ಮಂಗಳೂರು,ಸೆ.03 : ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಕೈ ಹಾಗೂ ಕೈಬೆರಳು ಕತ್ತರಿಸಿಕೊಂಡು ನಗರದ ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆಳ್ತಂಗಡಿ ತಾಲೂಕಿನ ನೆರಿಯಾ ಗ್ರಾಮದ ಸುಂದರ ಮಲೆಕುಡಿಯ ಅವರನ್ನು ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಗುರುವಾರ ಬೇಟಿಯಾಗಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭ ಸುದ್ಧಿಗಾರರ ಜೊತೆ ಮಾತನಾಡಿದ ಸೀತಾರಾಮ್ ಯೆಚೂರಿಯವರು, ಬುಡಕಟ್ಟು ಜನಾಂಗದ ವಿರುದ್ಧ ನಡೆಯುತ್ತಿರುವ ದೌರ್ಜನ್ಯಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ. ಭೂಮಾಲೀಕರ ದೌರ್ಜ್ಯನಕ್ಕೆ ಒಳಗಾಗಿರುವ ಸುಂದರ ಮಲೆಕುಡಿಯರಂತೆ ಇನ್ನೂ ಹಲವು ದೌರ್ಜನ್ಯಗಳು ಮುಂದುವರಿದಿವೆ. ಈಗಾಗಲೇ ಸಂಸತ್ತಿನಲ್ಲಿ ಬುಡಕಟ್ಟು ಜನಾಂಗದ ಭೂಮಿ ಹಕ್ಕಿಗೆ ಸಂಬಂಧಿಸಿ ಮಸೂದೆ ಅಂಗೀಕರವಾಗಿದ್ದು ಅದನ್ನು ರಾಜ್ಯ ಸರ್ಕಾರಗಳು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿಲ್ಲ ಎಂದು ಆರೋಪಿಸಿದರು. ಕರ್ನಾಟಕದಲ್ಲಿ ಬುಡಕಟ್ಟು ಜನರ ಭೂಮಿ ಹಕ್ಕಿನ ಅನುಷ್ಠಾನ ಜಾರಿಯಾಗುತ್ತಿಲ್ಲ ಈ ಬಗ್ಗೆ ತಾವು ಸಂಸತ್ತಿನಲ್ಲಿ ಈ ಪ್ರಕರಣದ ಕುರಿತು ಗಮನ ಸೆಳೆದು ಒತ್ತಡ ತರುವುದಾಗಿ ಹೇಳಿದರು.
ಭೂಮಾಲೀಕರ ದೌರ್ಜ್ಯನಕ್ಕೆ ಒಳಗಾಗಿರುವ ಸುಂದರ ಮಲೆಕುಡಿಯ ಹಾಗೂ ಅವರ ಕುಟುಂಬಕ್ಕೆ ಧೈರ್ಯ ತುಂಬಿ ಸಮಾಧಾನ ಪಡಿಸುವ ನಿಟ್ಟಿನಲ್ಲಿ ತಾನು ಇಲ್ಲಿಗೆ ಆಗಮಿಸಿದ್ದು, ಸುಂದರ ಮಲೆಕುಡಿಯರ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಬೇಕೆಂದು ಆಗ್ರಹಿಸುವುದಾಗಿ ಯೆಚೂರಿ ಹೇಳಿದರು.
ಜುಲೈ 26ರಂದು ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಭೂಮಾಲಕ ಗೋಪಾಲ ಗೌಡ ಹಾಗೂ ಇನ್ನಿತರರು ಸೇರಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದಸುಂದರ ಮಲೆಕುಡಿಯ ಎಂಬವರ ಮೇಲೆ ಹಲ್ಲೆ ನಡೆಸಿ, ಮರ ಕಡಿಯುವ ಯಂತ್ರದಿಂದ ಗೋಪಾಲ ಗೌಡ ಅವರ ಕೈಬೆರಳುಗಳನ್ನು ಕತ್ತರಿಸಿ ಪರಾರಿಯಾಗಿದ್ದರು. ಬಳಿಕ ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ ಗೋಪಾಲ ಗೌಡನನ್ನು ಅಗಸ್ಟ್ 22ರಂದು ಅಂದ್ರ ಪ್ರದೇಶದ ಪುಟಪರ್ತಿಯಲ್ಲಿ ಬಂಧಿಸಲಾಗಿತ್ತು.
ಅತನ ಹೇಳಿಕೆಯಂತೆ ಪ್ರಕರಣದ ಇನ್ನೋರ್ವ ಆರೋಪಿ ಗೋಪಾಲ ಗೌಡನ ಅಕ್ಕ ( ಇನ್ನೋರ್ವ ಆರೋಪಿ) ದಮಯಂತಿಯ ಕಾರು ಚಾಲಕ ವಸಂತ ಗೌಡನನ್ನು ಹಾಸನ ಜಿಲ್ಲೆಯ ಗೋರೂರು ದಿನೇಶ್ ಕಾರ್ಲೆತವರ ರೆಸಾರ್ಟ್ ಒಂದರಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿತ್ತು.ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಪಾಲ ಗೌಡನ ಪತ್ನಿ ಪುಷ್ಪಲತಾ ಸೇರಿದಂತೆ ಒಟ್ಟು ಮೂರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಗೋಪಾಲ ಗೌಡನ ಅಕ್ಕ ದಮಯಂತಿ ನಾಪತ್ತೆಯಾಗಿದ್ದಾರೆ.