ಕುಂದಾಪುರ: ಭಾನುವಾರದ ರಜಾ ದಿನವಾದ್ರೂ ಕುಂದಾಪುರದ ಗಾಂಧೀ ಮೈದಾನದ ಸಮೀಪ ನೂರಾರು ಜನರು ಸೇರಿದ್ರು. ಅವರೆಲ್ಲರ ಮುಖದಲ್ಲಿ ಸಾಧಿಸುವ ಛಲವಿತ್ತು. ಅಷ್ಟಕ್ಕೂ ಅಲ್ಲಿ ಏನು ಕಾರ್ಯಕ್ರಮವಿತ್ತು ಅಂತೀರಾ..? ಈ ಬಗ್ಗೆ ಇಲ್ಲಿದೆ ನೋಡಿ ವರದಿ.
ವಿಶ್ವ ಹೃದಯ ದಿನದ ಅಂಗವಾಗಿ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಲು ಹಾಗೂ ಜನಜಾಗೃತಿ ಮೂಡಿಸುವ ಸಲುವಾಗಿ ಕುಂದಾಪುರ ರೋಟರಿ ಕ್ಲಬ್ ಹಾಗೂ ನ್ಯೂ ಮೆಡಿಕಲ್ ಸೆಂಟರ್ ಕುಂದಾಪುರ ಇವರ ವತಿಯಿಂದ ಕುಂದಾಪುರ ಆರೋಗ್ಯಕ್ಕಾಗಿ ಓಟ-2015 ಎನ್ನುವ ಓಟದ ಸ್ಪರ್ಧಾ ಕಾರ್ಯಕ್ರವನ್ನು ಆಯೋಜಿಸಿದ್ರು.
ನೂರೈವತ್ತು ಅಧಿಕ ಜನರು ಗಾಂಧೀ ಮೈದಾನದಲ್ಲಿ ಜಮಾಯಿಸಿ ಆಯೋಜಕರ ಬಳಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಓಡಲು ತಯಾರಿ ನಡೆಸಿಕೊಂಡ್ರು. ವಕೀಲರು, ವೈದ್ಯರು, ವಿದ್ಯಾರ್ಥಿಗಳು, ಹಿರಿಯ ನಾಗರೀಕರು, ಮಹಿಳೆಯರು ಸೇರಿದಂತೆ ಕೆಲವು ಮಂದಿ ವಿದೇಶಿಗರು, ಕುಂದಾಪುರ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್ ಪಿ.ಎಂ. ಸೇರಿದಂತೆ ನಗರ ಠಾಣೆ ಹಾಗೂ ಟ್ರಾಫಿಕ್ ಠಾಣೆಯ ಇಪ್ಪತ್ತಕ್ಕೂ ಅಧಿಕ ಪೊಲೀಸರು ಈ ಆರೋಗ್ಯಕ್ಕಾಗಿ ಓಟ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು.
ಕುಂದಾಪುರ ಗಾಂಧೀ ಮೈದಾನದಿಂದ ಆರಂಭಗೊಂಡ ಓಟವು ಶಾಸ್ತ್ರೀ ವೃತ್ತದ ಮೂಲಕ ಹೊಸಬಸ್ಸು ನಿಲ್ದಾಣದ ತಲುಪಿ ಪುನಃ ಶಾಸ್ತ್ರೀ ವೃತ್ತದ ಮೂಲಕ ಒಟ್ಟು 3.2 ಕಿ.ಮೀ ಸಾಗಿ ಗಾಂಧೀ ಮೈದಾನದಲ್ಲಿ ಅಂತ್ಯಗೊಂಡಿತು.
ಪ್ರೋತ್ಸಾಹದ ದೃಷ್ಠಿಯಿಂದ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಬಹುಮಾನ ಘೋಷಿಸಲಾಗಿದ್ದು ಪ್ರಥಮ ಐದು ಸಾವಿರ, ದ್ವಿತೀಯ ಮೂರು ಹಾಗೂ ತ್ರತೀಯ ಒಂದು ಸಾವಿರ ಬಹುಮಾನವಿತ್ತು. ಪುರುಷರ ವಿಭಾಗದ ಓಟದ ಸ್ಪರ್ಧೆಯಲ್ಲಿ ಕೇವಲ 11 ನಿಮಿಷದ ಅಂತರದಲ್ಲಿ ನಿಟ್ಟೆ ವಿದ್ಯಾಸಂಸ್ಥೆ ಚಿದಾನಂದ ಪ್ರಥಮ ಸ್ಥಾನಿಯಾದರು. ಕುಂದಾಪುರ ಗುರುಕುಲ ಸ್ಕೂಲಿನ ಮಂಜುನಾಥ ದ್ವಿತೀಯ ಹಾಗೂ ಮಣಿಪಾಲ ಪಿಯು ಕಾಲೇಜು ಉಡುಪಿಯ ಸಂಗಮೇಶ ತ್ರತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಅಂಬಿಕಾ ಪ್ರಥಮ, ಸವಿತಾ ದ್ವಿತೀಯ ಹಾಗೂ ಭಾರ್ಗವಿ ಕುಂದಾಪುರ ತ್ರತೀಯ, ಕುಂದಾಪುರ ಆನ್ಸ್ ಕ್ಲಬ್ ಅಧ್ಯಕ್ಷೆ ಭಾರತಿ ಶೆಟ್ಟಿ ನಾಲ್ಕನೇ ಸ್ಥಾನ ಪಡೆದರು.
ಇದೇ ವೇಳೆ ಕುಂದಾಪುರ ಉಪವಿಭಾಗಾಧಿಕಾರಿ ಚಾರುಲತಾ ಸೋಮಲ್ ಹಾಗೂ ಪುರಸಭೆ ಉಪಾಧ್ಯಕ್ಷ ನಾಗರಾಜ್ ಕಾಮಧೇನು ಹಾಗೂ ಪುರಸಭೆ ಉಪಾಧ್ಯಕ್ಷ ನಾಗರಾಜ್ ಕಾಮಧೇನು ಸೇರಿದಂತೆ ಹಲವರು ಕೆಲವು ದೂರಗಳ ಕಾಲ ಓಟದಲ್ಲಿ ಭಾಗವಹಿಸಿದ್ರು. ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಸಂಪೂರ್ಣ ಓಟದಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಕುಂದಾಪುರದ ಉಪವಿಭಾಗದ ಅಧಿಕಾರಿ ಚಾರುಲತಾ ಸೋಮಲ್ ಓಟಕ್ಕೆ ಚಾಲನೆ ನೀಡಿದರು. ಕುಂದಾಪುರ ಪುರಸಭೆ ಅಧ್ಯಕ್ಷೆ ಕಲಾವತಿ, ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಎ.ಬಿ. ಶೆಟ್ಟಿ, ನ್ಯೂ ಮೆಡಿಕಲ್ ಸೆಂಟರ್ ನಿರ್ದೇಶಕ ಡಾ. ರಂಜನ್ ಶೆಟ್ಟಿ, ದಿನಕರ ಶೆಟ್ಟಿ, ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಕಾರ್ಯದರ್ಶಿ ಸಂತೋಷ್ ಕೋಣಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಒಟ್ಟಿನಲ್ಲಿ ಕುಂದಾಪುರದಲ್ಲಿ ಇದೇ ಮೊದಲು ಎಂಬಂತೆ ಆರೋಗ್ಯಕ್ಕಾಗಿ ಓಟ ಎಂಬ ವಿನೂತನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಒಂದಷ್ಟು ಮನೋರಂಜನೆ ಜೊತೆ ಓಡುವ ಮೂಲಕ ಆರೋಗ್ಯದ ಬಗ್ಗೆಯೂ ತಿಳಿದುಕೊಂಡ್ರು.
ಚಿತ್ರ, ವರದಿ- ಯೋಗೀಶ್ ಕುಂಭಾಸಿ




























