ಕನ್ನಡ ವಾರ್ತೆಗಳು

ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ : ಶ್ರೀ ರಾಮ ಸೇನೆಯ ಮಾಜಿ ಸಂಚಾಲಕ ಪ್ರಸಾದ್ ಅತ್ತಾವರ್ ಬಂಧನ

Pinterest LinkedIn Tumblr

Prasad_Attavara_Pics

File Photo

ಮಂಗಳೂರು: ಶ್ರೀ ರಾಮ ಸೇನೆಯ ಮಾಜಿ ನಾಯಕ ಪ್ರಸಾದ್ ಅತ್ತಾವರ್ (39) ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಾದ್ ಅತ್ತಾವರ್ ಅವರನ್ನು ಗುರುವಾರ ಮಂಗಳೂರಿನಲ್ಲಿ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಭಾನುವಾರ ಧಾರವಾಡದ ಕಲ್ಯಾಣ್ ನಗರದಲ್ಲಿ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರ ಮನೆಗೆ ಆಗಮಿಸಿದ್ದ ಇಬ್ಬರು ದುಷ್ಕರ್ಮಿಗಳು ಡಾ.ಕಲಬುರ್ಗಿಯವರನ್ನು ಗುಂಡಿಟ್ಟು ಹತ್ಯೆಗೈದಿದ್ದರು. ಈ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಡಾ.ಕಲಬುರ್ಗಿ ಅವರ ಹತ್ಯೆ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಪ್ರಸಾದ್ ಅತ್ತವಾರ್ ಪಾತ್ರವಿದೆಯಾ ಎಂಬ ಬಗ್ಗೆ ತನಿಖೆ ನಡೆಸುವ ಹಿನ್ನೆಲೆಯಲ್ಲಿ ಪ್ರಸಾದ್ ಅತ್ತವಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Prasad_attavar_3915

ಬುಧವಾರ ಮಧ್ಯಾಹ್ನ ಸಿಸಿಬಿ ಪೊಲೀಸರು ಪ್ರಸಾದ್ ಅತ್ತಾವರ್ ಅವರನ್ನು ಅವರ ಮನೆಯಲ್ಲೇ ವಶಕ್ಕೆ ಪಡೆದು,ವಿಚಾರಣೆ ನಡೆಸಿದ್ದರು. ಇದೀಗ ಇಂದು ಮತ್ತೆ ಅವರನ್ನು ವಶಕ್ಕೆ ಪಡೆದುಕೊಂಡು ಬಂದರು ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಮಂಗಳೂರಿನಲ್ಲಿ ನಡೆದ ಪಬ್ ದಾಳಿಯ ಪ್ರಮುಖ ಆರೋಪಿಯಾಗಿದ್ದ ಪ್ರಸಾದ್ ಅತ್ತಾವರ್ ಹಲವು ವರ್ಷಗಳ ಕಾಲ ಮುತಾಲಿಕ್ ನೇತ್ರತ್ವದ ಶ್ರೀ ರಾಮ ಸೇನೆಯ ಸಂಚಾಲಕರಾಗಿ ಕಾರ್ಯ ನಿರ್ವಾಹಿಸುತ್ತಿದ್ದರು. ಬಳಿಕ ಸುಮಾರು ನಾಲ್ಕು ವರ್ಷಗಳಿಂದ ಅಂತರ್‌ಕಲಹದಿಂದ ಶ್ರೀರಾಮ ಸೇನೆಯಿಂದ ಹೊರಬಂದಿರುವ ಪ್ರಸಾದ್ ಅತ್ತಾವರ ತನ್ನದೇ ಆದ ರಾಮಸೇನೆ ಎಂಬ ಸಂಘಟನೆಯೊಂದನ್ನು ಕಟ್ಟಿಕೊಂಡು ಹಿಂದೂ ಪರ ಹೋರಾಟದಲ್ಲಿ ತೊಡಗಿದ್ದರು.

ಇದೀಗ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಾದ್ ಅತ್ತಾವರ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆಗೊಳಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.

ಕಲಬುರ್ಗಿ ಹತ್ಯೆ ಕುರಿತು ಜಾಲತಾಣದಲ್ಲಿ ಸಮರ್ಥನೀಯ ಹೇಳಿಕೆ : ಅತ್ತಾವರ್ ವಿಚಾರಣೆ

ಇನ್ನೊಂದು ಮೂಲದ ಪ್ರಕಾರ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಮರ್ಥನೀಯ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ಪ್ರಸಾದ್ ಅತ್ತಾವರ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ವಿಶ್ವಾಸನೀಯ ಮೂಲಗಳಿಂದ ತಿಳಿದು ಬಂದಿದೆ.

ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ತಾಣದಲ್ಲಿ ಸಮರ್ಥನೀಯ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಭುವಿತ್ ಶೆಟ್ಟಿ ಎಂಬಾತನನ್ನು ಮೂರು ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದರು.

ಇದೀಗ ಅದೇ ರೀತಿಯ ಇನ್ನೊಂದು ಸಾಮಾಜಿಕ ತಾಣವಾದ ವಾಟ್ಸ್ಅಪ್‌‌ನಲ್ಲಿ ಕಲಬುರ್ಗಿ ಹತ್ಯೆಯನ್ನು ಪ್ರಸಾದ್ ಅತ್ತಾವರ್ ಸಮರ್ಥಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.

Write A Comment