಟರ್ಪೇಟೆ ಪರಿಸರ ದಲ್ಲಿ ಅಕ್ಕಪಕ್ಕದಲ್ಲಿರುವ ಎಲ್ಲಾ ಮನೆಗಳಿಗೆ ಪಾಲಿಕೆ ವತಿಯಿಂದ ನೀರು ಪೂರೈಕೆ ಆಗುತ್ತಿದ್ದರೂ, ನಿರ್ದಿಷ್ಟವಾಗಿ 3 ಮನೆಗಳಿಗೆ ಕಳೆದ 8 ವರ್ಷಗಳಿಂದ ನೀರು ಪೂರೈಕೆಯಾಗುತ್ತಿಲ್ಲ. ಮೇಯರ್ ಜೆಸಿಂತಾ ಅವರೇ ಈ ಅವಧಿಯಲ್ಲಿ ಕಾರ್ಪೊರೇಟರ್ ಆಗಿದ್ದು, ಅವರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೀರು ಪೂರೈಕೆ ಮಾಡುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಕ್ರಮಕೈಗೊಂಡಿರುವುದಿಲ್ಲ ಎಂದು ದೂರಿದರು.
ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಸದಸ್ಯರಾದ ವಾಸುದೇವ ಉಚ್ಚಿಲ್, ಯೋಗೀಶ್ ಜಪ್ಪಿನಮೊಗರು, ನಗರ ಸಮಿತಿ ಮುಖಂಡರಾದ ಲಿಂಗಪ್ಪ ನಂತೂರು ಹಾಗೂ ಬ್ಯಾಂಕ್ ನೌಕರರ ಸಂಘಟನೆಯ ಮುಖಂಡರಾದ ಬಿ.ಎಂ. ಮಾಧವ ಮಾತನಾಡಿದರು. ಪ್ರತಿಭಟನಾಕಾರರನ್ನು ಭೇಟಿಮಾಡಿದ ಜಂಟಿ ಆಯುಕ್ತರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಯಿತು. ಸಂಜೆಯ ವೇಳೆಗೆ ಸಮಸ್ಯೆ ಬಗೆಹರಿಸುವುದಾಗಿ ಅವರು ಭರವಸೆ ನೀಡಿದರು.
ಸಿಪಿಎಂ ನಾಯಕರಾದ ಪ್ರೇಮ್ನಾಥ್ ಜಲ್ಲಿಗುಡ್ಡೆ, ಭಾರತಿ ಬೋಳಾರ್, ಸಾದಿಕ್ ಕಣ್ಣೂರು, ಸಿಐಟಿಯು ನಾಯಕರಾದ ಸಂತೋಷ್ ಆರ್.ಎಸ್., ಮುಹಮ್ಮದ್ ಮುಸ್ತಫಾ, ಎಲ್.ಟಿ. ಸುವರ್ಣ, ಕೃಷ್ಣಪ್ಪ ಗೌಡ, ವಿದ್ಯಾರ್ಥಿ ಯುವಜನ ನಾಯಕರಾದ ಪ್ರಮೀಳಾ ಶಕ್ತಿನಗರ, ಮಾಧುರಿ, ಮಯೂರಿ, ಪ್ರಗತಿಪರ ಚಿಂತಕರ ವೇದಿಕೆಯ ಮುಖಂಡರಾದ ಪಿ. ಹರೀಶ್ಚಂದ್ರ ರಾವ್, ಸುಕುಮಾರ್, ಪದ್ಮನಾಭ್ ಕೋಟ್ಯಾನ್, ಸುಂದರ್ ಸಾಲ್ಯಾನ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


