ಕಾಸರಗೋಡು, ಆ.23: ಹೈಟೆಕ್ ಮಾದರಿಯಲ್ಲಿ ಎಟಿಎಂಗಳಿಂದ ಹಣ ಲೂಟಿ ಮಾಡುತ್ತಿದ್ದ ಆರೋಪದಲ್ಲಿ ಸರ್ವಿಸ್ ಎಂಜಿನಿಯರ್ ಓರ್ವನನ್ನು ಬಂಧಿಸುವಲ್ಲಿ ಕಾಸರಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ.
ಎರ್ನಾಕುಲಂ ಆಲುವಾದ ನಿವಾಸಿ ಸಿ.ಜಿ.ವಿನೋದ್(25) ಬಂಧಿತ ಆರೋಪಿ ಎಂದು ಗುರುತಿಸಲಾಗಿದ್ದು, ಆತ ಎಟಿಎಂ ಸರ್ವಿಸ್ ಎಂಜಿನಿಯರ್ ಎಂದು ತಿಳಿದುಬಂದಿದೆ.
ಬದಿಯಡ್ಕದ ಕೆನರಾ ಬ್ಯಾಂಕ್‌ನ ಎಟಿಎಂನಿಂದ ಕಳೆದ ಮೇ ತಿಂಗಳಲ್ಲಿ 85 ಸಾವಿರ ರೂ. ಕಳವಾದ ಘಟನೆಯ ಬಗ್ಗೆ ಬದಿಯಡ್ಕ ಪೊಲೀಸರಿಗೆ ಲಭಿಸಿದ ದೂರಿನಂತೆ ತನಿಖೆ ನಡೆಸಿ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತ ಕೇರಳದ ಹಲವು ಎಟಿಎಂಗಳಿಂದ ಇದೇ ರೀತಿ ಹಣ ದರೋಡೆ ಮಾಡಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಎಟಿಎಂಗಳು ಹಾಳಾದರೆ ಅದರ ದುರಸ್ತಿಗೆ ಬ್ಯಾಂಕ್ ಮ್ಯಾನೇಜರ್‌ಗಳು ವಿನೋದ್‌ನನ್ನು ಕರೆಸಿ ಕೊಳ್ಳುತ್ತಿದ್ದರು ಅದರಂತೆ ಬ್ಯಾಂಕ್ ಮ್ಯಾನೇಜರ್‌ರ ಸಮ್ಮುಖದಲ್ಲಿ ಡಿಜಿಟಲ್ ಪಾಸ್‌ವರ್ಡ್ ಬಳಸಿ ಎಟಿಎಂ ಯಂತ್ರವನ್ನು ತೆರೆದಿದ್ದಾನೆ. ಈ ಸಂದರ್ಭ ಬ್ಯಾಂಕ್ ಮ್ಯಾನೇಜರ್ ಬಳಸುವ ಗುಪ್ತ ಪಾಸ್‌ವರ್ಡ್‌ನ್ನು ಆತ ನೆನಪಿನಲ್ಲಿರಿಸಿ ಕೆಲ ದಿನಗಳ ಬಳಿಕ ಎಟಿಎಂಗಳಿಂದ ಗುಪ್ತ ಪಾಸ್‌ವರ್ಡ್ ಬಳಸಿ ಹಣ ತೆಗೆಯುತ್ತಿದ್ದನೆನ್ನಲಾಗಿದೆ.
ಮೇ 15 ರಂದು ಬದಿಯಡ್ಕದಲ್ಲಿರುವ ಎಟಿಎಂನ್ನು ಸರಿಪಡಿಸಲು ಆತ ಹೋಗಿದ್ದು, ದುರಸ್ತಿ ಸಂದರ್ಭ ಗುಪ್ತ ಪಾಸ್‌ವರ್ಡ್ ನೆನಪಿನಲ್ಲಿಟ್ಟಿದ್ದ ಆತ ಅಲ್ಲಿಂದ ಎಲ್ಲರೂ ತೆರಳಿದ ಬಳಿಕ ತನ್ನ ಕೈ ಚಳಕ ತೋರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬದಿಯಡ್ಕದ ಎಟಿಎಂ ಕಳವು ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ಹಲವು ರೀತಿಯಲ್ಲಿ ತನಿಖೆ ನಡೆಸಿದ್ದರು. ಎಟಿಎಂನ ಹಾರ್ಡ್ ಡಿಸ್ಕನ್ನು ತಪಾಸಣೆಗಾಗಿ ಕೋಝಿಕ್ಕೋಡಿಗೂ ಕೊಂಡೊಯ್ಯಲಾಗಿತ್ತು. ಸೈಬರ್ ಸೆಲ್ನ ನೆರವು ಪಡೆಯಲಾಗಿತ್ತು ಮಾತ್ರವಲ್ಲ ಸಿಸಿಟಿವಿಯಲ್ಲಿ ಕೂಡಾ ದೃಶ್ಯಗಳು ಲಭಿಸಿರಲಿಲ್ಲ. ಕಳವು ನಡೆಸುವ ಸಂದರ್ಭ ಸಿಸಿಟಿವಿ ಕೂಡಾ ಆಫ್ ಮಾಡಲಾಗಿತ್ತು. ಕಳವಿನ ಹಿಂದೆ ಚಾಣಾಕ್ಷರೇ ಇರಬೇಕು ಎಂಬ ಸಂಶಯ ವ್ಯಕ್ತಪಡಿಸಿದ್ದ ತನಿಖಾ ತಂಡ ಕಾಸರಗೋಡಿನಲ್ಲಿ ಎಟಿಎಂ ಯಂತ್ರ ದುರಸ್ತಿಗೆ ಮಾಡಲು ಬರುವಂತೆ ಉಪಾಯವಾಗಿ ಕರೆದಿದ್ದರು. ಈ ಸಂದರ್ಭ ಪೊಲೀಸರು ಆತನನ್ನು ವಿಚಾರಣೆ ನಡೆಸಿದಾಗ 25 ಕ್ಕೂ ಅಧಿಕ ಎಟಿಎಂಗಳಿಂದ ಇದೇ ಮಾದರಿಯ ಕಳವು ನಡೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಮಾತ್ರ ಈಗಾಗಲೇ ಮೂರು ಪ್ರಕರಣಗಳು ಬೆಳಕಿಗೆ ಬಂದಿದೆ. 2014ರಲ್ಲಿ ಹೊಸದುರ್ಗದ ಎಟಿಎಂನಿಂದ ಎರಡು ಲಕ್ಷ ರೂ., 2015 ರ ಮಾರ್ಚ್‌ನಲ್ಲಿ ಉದಿನೂರುನ ಎಟಿಎಂನಿಂದ 50 ಸಾವಿರ ರೂ. ಕಳೆದ ಮೇ ತಿಂಗಳಲ್ಲಿ ಬದಿಯಡ್ಕದಲ್ಲಿ ಕೆನರಾ ಬ್ಯಾಂಕ್ ಎಟಿಎಂನಿಂದ 85 ಸಾವಿರ ರೂ. ಲಪಟಾಯಿಸಿದ್ದಾನೆಂದು ತಿಳಿದು ಬಂದಿದೆ. ಇದೀಗ ಆತನನ್ನು ವಿಚಾರಣೆ ಒಳಪಡಿಸಲಾಗಿದ್ದು, ಇನ್ನಷ್ಟು ಮಾಹಿತಿಗಳು ಹೊರ ಬೀಳುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.