ಮಂಗಳೂರು, ಸೆ.28 : ಪೊಲೀಸ್ ಠಾಣೆಗಳಲ್ಲಿ ದೂರುದಾರರಿಗೆ ತನಿಖೆಯ ದಿನಾಂಕವನ್ನು ತಿಳಿಸಿದ ಬಳಿಕ ಅದನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಠಾಣಾಧಿಕಾರಿಗಳಿಗೆ ಮಂಗಳೂರು ಪೊಲೀಸ್ ಕಮಿಶನರ್ ಎಸ್. ಮುರುಗನ್ ಸೂಚಿಸಿದ್ದಾರೆ. ಅವರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಕಮಿಷನರೇಟ್ ವ್ಯಾಪ್ತಿಯ ದಲಿತರ ಕುಂದು ಕೊರತೆಯ ಸಭೆಯಲ್ಲಿ ಮಾತನಾಡಿದರು.
ಠಾಣೆಗೆ ಬರುವ ದೂರುದಾರರ ಅರ್ಜಿಯನ್ನು ಸ್ವೀಕರಿಸಿದ ಬಳಿಕ, ಅವರಿಗೆ ವಿಚಾರಣೆಗೆ ಹಾಜರಾಗಲು ದಿನಾಂಕವನ್ನು ನಿಗದಿಪಡಿಸಲಾಗುತ್ತದೆ. ನಿಗದಿತ ಈ ತನಿಖಾ ದಿನವನ್ನು ಠಾಣೆಯಲ್ಲಿ ದಾಖಲು ಮಾಡಬೇಕು. ಅಲ್ಲದೆ, ಆ ದಿನದಂದು ಠಾಣೆಯಲ್ಲಿ ಠಾಣಾಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಅನಿವಾರ್ಯ ಸಂದರ್ಭದಲ್ಲಿ ಸಂಬಂಧಪಟ್ಟ ಠಾಣಾಧಿಕಾರಿ ಅದನ್ನು ಇತರರಿಗೆ ವಹಿಸಿ ದೂರು ದಾರರ ವಿಚಾರಣೆಗೆ ಯಾವುದೇ ತೊಂದರೆ ಯಾಗದಂತೆ ಕ್ರಮ ಕೈಗೊಳ್ಳಬೇಕು. ಇದನ್ನು ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕು. ಈ ಬಗ್ಗೆ ಎಸಿಪಿಗಳ ಮೂಲಕ ಮೇಲ್ವಿಚಾರಣೆ ನಡೆಸಲು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನರಿಗೆ ಅನುಕೂಲಕರವಾದ ಪ್ರದೇಶಗಳಲ್ಲಿ ಜನಸಂಪರ್ಕ ಸಭೆಯನ್ನು ಕಡ್ಡಾಯವಾಗಿ ನಡೆಸಬೇಕು. ಇದರಿಂದ ಜನರಿಗೆ ಮತ್ತು ಪೊಲೀಸ್ ಇಲಾಖೆಯ ನಡುವಿನ ಅಂತರ ಕಡಿಮೆಯಾಗುತ್ತದೆ. ಜನರು ತಮ್ಮ ಅಹವಾಲನ್ನು ಹೇಳಿಕೊಳ್ಳಲು ಅನು ಕೂಲವಾಗುತ್ತದೆ ಎಂದು ಅವರು ಹೇಳಿದರು.
ಮುಲ್ಕಿ ಪುನರೂರು ಎಂಬಲ್ಲಿ ತಮ್ಮ ಜಮೀನಿಗೆ ಸುಂದರಿ ಎಂಬವರು ಅಕ್ರಮವಾಗಿ ಪ್ರವೇಶ ಮಾಡಿ ನಮಗೆ ಹಿಂಸೆ ನೀಡುತ್ತಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಸೂಕ್ತ ವಿಚಾರಣೆ ನಡೆದಿಲ್ಲ ಎಂದು ಸುಮತಿ ಎಂಬವರು ಸಭೆಯಲ್ಲಿ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್ ಮುರುಗನ್, ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಜೆಪ್ಪುನಿಗುತ್ತು-ಕುಂಜತ್ತ ಬೈಲ್ ನಿವಾಸಿಗಳಾದ ಪರಿಶಿಷ್ಟ ಜಾತಿಯ ಶಿವಾನಂದ ಎಂಬವರ ಪತ್ನಿ ಹಾಗೂ ಅವರ ಮಕ್ಕಳ ಮೇಲೆ ಸ್ಥಳೀಯ ಕೆಲವರು ನೀಡಿದ ಸುಳ್ಳು ದೂರಿನ ಆಧಾರದಲ್ಲಿ ಕಾವೂರು ಠಾಣಾ ಉಪನಿರೀಕ್ಷಕ ಉಮೇಶ್ ದೌರ್ಜನ್ಯ ನಡೆಸಿದ್ದಾರೆ. ಮಾನಸಿಕ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದು, ಆಯೋಗ ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಪೊಲೀಸ್ ಅಧೀಕ್ಷಕರಿಗೆ ಸೂಚಿಸಿದೆ ಎಂಬ ಬಗ್ಗೆ ದೂರುದಾರರು ಕಮಿಷನರ್ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್, ಈ ಬಗ್ಗೆ ಶೀಘ್ರವಾಗಿ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
