ಕರ್ನಾಟಕ

ಸಿದ್ದರಾಮಯ್ಯ ತಮ್ಮ ಕುರ್ಚಿಗೆ ತಾವೇ ಗೋರಿ ತೋಡಿಕೊಳ್ಳುತ್ತಿದ್ದಾರೆ: ಯಡಿಯೂರಪ್ಪ

Pinterest LinkedIn Tumblr

yeddyruppa-siddaramaiah

ಬೆಂಗಳೂರು, ಸೆ.1: ಜನಾದೇಶಕ್ಕೆ ವಿರುದ್ಧವಾಗಿ ಬಿಬಿಎಂಪಿಯಲ್ಲಿ ವಾಮಮಾರ್ಗದ ಮೂಲಕ ಕಾಂಗ್ರೆಸ್ ಅಧಿಕಾರ ಹಿಡಿಯುವುದರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿಗೆ ತಾವೇ ಗೋರಿ ತೋಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆ ವೇಳೆ ಬೆಂಗಳೂರಿನ ಜನತೆ ಬಿಜೆಪಿಗೆ ಸ್ಪಷ್ಟ ಜನಾದೇಶ ನೀಡಿದ್ದಾರೆ. ಆದರೂ ಕಾಂಗ್ರೆಸ್, ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯಲು ಮುಂದಾಗಿರುವುದು ಸಿದ್ದರಾಮಯ್ಯ ಕುರ್ಚಿಗೆ ಗಂಡಾಂತರ ಕಾದಿದೆ ಎಂದು ಎಚ್ಚರಿಸಿದರು.

ಅಧಿಕಾರದ ಆಸೆಗಾಗಿ ನಾವು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ. ಬಿಜೆಪಿ ಪ್ರತಿಪಕ್ಷದ ಸ್ಥಾನದಲ್ಲಿ ಕೂರಲು ಸಿದ್ಧವಿದೆ. ಜನತೆಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಚನಾತ್ಮಕವಾಗಿ ಕೆಲಸ ಮಾಡುತ್ತೇವೆಂದು ನುಡಿದರು. ನಮಗೆ ಜನತೆ ಸ್ಪಷ್ಟ ಬಹುಮತ ನೀಡಿದ್ದರು. ಪಕ್ಷೇತರರನ್ನು ಇಟ್ಟುಕೊಂಡು ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುತ್ತಾರೆಂಬ ಸಣ್ಣ ಊಹೆಯೂ ಕೂಡ ನಮಗೆ ಇರಲಿಲ್ಲ. ನಮ್ಮ ಅತಿಯಾದ ಆತ್ಮವಿಶ್ವಾಸವೇ ನಮಗೆ ಮುಳುವಾಯಿತು ಎಂದು ಹೇಳಿದರು.

ಅಹಿಂದ ವರ್ಗಕ್ಕೆ ಏನು ಕೊಡುಗೆ: ತಾನು ಅಹಿಂದ ವರ್ಗದ ಮುಖ್ಯಮಂತ್ರಿ ಎಂದು ಹೇಳುವ ಸಿದ್ದರಾಮಯ್ಯ ಈ ಸಮುದಾಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ನಾನು ಮುಖ್ಯಮಂತ್ರಿಯಾದ ವೇಳೆ ಈ ವರ್ಗಕ್ಕೆ ಏನು ಕೊಡುಗೆ ನೀಡಿದ್ದೆ ಎಂಬುದನ್ನು ಅಂಕಿ-ಅಂಶಗಳ ಸಮೇತ ದಾಖಲೆ ನೀಡಲು ಸಿದ್ಧನಿದ್ದೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ನಿರಂತರವಾಗಿ ನಡೆಯುತ್ತಿದೆ. ಅನ್ನದಾತ ಯಾವ ಕಾರಣಕ್ಕಾಗಿ ಸಾವಿಗೆ ಶರಣಾಗುತ್ತಿದ್ದಾನೆಂಬುದು ಸರ್ಕಾರಕ್ಕೆ ತಿಳಿಯುತ್ತಿಲ್ಲ. ಸಮಸ್ಯೆ ಪರಿಹರಿಸುವ ಬದಲು ಮುಖ್ಯಮಂತ್ರಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಬಿಬಿಎಂಪಿ ಮೇಯರ್ ಚುನಾವಣೆಯತ್ತ ಗಮನ ಹರಿಸಿದ್ದಾರೆಂದು ಟೀಕೆ ಮಾಡಿದರು.

ಸರ್ಕಾರ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಒಂದೆಡೆ ಬರಗಾಲ ತಾಂಡವವಾಡುತ್ತಿದ್ದು, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ವಿದ್ಯುತ್ ಸಮಸ್ಯೆ ಉಂಟಾಗಿ ಜನರು ಗುಳೆ ಹೋಗುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಕ್ಷೇತ್ರದಲ್ಲಿ ಠಿಕಾಣಿ ಹೂಡಿ ಜನರ ಸಮಸ್ಯೆಗಳನ್ನು ಆಲಿಸಬೇಕಿತ್ತು. ಸರ್ಕಾರ ನಿಷ್ಕ್ರಿಯಗೊಂಡ ಪರಿಣಾಮ ರೈತರ ಸಮಸ್ಯೆಗಳನ್ನು ಕೇಳದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಜಾರದ ವಿರುದ್ಧ ರಾಜ್ಯಾದ್ಯಂತ ಜನಜಾಗೃತಿ ಮೂಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಸರ್ಕಾರ ಎಚ್ಚೆತ್ತುಕೊಳ್ಳುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.

Write A Comment