ಕನ್ನಡ ವಾರ್ತೆಗಳು

ತೋಟಗಾರಿಕೆ ಬೆಳೆಗಳಲ್ಲಿ ಪೀಡೆನಾಶಕಗಳ ಅತಿ ಬಳಕೆಯ ದುಷ್ಪರಿಣಾಮ ಮತ್ತು ಮುನ್ನೆಚ್ಚರಿಕೆ ಕ್ರಮಗಳು.

Pinterest LinkedIn Tumblr

 hotty_culture_pto

ಮಂಗಳೂರು, ಸಪ್ಟೆಂಬರ್.09: ಬೆಳೆಗಳಿಗೆ ತಗಲುವ ವಿವಿಧ ಕೀಟ ಮತ್ತು ರೋಗಗಳ ನಿಯಂತ್ರಣಕ್ಕಾಗಿ ಈಗಾಗಲೇ ರೈತರು ಹಲವಾರು ಕೀಟನಾಶಕ ಮತ್ತು ಪೀಡೆನಾಶಕಗಳನ್ನು ಅನಿರ್ಬಂಧಿತವಾಗಿ ಬಳಸುತ್ತಿದ್ದು ವಿವಿಧ ರೀತಿಯ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ರಾಸಾಯನಿಕ ಪೀಡೆನಾಶಕಗಳನ್ನು ಸೂಕ್ತವಾಗಿ ಮತ್ತು ಮಿತವಾಗಿ ಬಳಸುವುದರಿಂದ ಅವುಗಳ ದುರ್ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಬಹುದು. ಈ ಹಿನ್ನಲೆಯಲ್ಲಿ, ಪೀಡೆ ನಾಶಕ ಗಳನ್ನು ಸೂಕ್ತವಾಗಿ ಬಳಸುವ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಅತ್ಯವಶ್ಯಕವಾಗಿರುತ್ತದೆ.

ರಾಸಾಯನಿಕ ಪೀಡೆನಾಶಕಗಳ ವಿವೇಚನಾ ರಹಿತ ಬಳಕೆಯಿಂದ, ಪರಿಸರ ಮಾಲಿನ್ಯ, ಜೈವಿಕ ಅಸಮತೋಲನ, ಪೀಡೆನಾಶಕಗಳನ್ನು ನಿರೋಧಿಸಿ ಬೆಳೆಯುವ ಸಾಮರ್ಥ್ಯ ಪಡೆದ ಕೀಟ/ ರೋಗಾಣುಗಳ ಬೆಳವಣಿಗೆ, ಉಪಕಾರಿ/ ನಿರುಪದ್ರವಿ ಕೀಟ ಹಾಗೂ ಸೂಕ್ಷ್ಮಾಣುಜೀವಿಗಳ ವಿನಾಶ, ಈ ಹಿಂದೆ ಅಷ್ಟೊಂದು ಪ್ರಾಮುಖ್ಯವಾಗಿಲ್ಲದ ಕೀಟ/ ರೋಗಾಣುಗಳು ಈಗ ಪ್ರಮುಖ ಪೀಡೆಯಾಗಿ ಪರಿವರ್ತನೆಗೊಳ್ಳಬಹುದು, ಕೃಷಿ ಉತ್ಪನ್ನಗಳಲ್ಲಿ ಉಳಿಯುವ ರಾಸಾಯನಿಕ ಪೀಡೆನಾಶಕಗಳ ಶೇಷಾಂಶಗಳಿಂದ ಪ್ರಾಣಿಗಳು ಹಾಗೂ ಮನುಷ್ಯರಲ್ಲಿ ಆರೋಗ್ಯ ಸಂಬಂಧಿ ತೊಂದರೆಗಳು ಮುಂತಾದ ದುಷ್ಪರಿಣಾಮಗಳು ಕಂಡುಬರುತ್ತವೆ
ಈ ದುಷ್ಪರಿಣಾಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಗ್ರ ಪೀಡೆ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯ. ಸಮಗ್ರ ಪೀಡೆ ನಿರ್ವಹಣೆ ಅಂದರೆ ಬೆಳೆಗಳಿಗೆ ಬರುವ ಎಲ್ಲಾ ಪ್ರಮುಖ ಕೀಟ ಮತ್ತು ರೋಗಗಳನ್ನು ಉತ್ತಮ ಬೇಸಾಯ/ ಕೃಷಿ ಪದ್ಧತಿ, ಜೈವಿಕ ವಿಧಾನ, ಯಾಂತ್ರಿಕ ವಿಧಾನ ಮತ್ತು ರಾಸಾಯನಿಕ ಔಷಧಗಳನ್ನು ಸಮರ್ಪಕ ಬಳಕೆಯಿಂದ ಯಶಸ್ವಿಯಾಗಿ ಹತೋಟಿ ಮಾಡುವುದು.
1.. ಕೃಷಿ ಮಾಡಲಿಚ್ಚಿಸುವ ಬೆಳೆಗಳ ಬೇಸಾಯ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಉತ್ತಮ ಕೃಷಿ ಪದ್ಧತಿಗಳು/ ಬೇಸಾಯ ಕ್ರಮಗಳನ್ನು ಅನುಸರಿಸಬೇಕು:
* ಭೂಮಿಯನ್ನು ಆಳವಾಗಿ ಉಳುಮೆ ಮಾಡಿ ಒಂದರಿಂದ ಎರಡು ವಾರಗಳ ಕಾಲ ಸೂರ್ಯನ ಬಿಸಿಲಿಗೆ ಒಡ್ಡುವುದು.
* ಹಿಂದಿನ ಬೆಳೆಯ ಅಳಿದುಳಿದ ತ್ಯಾಜ್ಯಗಳನ್ನು ಮತ್ತು ಕಸಕಡ್ಡಿಗಳನ್ನು ಸೂಕ್ತವಾಗಿ ವಿಲೇವರಿಮಾಡಿ ಶುಚಿತ್ವ ಕಾಪಾಡಬೇಕು.
* ಮಣ್ಣು ಪರೀಕ್ಷ್ಷೆ ಆಧಾರದ ಮೇಲೆ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಮತ್ತು ಸಮಯದಲ್ಲಿ ಕೊಟ್ಟಿಗೆ ಗೊಬ್ಬರ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಗಿಡಗಳಿಗೆ ಒದಗಿಸುವುದು.
* ಪ್ರಾಮಾಣೀಕೃತ ಆರೋಗ್ಯವಂತ ಬೀಜ/ ಸಸಿಗಳನ್ನು ಬಿತ್ತನೆ /ನಾಟಿಗೆ ಬಳಸುವುದು.
* ಬಿತ್ತನೆ/ ನಾಟಿಗೆ ಮುಂಚೆ ಮುಂಜಾಗ್ರತಾ ಕ್ರಮವಾಗಿ ಜೈವಿಕ/ ರಾಸಾಯನಿಕ ಪೀಡೆನಾಶಕಗಳಿಂದ ಬೀಜೋಪಚಾರ ಮಾಡಿ ಬಿತ್ತನೆಗೆ ಬಳಸುವುದು.
* ಸೂಕ್ತವಾದ ಪ್ರಮಾಣದಲ್ಲಿ ಮತ್ತು ಪದ್ಧತಿಯಲ್ಲಿ ಬೆಳೆಗಳಿಗೆ ನೀರನ್ನು ಒದಗಿಸುವುದು.
* ಸೂಕ್ತವಾದ ಸಮಯದಲ್ಲಿ ಬಿತ್ತನೆ/ ನಾಟಿ ಹಾಗೂ ಕೊಯ್ಲನ್ನು ಮಾಡುವುದು.
* ಕಳೆ ನಿರ್ವಹಣಿ, ಸೂಕ್ತವಾಗಿ ಮಾಡುವುದು.
* ಬೆಳೆ ಪರಿವರ್ತನೆ ಮಾಡುವುದು.
* ಮುಖ್ಯ ಬೆಳೆಯಲ್ಲಿ ಅಂತರ ಬೆಳೆ ಅಥವಾ ಮಿಶ್ರ ಬೆಳೆ ಬೇಸಾಯ ಕ್ರಮವನ್ನು ಅನುಸರಿಸುವುದು.
* ಬೆಳೆಯ ಸುತ್ತ ಗಡಿ ಭಾಗದಲ್ಲಿ ಮೋಹಕ ಬೆಳೆಗಳನ್ನು ಮುಖ್ಯ ಬೆಳೆಯ ಬಿತ್ತನೆಗೆ ೧೫-೨೦ದಿನ ಮುಂಚಿತವಾಗಿ ಬೆಳೆಸುವುದು.

2. ಯಾಂತ್ರಿಕ ನಿರ್ವಹಣೆ ಕ್ರಮಗಳು:
* ಕಾಲಕಾಲಕ್ಕೆ ಬೆಳೆಗಳನ್ನು ಪರಿವೀಕ್ಷಿಸಿ, ತೀವ್ರವಾಗಿ ರೋಗ/ ಕೀಟ ಭಾದೆಗೊಳಗಾದ ಮರ ಗಿಡಗಳನ್ನು ಕೂಡಲೇ ಬುಡ ಸಮೇತ ಕಿತ್ತು ವಿನಾಶಗೊಳಿಸಬೇಕು.
* ಪಕ್ಷಿಗಳಿಗೆ ಅನುಕೂಲವಾಗುವಂತೆ ಬಿದಿರಿನ / ಮರದ ಅಟ್ಟಣಿಗೆಗಳನ್ನು ಹೊಲದಲ್ಲಿ ಅಲ್ಲಲ್ಲಿ ನಿರ್ಮಿಸುವುದು. ಇದರಿಂದ ಕೀಟ ಭಕ್ಷಕ ಪಕ್ಷಿಗಳ ಚಟುವಟಿಕೆಗೆ ಅನುಕೂಲವಾಗುತ್ತದೆ.
* ಇದೇ ರೀತಿ ಬೆಳಕಿನ ಆಕರ್ಷಕ ಬಲೆಗಳು/ ನಿರ್ದಿಷ್ಟ ಸಮ್ಮೋಹಕ ಬಲೆಗಳನ್ನು ಬಳಸಿ ಉಪದ್ರವ ಕೀಟಗಳನ್ನು ನಿಯಂತ್ರಣದಲ್ಲಿಡಬಹುದು.

3. ಜೈವಿಕ ನಿರ್ವಹಣಾ ಕ್ರಮಗಳು:
* ಪ್ರತಿ ಬಾರಿ ರಾಸಾಯನಿಕ ಪೀಡೆನಾಶಕಗಳನ್ನು ಬಳಸುವ ಬದಲು ಸಸ್ಯಜನ್ಯ ಬೇವು ಮತ್ತು ಹೊಂಗೆ ಆಧಾರಿತ ಪೀಡೆನಾಶಕಗಳನ್ನು ಬಳಸುವುದು.
* ಉಪಯುಕ್ತ ಶಿಲೀಂಧ್ರ ಜೈವಿಕ ನಾಶಕಗಳಾದ ಟ್ರೈಕೋಡರ್ಮಾ, ವರ್ಟಿಸಿಲಿಯಂ, ಬೆವೆರಿಯಾ, ಮೆಟಾರೈಜಿಯಂ ಪ್ರಬೇಧಗಳನ್ನು ಹಾಗೂ ಕೆಲವು ದುಂಡಾಣು ಪ್ರಬೇಧಗಳಾದ ಸುಡೋಮೊನಾಸ್ ಪ್ಲುರೋಸೆನ್ಸ್, ಬ್ಯಾಸಿಲಸ್, ಪ್ಯಾಶ್ಚುರಿಯಾಗಳನ್ನು ವಿವಿಧ ರೋಗ ಮತ್ತು ಕೀಟಾಣುಗಳನ್ನು ತಡೆಗಟ್ಟಲು ಬಳಸಬಹುದು.

4. ರಾಸಾಯನಿಕ ನಿರ್ವಹಣಾಕ್ರಮಗಳು:
ಈ ಮೇಲೆ ತಿಳಿಸಿರುವ ಕ್ರಮಗಳ ಪಾಲನೆಯ ಹೊರತಾಗಿಯೂ ಕೀಟಾಣು ಅಥವಾ ರೋಗಾಣುವಿನ ಸಂಖ್ಯೆಯು ಹಾನಿಕಾರಕ ಪ್ರಮಾಣದ ಗಡಿಯನ್ನು ದಾಟಿದ ಸಂದರ್ಭದಲ್ಲಿ ರಾಸಾಯನಿಕ ಪೀಡೆನಾಶಕಗಳನ್ನು ಕೊನೆಯ ಅಸ್ತ್ರವಾಗಿ ಉಪಯೋಗಿಸಬೇಕು. ಆದರೆ ಈ ರಾಸಾಯನಿಕ ಪೀಡೆನಾಶಕಗಳನ್ನು ಉಪಯೋಗಿಸುವ ಮುಂಚೆ ಅವುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವುದು ಬಹಳ ಮುಖ್ಯ.
* ಈ ಸಸ್ಯ ಸಂರಕ್ಷಣಾ ಔಷಧಗಳನ್ನು ಬೆಳೆಗಳಿಗೆ ಸಿಂಪಡಿಸುವ ಮುನ್ನ ಕೃಷಿ/ ತೋಟಗಾರಿಕೆ ವಿಜ್ಞಾನಿಗಳು ಅಥವಾ ಸಂಬಂಧಪಟ್ಟ ಕೃಷಿ/ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಸಲಹೆಯನ್ನು ಪಡೆದು, ಆಯಾ ಬೆಳೆಗಳಿಗೆ ಮತ್ತು ರೋಗ/ ಕೀಟಗಳಿಗೆ ತಕ್ಕಂತೆ ಸುಧಾರಿತ ಬೇಸಾಯ ಕ್ರಮಗಳಲ್ಲಿ ಸೂಚಿಸಿರುವಂತೆ ಸರಿಯಾದ ಪೀಡೆನಾಶಕಗಳನ್ನು ನಿಗದಿತ ಪ್ರಮಾಣದಲ್ಲಿ ಬಳಸಬೇಕು.
* ಯಾವುದೇ ಬಹಿಷ್ಕೃತ/ ಅನಧಿಕೃತ ಪೀಡೆನಾಶಕಗಳನ್ನು ಬೆಳೆಗಳಿಗೆ ಉಪಯೋಗಿಸಬಾರದು.
* ಅವಧಿ ಮೀರಿದ ಪೀಡೆನಾಶಕಗಳನ್ನು ಬಳಸಬಾರದು.
* ಪೀಡೆನಾಶಕಗಳನ್ನು ಮಕ್ಕಳು ಹಾಗೂ ಪ್ರಾಣಿ ಪಕ್ಷಿಗಳಿಗೆ ಎಟುಕದಂತೆ ಕ್ರಮವಹಿಸಿ ಸ್ವಚ್ಛ ಹಾಗೂ ಸುರಕ್ಷಿತವಾದ ಸ್ಥಳಗಳಲ್ಲಿ ಶೇಖರಿಸಿಡಬೇಕು.
* ಸಿಂಪರಣೆಯ ನಂತರ ಕೈ, ಕಾಲು, ಮುಖಗಳನ್ನು ಸೋಪು ಹಚ್ಚಿ ತೊಳೆದುಕೊಳ್ಳಬೇಕು. ಅದೇ ರೀತಿ ಉಪಯೋಗಿಸಿದ ಪರಿಕರಗಳನ್ನು ಸ್ವಚ್ಛಗೊಳಿಸಬೇಕು.

Write A Comment