ಬೆಂಗಳೂರು, ಸೆ.9: ಹೃದಯವಾಹಿನಿ ಮಂಗಳೂರು ಮತ್ತು ಶಾರ್ಜಾದ ಕರ್ನಾಟಕ ಸಂಘದ ವತಿಯಿಂದ ನವೆಂಬರ್ 19 ಮತ್ತು 20ರಂದು ಶಾರ್ಜಾದ ಅಲ್ ಬೂಮ ವಿಲೇಜ್‌ನಲ್ಲಿ 12ನೆ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಏರ್ಪಡಿಸಲಾಗಿದೆ ಎಂದು ಸಮ್ಮೇಳನ ಸಮಿತಿಯ ಕರ್ನಾಟದಕ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ತಿಳಿಸಿದ್ದಾರೆ.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಅನಿವಾಸಿ ಉದ್ಯಮಿ ಡಾ.ಬಿ.ಆರ್. ಶೆಟ್ಟಿ, ಶಾಸಕ ಬಿ.ಎ. ಮೊಯಿದೀನ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಸೆ.20ರಂದು ನಡೆಯುವ ಸಮಾರೋಪ ಸಮಾರಂದಲ್ಲಿ ಸಚಿವರಾದ ವಿನಯ ಕುಮಾರ್ ಸೊರಕೆ, ಎಚ್. ಆಂಜನೇಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ, ಮೈಸೂರು ವಿವಿ ಕುಲಪತಿ ಡಾ. ಎಚ್. ರಂಗಪ್ಪ, ಸಾಹಿತಿ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಕವಿಗೋಷ್ಠಿ, ಹಾಸ್ಯ ಗೋಷ್ಠಿ, ಮಾಧ್ಯಮ ಗೋಷ್ಠಿ, ಅನಿವಾಸಿ ಕನ್ನಡಿಗರ ಗೋಷ್ಠಿ ನಡೆಯಲಿದೆ. ಅದೇ ರೀತಿ ಭರತನಾಟ್ಯ, ಜಾನಪದ ನೃತ್ಯ, ನೃತ್ಯ ರೂಪಕ, ಯಕ್ಷಗಾನ ಕಲೆಗಳ ಪ್ರದರ್ಶನದ ಜತೆಗೆ ವಸ್ತುಪ್ರದರ್ಶನ, ಪುಸ್ತಕ ಮೇಳ ನಡೆಯಲಿದೆ ಎಂದು ಅವರು ತಿಳಿಸಿದರು.
ವಿದೇಶಿಗಳಲ್ಲಿನ ಅನಿವಾಸಿ ಭಾರತೀಯರನ್ನು ಮತ್ತು ಕನ್ನಡಿಗರನ್ನು ಒಂದು ಗೂಡಿಸುವ ಪ್ರಯತ್ನ ಇದಾಗಿದ್ದು, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅನಿವಾಸಿ ಕನ್ನಡಿಗರು ಭಾಗವಹಿಸಲ್ಲಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾರ್ಜಾದ ಕರ್ನಾಟಕ ಸಂಘದ ಅಧ್ಯಕ್ಷ ಸತೀಶ್ ವೆಂಕಟರಮಣ, ಸಮ್ಮೇಳನ ಸಮಿತಿ ಕರ್ನಾಟಕದ ಗೌರವಾಧ್ಯಕ್ಷ ಡಾ. ಮುನೀರ್ ಹಾಜಿ, ಉಪಾಧ್ಯಕ್ಷ ಪ್ರೊ. ಎಂ.ಬಿ. ಕುದರಿ, ಪದಾಧಿಕಾರಿ ಪಲ್ಲವಿ ಮಣಿ ಮತ್ತು ಇತರರು ಹಾಜರಿದ್ದರು.












