__ಸತೀಶ್ ಕಾಪಿಕಾಡ್
ಮಂಗಳೂರು. ಅ,14: ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ನವೀಕರಣವಾಗಿ 25 ವರ್ಷವಾಗಿದ್ದು, ಬಹ್ಮಕಲಶೋತ್ಸವವನ್ನು ನವರಾತ್ರಿ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಅಕ್ಟೋಬರ್ 13 ರಿಂದ 24ರವರೆಗೆ ನವರಾತ್ರಿ ಮಹೋತ್ಸವ ಹಾಗೂ ಮಂಗಳೂರು ದಸರಾ -2015ನ್ನು ಬಹಳ ವಿಜೃಭಂಣೆಯಿಂದ ನಡೆಸಲಾಗುವುದು.
ರಾಜ್ಯದಲ್ಲಿ ಮಳೆಯ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ಜನರ ಸುಭಿಕ್ಷೆಗಾಗಿ, ಜನರ ಸುಖ ಶಾಂತಿಗಾಗಿ ಸಂಕಲ್ಪ ಮಾಡಿದಂತೆ ಈ ಬಾರಿ ಅ.14, 15, 16ರಂದು ಬ್ರಹ್ಮ ಕಲಶೋತ್ಸವ-ಹೋಮ ನಡೆಸಲಾಗುವುದು. ಅ.16 ರಂದು ನೇತ್ರಾವತಿ ನದಿ ಹರಿವಿಗೆ ತೊಡಕಾಗುವ ಎತ್ತಿನಹೊಳೆ ಯೋಜನೆ ಬೇಡವೆಂದು ಪ್ರಧಾನ ಯಾಗವನ್ನು ಮಾಡುವ ಮೂಲಕ ದೇವರಲ್ಲಿ ಮೊರೆ ಹೋಗಲು ತೀರ್ಮಾನಿಸಲಾಗಿದೆ.
ಪ್ರಯುಕ್ತ ಕ್ಷೇತ್ರದಲ್ಲಿ ಅ.16ರಂದು ನಡೆಯುವ ಬ್ರಹ್ಮಕಲಶೋತ್ಸವದ ಅಂಗವಾಗಿ ಇಂದು ನಗರದ ನೆಹರೂ ಮೈದಾನದಿಂದ ಕುದ್ರೋಳಿ ದೇವಸ್ಥಾನದವರೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿವಿಧ ಸಂಘಸಂಸ್ಥೆಗಳಿಂದ ಬಂದ ಅಕ್ಕಿ, ಸಕ್ಕರೆ, ತೆಂಗಿನಕಾಯಿ, ಬೆಲ್ಲ, ಬಾಳೆಗೊನೆಯನ್ನು ಹೊರೆಕಾಣಿಕೆಯ ವಾಹನಗಳಲ್ಲಿ ಮೆರವಣಿಗೆಯ ಮೂಲಕ ನೆಹರೂ ಮೈದಾನದಿಂದ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಸಚಿವರಾದ ಆಂಜನೇಯ, ಯು.ಟಿ. ಖಾದರ್, ಡಿ. ಕೆ. ಶಿವಕುಮಾರ್, ಶಾಸಕರಾದ ಜೆ.ಆರ್. ಲೋಬೋ, ಆರ್. ವಿ. ದೇವರಾಜ್ ಅವರ ನಾಮಫಲಕಗಳನ್ನು ಹೊಂದಿದ್ದ ಟ್ರಕ್ಕುಗಳ ಮೂಲಕ ಸೇವಾ ಸಾಮಗ್ರಿಗಳನ್ನು ಹೊರೆಕಾಣಿಕೆಯಲ್ಲಿ ಕೊಂಡೊಯ್ಯಲಾಯಿತು.
ಶ್ರೀ ಕ್ಷೇತ್ರದ ಜೀರ್ಣೋದ್ಧಾರವಾಗಿ ಹಾಗೂ ಮಂಗಳೂರು ದಸರಾ ಆರಂಭವಾಗಿ 25 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಬ್ರಹ್ಮಕಲಶೋತ್ಸವ ನಡೆಸಲಾಗುವುದು, ಜೊತೆಗೆ ಶ್ರೀ ಕ್ಷೇತ್ರದ ರಜತಮಹೋತ್ಸವ ಅಂಗವಾಗಿ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವ ಕಾರ್ಯಕ್ರಮವನ್ನು ಬಹಳ ಅದ್ಧೂರಿ ಮತ್ತು ವೈಭವಯುತವಾಗಿ ಆಚರಿಸಲಾಗುವುದು ಎಂದು ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣ ಮತ್ತು ಮಂಗಳೂರು ದಸರಾದ ರೂವಾರಿ ಬಿ.ಜನಾರ್ದನ ಪೂಜಾರಿ ತಿಳಿಸಿದರು
ಮಳೆ ಕಡಿಮೆಯಾಗಿ ಸಮಸ್ಯೆ ಉಂಟಾಗಿರುವುದರಿಂದ ಜನ ಗಂಭೀರ ಸಮಸ್ಯೆ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದಲ್ಲಿ ಈಗಾಗಲೇ ನಿರಂತರವಾಗಿ ಮಳೆಗಾಗಿ ಪ್ರಾರ್ಥನೆ ಸಲಿಸುತ್ತಿದ್ದೇವೆ. ಬರಗಾಲ ನೀಗಿಸುವಂತೆ ಹಾಗೂ ಈಗಾಗಲೇ ಕಾಮಗಾರಿ ಆರಂಭಗೊಂಡು ಜಿಲ್ಲೆಗೆ ಮಾರಕವಾಗಿ ಪರಿಣಮಿಸಲಿರುವ ಎತ್ತಿನಹೊಳೆ ಯೋಜನೆಯನ್ನು ಕೈಬಿಡುವ ಸದ್ಬುದ್ಧಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಾಯಕರುಗಳಿಗೆ ಭಗವಂತನು ನೀಡಲಿ ಎಂದು ಪ್ರಾರ್ಥಿಸಿ ಶ್ರೀ ಕ್ಷೇತ್ರದಲ್ಲಿ 15ರವರೆಗೆ ನಿರಂತರವಾಗಿ ಪೂಜೆ ಸಲ್ಲಿಸಲಾಗುವುದು ಎಂದು ಪೂಜಾರಿ ತಿಳಿಸಿದರು.
ಎತ್ತಿನಹೊಳೆ ಯೋಜನೆಯನ್ನು ಕೈಬಿಟ್ಟು ಕೋಲಾರ, ತುಮಕೂರು ಸಹಿತ ನೀರಿಲ್ಲದ ಜಿಲ್ಲೆಗಳಿಗೆ ಪರ್ಯಾಯ ನೀರು ಒದಗಿಸುವ ಯೋಜನೆ ಕೈಗೊಳ್ಳುವ ಮನಸ್ಸನ್ನು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಹಾಗೂ ಇತರ ರಾಜಕಾರಣಿಗಳಿಗೆ ಶ್ರೀ ದೇವಿ ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಗುವುದು ಎಂದು ಪೂಜಾರಿ ಹೇಳಿದರು.
ಮಂಗಳೂರು ಮೇಯರ್ ಜೆಸಿಂತಾ ವಿಜಯ ಅಲ್ಫ್ರೆಡ್, ಉಪ ಮೇಯರ್ ಪುರುಷೋತ್ತಮ್ ಚಿತ್ರಪುರ, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕೋಶಾಧಿಕಾರಿ ಪದ್ಮರಾಜ್ ಆರ್, ಕ್ಷೇತ್ರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಜಯ ಸಿ. ಸುವರ್ಣ, ಕ್ಷೇತ್ರ ಅಭಿವೃದ್ಧಿ ಮಂಡಳಿಯ ಸದಸ್ಯರಾದ ದೇವೇಂದ್ರ ಪೂಜಾರಿ, ವಿಶ್ವನಾಥ ಕಾಸರ ಗೋಡು, ಹರಿಕೃಷ್ಣ ಬಂಟ್ವಾಳ, ಡಾ.ಬಿ.ಜೆ.ಸುವರ್ಣ, ಶೇಖರ ಪೂಜಾರಿ, ಡಾ.ಅನಸೂಯ, ಬಿ.ಜೆ.ಸಾಲ್ಯಾನ್., ಎಸ್.ಹರಿಶ್ಚಂದ್ರ, ಡಿ.ಡಿ.ಕಟ್ಟೆಮಾರ್, ಮನಪಾ ಸದಸ್ಯರಾದ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ರಾಧಾಕೃಷ್ಣ, ಎ.ಸಿ.ವಿನಯ ರಾಜ್ ನವೀನ್ ಡಿ’ಸೋಜ, ಕವಿತಾವಾಸು, ರತಿಕಲಾ, ಶೈಲಜಾ, ವಿಶ್ವಾಸ್‌ಕುಮಾರ್‌ದಾಸ್, ನಾಗೇಂದ್ರ ಕುಮಾರ್, ರಮಾನಂದ ಪೂಜಾರಿ ಹಾಗೂ ಸುಧೀರ್ ಟಿ. ಕೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





















