ಮಂಗಳೂರು,ಸೆ.01 : ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘದ ವತಿಯಿಂದ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯ ವೃತ್ತದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ರಾಜ್ಯದ ಪ್ರಮುಖ ಶೈಕ್ಷಣಿಕ ಸಮಸ್ಯೆಗಳು ಹಾಗೂ ಹಾಸ್ಟೆಲ್ ಸಮಸ್ಯೆಗಳನ್ನು ಬಗೆಹರಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು.
ಪ್ರತಿಭಟನಾ ಸಭೆಯಲ್ಲಿ ಅಖಿಲ ಭಾರತ ವಿಧ್ಯಾರ್ಥಿ ಪರಿಷತ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಕುಮಾರಿ ಚೈತ್ರಾ ಅವರು ಮಾತನಾಡಿ, ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಹಲವಾರು ಸಮಸೈಗಳು ತಾಂಡವಾಡುತ್ತಿವೆ. ರಾಜ್ಯದ ಬಹುತೇಕ ಕಾಲೇಜುಗಳು ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳನ್ನು ಬೆದರಿಸಿ ಹಣ ವಸಲಿ ಮಾಡುತ್ತಿವೆ. ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿ ಜಾರಿಯಲ್ಲಿ ಲೋಪವಾಗುತ್ತಿದೆ. SC ST ವಿದ್ಯಾರ್ಥಿ ವೇತನ ಬಿಡುಗಡೆಯಲ್ಲಿ ವಿಳಂಬವಾಗುತ್ತಿದೆ. ಮಾತ್ರವಲ್ಲದೇ ಸರ್ಕಾರಿ ಕಾಲೇಜುಗಳಲ್ಲಿ ಹಾಸ್ಟೇಲ್ ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದು, ರಾಜ್ಯ ಸರ್ಕಾರ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಹಿಂದುಳಿದ ವರ್ಗ, SC ST, ಅಲ್ಪಸಂಖ್ಯಾತ ವರ್ಗದ ಶುಲ್ಕ ವಿನಾಯಿತಿಯು ಸಮರ್ಪಕವಾಗಿ ಜಾರಿಯಾಗದೇ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನವನ್ನು ತೊರೆಯುತ್ತಿದ್ದಾರೆ. SC ST ವರ್ಗದ 2 ವರ್ಷದ ವಿದ್ಯಾರ್ಥಿ ವೇತನ ಇನ್ನೂ ತಲುಪಿಲ್ಲ. ಹೆಚ್ಚಿನ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಗ್ರಂಥಾಲಯ, ಶೌಚಾಲಯ, ಕ್ರೀಡಾ ಸಾಮಾಗ್ರಿ, ಭೋದಕೇತರ ಸಿಬ್ಬಂದಿ ಮುಂತಾದ ಅತ್ಯಂತ ಅವಶ್ಯಕವಿರುವ ಸೌಕರ್ಯಗಳಲ್ಲಿ ಕೊರತೆಯನ್ನು ಸೃಷ್ಟಿಸಿವೆ. ಇದರಿಂದ ಇಡೀ ಸರ್ಕಾರಿ ಕಾಲೇಜುಗಳ ವಾತಾವರಣ ನಿರ್ನಾಮ ಮಾಡಿದಂತಾಗಿದೆ ಎಂದು ಕಿಡಿಕಾರಿದರು.
ರಾಜ್ಯದ ಪ್ರಮುಖ ಶೈಕ್ಷಣಿಕ ಸಮಸ್ಯೆಗಳು ಹಾಗೂ ಹಾಸ್ಟೆಲ್ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು. ಎರಡು ವರ್ಷಗಳಿಂದ ಬಾಕಿಯಿರುವ SC ST ವಿದ್ಯಾರ್ಥಿ ವೇತನವನ್ನು ಕೂಡಲೇ ಬಿಡುಗಡೆಗೊಳಿಸಬೇಕು, ವಿದ್ಯಾರ್ಥಿಗಳ ಬೇಡಿಕೆಗನುಗುಣವಾಗಿ ಹಾಸ್ಟೆಲ್ ಸಂಖ್ಯೆಯನ್ನು ಹೆಚ್ಚಿಸಬೇಕು ಮುಂತಾದ ನಮ್ಮ ಎಲ್ಲಾ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು ಎಂದು ಚೈತ್ರಾ ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ಮಂಗಳೂರು ನಗರ ಕಾರ್ಯದರ್ಶಿ ನಿತೇಶ್, ದಕ್ಷಿಣ ವಲಯದ ಕಾರ್ಯದರ್ಶಿ ಅಲೋಕ್ ಶೆಟ್ಟಿ, ಮಹಾನಗರ ಕಾರ್ಯದರ್ಶಿನ ಸದಸ್ಯ ಸಂತೋಷ್, ವಿದ್ಯಾರ್ಥಿಗಳಾದ ರೇಣುಕಾ, ಅನುಷಾ, ಶಿಲ್ಪಾ, ಪ್ರತೀಕ್, ರಾಕೇಶ್, ನವೀನ್, ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.










