ಕನ್ನಡ ವಾರ್ತೆಗಳು

ಹೆಂಗಸರೇ ಹುಷಾರ್..! 220ಸಿ.ಸಿ ಫಲ್ಸರ್ ಬೈಕಿನಲ್ಲಿ ಬಂದು, ಚಿನ್ನ ಕದ್ದು ಪರಾರಿಯಾಗ್ತಾರೇ! ನಟೋರಿಯಸ್ ಇರಾನಿ ಗ್ಯಾಂಗ್ ಸುತ್ತ…

Pinterest LinkedIn Tumblr

ಉಡುಪಿ: ದೇಶ ಹಾಗೂ ರಾಜ್ಯದ ಹಲವು ಕಡೆಗಳಲ್ಲಿ ಬೆಚ್ಚಿ ಬೇಳಿಸಿದ ನಟೋರಿಯಸ್ ಗ್ಯಾಂಗ್ ಒಂದು ಇದೀಗಾ ಕರಾವಳಿಯಲ್ಲೂ ತನ್ನ ಕಬಂಧ ಬಾಹು ಚಾಚಿದೆಯಂತೆ. ಹೌದು.. ಹೀಗೊಂದು ಬೆಚ್ಚಿಬೀಳಿಸುವ ಸಂಗತಿ ಇಡೀ ಕರಾವಳಿ ಜಿಲ್ಲೆಗಳನ್ನೊಳಗೊಂಡಂತೆ ಭಟ್ಕಳ ಹಾಗೂ ಉತ್ತರಕನ್ನಡ ಜಿಲೆಯಲ್ಲೂ ಪೊಲೀಸರು ಹೈ ಅಲರ್ಟ್ ಆಗಿರುವ ಹಾಗೆ ಮಾಡಿದೆ. ಅಷ್ಟಕ್ಕೂ ಆ ಗ್ಯಾಂಗ್ ಬೇರಾವುದೂ ಅಲ್ಲ…ಅದೇ ಇರಾನಿ ಗ್ಯಾಂಗ್.!

ಇತ್ತೀಚಿನ ಕೆಲ ವರ್ಷಗಳಿಂದ ದೇಶಾದ್ಯಂತ ತಲ್ಲಣ ಮೂಡಿಸಿರುವ ಇರಾನಿ ಗ್ಯಾಂಗ್ ದ.ಕ. ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಯೊಳಗೂ ನುಸುಳಿ ತನ್ನ ಕೈಚಳಕ ತೋರಿಸಲಾರಂಭಿಸಿದೆ. ಇದರ ಆರಂಭವೆಂಬಂತೆ ಆಗಸ್ಟ್ 19ರಂದು ಕಾರವಾರದಲ್ಲಿ ಆರಂಭಗೊಂಡ ಈ ಇರಾನಿ ಗ್ಯಾಂಗ್ ಸರಗಳ್ಳತನ ಭಟ್ಕಳ ಮೂಲಕ ಸಾಗಿ ಕುಂದಾಪುರ ಹಾಗೂ ಸುರತ್ಕಲ್ ಹಾಗೂ ಮಂಗಳೂರಿನ ಒಂದೆರಡು ಭಾಗದಲ್ಲಿಯೂ ನಡೆಯಿತು. ಎರಡೇ ದಿನಗಳಲ್ಲಿ ಆರಕ್ಕೂ ಅಧಿಕ ಸರಕಳ್ಳತನ ಪ್ರಕರಣಗಳು ಈ ನಟೋರಿಯಸ್ ಗ್ಯಾಂಗ್ ಮೂಲಕ ನಡೆದಿತ್ತು. ಅಲ್ಲಿಂದ ಮುಂದೆ ಸಾಗಿದ ಇವರ ದುಷ್ಕ್ರತ್ಯವೂ ನಿರಂತರ ಎಗ್ಗಿಲ್ಲದೇ ಸಾಗುತ್ತಿದ್ದು ಕಾರ್ಕಳ ಹಾಗೂ ಮಣಿಪಾಲ ಆಸುಪಾಸಿನಲ್ಲಿ ಒಂದೆರಡು ದಿನಗಳ ಹಿಂದೆಯೂ ಸರಕಳ್ಳತನ ನಡೆದಿದೆ.

 Irani Gang_Chain_Snatchers (3) Irani Gang_Chain_Snatchers (2) Irani Gang_Chain_Snatchers (1)

( ಬೈಕಿನಲ್ಲಿ ಇರಾನಿ ಗ್ಯಾಂಗ್ ಸದಸ್ಯರು)

ಏನಿದು ಇರಾನಿ ಗ್ಯಾಂಗ್: ದರೋಡೆ ಹಾಗೂ ಸರಕಳ್ಳತನವನ್ನೇ ಪ್ರೋಪೇಶನ್ ಆಗಿಸಿಕೊಂಡಿರುವ ಈ ಇರಾನಿ ಗ್ಯಾಂಗ್ ಟಾರ್ಗೇಟ್ ಮಾಡೋದೆ ಮಹಿಳೆಯರನ್ನು. ಈ ಹಿಂದೆ ಬೆಂಗಳುರು ಮೊದಲಾದ ನಗರಗಳಲ್ಲಿಯೇ ತಮ್ಮ ಸಾಮ್ರಾಜ್ಯವನ್ನು ಕಟ್ಟಿಕೊಂಡು ಅಲ್ಲಿಯೇ ತಮ್ಮ ನಟೋರಿಯಸ್ ವ್ರತ್ತಿಯನ್ನು ಮಾಡಿಕೊಂಡಿದ್ದ ಈ ಇರಾನಿ ಗ್ಯಾಂಗ್ ಇತ್ತೀಚಿನ ಕೆಲವು ವರ್ಷಗಳಲ್ಲಿ ಕರಾವಳಿಯ ಉಭಯ ಜಿಲ್ಲೆಗಳಿಗೆ ಲಗ್ಗೆಯಿಟ್ಟು ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದೆ. ಒಂಟಿ ಮಹಿಳೆಯರನ್ನು ಕಂಡು ಟಾರ್ಗೇಟ್ ಮಾಡುವ ಈ ಖದೀಮರು ಮಿಂಚಿನ ವೇಗದಲ್ಲಿ ಬೈಕಿನಲ್ಲಿ ಆಗಮಿಸಿ ಮಹಿಳೆಯರ ಗಮನ ಸೆಳೆದು ಅದೇ ಮಿಂಚಿನ ವೇಗದಲ್ಲಿ ಶರವೇಗದಿಂದ ಕಣ್ಮರೆಯಾಗುತ್ತಾರೆ. ಸರ ಕಳೆದುಕೊಂಡವರು ಎಚ್ಚೆತ್ತುಕೊಂಡು ಕೂಗುವಷ್ಟರಲ್ಲಿ ಅದೆಷ್ಟೋ ದೂರ ಸಾಗುತ್ತಾರೆ ಈ ಸರ ಬೇಟೆಗಾರರು. ಇನ್ನು ಜನದಟ್ಟಣೆ, ಪೊಲೀಸರ ನಾಕಾಬಂದಿಯನ್ನು ತಪ್ಪಿಸಿಕೊಂಡು ಹೋಗುವ ಚಾಕಾಚಕ್ಯತೆ ಇವರಲ್ಲಿದೆ ಎಂದರೇ ಅಚ್ಚರಿಯ ಮಾತಲ್ಲ.

ಬೆಚ್ಚಿಬೀಳಿಸುವ ಬೇಟೆಯ ಕಾರ್ಯವೈಖರಿ: ದುಬಾರಿ ಬೆಲೆಯ ಹಾಗೂ ಉತ್ತಮ ಪಿಕ್ಅಪ್ ಇರುವಂತಹ ಬೈಕುಗಳನ್ನೇ ಅದರಲ್ಲಿಯೂ ಫಲ್ಸರ್ ಮೊದಲಾದ ಬೈಕುಗಳನ್ನೇರುತ್ತಾರೆ. ಒಂದು ಬೈಕಿನಲ್ಲಿ ಇಬ್ಬರು ಗ್ಯಾಂಗ್ ಸದಸ್ಯರು ಮುಂದೆ ಹೋದರೇ ಅವರಿಗೆ ಎಸ್ಕಾರ್ಟ್ ನೀಡಲು ಹಾಗೂ ಮಾರ್ಗಸೂಚಿ ಸಹಾಯಕ್ಕಾಗಿ ಎಸ್ಟೀಮ್ ಕಾರೊಂದು ಇವರ ಆಸುಪಾಸಿನಲ್ಲಿಯೇ ಸಂಚರಿಸುತ್ತದೆ. ಮುಂದಿರುವ ಬೈಕ್ ಸವಾರ ಹೆಲ್ಮೇಟ್ ಧರಿಸಿ ಕುಳಿತರೇ ಹಿಂಬದಿ ಸವಾರ ಬೈಕ್ ಸವಾರನಿಗೆ ಅಂಟಿ ಕುಳಿತವನಂತೆ ಕುಂತಿರುತ್ತಾನೆ. ಯಾವ ಕ್ಷಣದಲಿಯೂ ತಮ ಮುಖ ಪ್ರದರ್ಶನವಾಗದಂತೆ ಬಲು ಎಚ್ಚರಿಕೆಯಿಂದಲೇ ಕಾರ್ಯಾಚರಣೆಗಿಳಿಯುವ ಇವರು ಗಾಂಜಾ ಸೇವನೆಯನ್ನು ಅತಿಯಾಗಿಯೇ ಮಾಡಿರುತ್ತಾರೆಂದು ಮೂಲಗಳು ತಿಳಿಸಿದೆ. ಗಾಂಜಾ ಸೇವಿಸಿಯೇ ಬೈಕು ಓಡಿಸುವ ಇವರು 110-130 ಕಿ.ಮೀ. ವೇಗದಲ್ಲಿಯೇ ಸಾಗುವ ಮೂಲಕ ತಮ್ಮ ಚಿನ್ನದ ಬೇಟೆಗಿಳಿಯುತ್ತಾರೆ. ಪ್ರಾಣಭಯವೂ ಇಲ್ಲದೇ ಇವರು ಬೈಕ್ ಸವರಿ ಮಾಡುತ್ತಾರೆ.

vlcsnap-2015-09-03-17h03m50s74

(ಉಡುಪಿ ಎಸ್ಪಿ ಕೆ. ಅಣ್ಣಾಮಲೈ)

ಪೊಲೀಸರ ಎದುರೇ ಎಸ್ಕೇಪ್: ಭಟ್ಕಳದಲ್ಲಿ ಆಗಸ್ಟ್ 19ರಂದು ಬೆಳಿಗ್ಗೆ 10.30ಕ್ಕೆ ಸರಗಳ್ಳತನವಾಗುತ್ತಿದ್ದಂತೆ ಅಲ್ಲಿನ ಪೊಲೀಸರು ಕುಂದಾಪುರ ಸೇರಿದಂತೆ ವಿವಿಧಠಾಣೆಗಳಿಗೆ ಮಾಹಿತಿ ನೀಡುತ್ತಾರೆ. ಮಧ್ಯಾಹ್ನ 11.30 ಸುಮಾರಿಗೆ ಕುಂದಾಪುರದ ತಲ್ಲೂರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಸಮೀಪ ಮಹಿಳೆಯೋರ್ವರ ಕರಿಮಣಿಯನ್ನು ಲಪಟಾಯಿಸಿದ ಈ ಗ್ಯಾಂಗ್ ತಮ್ಮ 220 ಸಿ.ಸಿ. ಫಲ್ಸರ್ ಬೈಕಿನಲ್ಲಿ ಕುಂದಾಪುರದತ್ತ ಸಾಗುತ್ತಾರೆ. ಇದೇ ವೇಳೆಗೆ ಇವರನ್ನು ಹಿಡಿಯಲೇಬೇಕೆನ್ನುವ ನಿಟ್ಟಿನಲ್ಲಿ ಕುಂದಾಪುರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ನಾಕಾಬಂದಿ ಹಾಕಿ ಬ್ಯಾರಿಗೇಟರುಗಳನ್ನು ಅಡ್ಡವಿಟ್ಟು ಕಾದಿದ್ದರು. ಅಷ್ಟೊತ್ತಿಗಾಗಲೇ ಫಲ್ಸರ್ ಬೈಕು ವೇಗವಾಗಿ ಬಂದು ಪೊಲೀಸರ ಕಣ್ಣೇದುರೇ ಮಿಂಚಿನಂತೆ ಸಾಗಿ ಕಣ್ಮರೆಯಾಗಿತ್ತು. ಈ ವೇಳೆ ಪೊಲೀಸ್ ಅಢಿಕಾರಿಗಳು ಅವರನ್ನು ಹಿಡಿಯುವ ಸಲುವಾಗಿ ಹರಸಾಹಸವನ್ನೇ ಮಾಡಿದರೂ ಕೂಡ ಅದು ವಿಫಲಾವಾಗಿತ್ತು. ಇಲ್ಲಿಂದೆ ಮುಂದೆ ಸಾಗಿದ ತಂಡವೂ ಮಂಗಳೂರು ಆಸುಪಾಸಿನಲ್ಲಿ ಅದೇ ದಿನ ಒಂದೆರಡು ಸರಗಳ್ಳತನ ಮಾಡಿದ್ದು ಇವರ ನಟೋರಿಯಸ್ ಕಾರ್ಯವೈಖರಿಯನ್ನು ತೋರಿಸುತ್ತದೆ.

ಪೊಲೀಸ್ ಅಲರ್ಟ್- ಎಲ್ಲೆಡೆ ತಪಾಸಣೆ: ಆಗಸ್ಟ್ ಆಗಸ್ಟ್ 19ರ ಘಟನೆ ಬಳಿಕ ಉಡುಪಿ ಪೊಲೀಸರು ಎಚ್ಚೆತ್ತುಕೊಂಡು ಇರಾನಿ ಗ್ಯಾಂಗ್ ಬಂಧನಕ್ಕೆ ಬಲೆಬೀಸಿದ್ದಾರೆ. ಒಂದೆರಡು ದಿನಗಳ ಹಿಂದೆಯೂ ಉಡುಪಿ ಆಸುಪಾಸಿನಲ್ಲಿ ಸರಗಳ್ಳತನ ಪ್ರಕರಣ ನಡೆದಿದ್ದು ಪೊಲೀಸ್ ಇಲಾಖೆ ಇನ್ನಷ್ಟು ಅಲರ್ಟ್ ಆಗಿದೆ. ಕುಂದಾಪುರ, ಉಡುಪಿ, ಕಾರ್ಕಳ, ಬೈಂದೂರು ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿಯೂ ನಿತ್ಯ ವಾಹನ ತಪಾಸಣೆ ನಡೆಸಲಾಗುತ್ತಿದೆ. ತನಿಖೆ ಚುರುಕುಗೊಂಡಿದೆ, ಶೀಘ್ರವೇ ಆರೋಪಿಗಳನ್ನು ಬಂಧಿಸ್ತೇವೆ ಎಂದು ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಅವರು ತಿಳಿಸಿದ್ದಾರೆ.

Write A Comment