ಮಂಗಳೂರು, ಆ. 23: ಮಂಗಳೂರಿನ ಜೆಪ್ಪುಸಂತ ಜೋಸೆಫ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಿದ್ಧಪಡಿಸಿದ ಪರಿಸರ ಗೀತೆಗಳನ್ನು ಒಳಗೊಂಡ ‘ಚಿಂತನಾ ಸಿಂಚನ ಹಸಿರು ಬೆಳಕಿನ ಸಂಚಲನ’ ಕೃತಿಯನ್ನು ಶನಿವಾರ ಮರಗಳ ಸಂರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ ಪರಿಸರ ಪ್ರೇಮಿ, ಶತಾಯುಷಿ ಸಾಲುಮರದ ತಿಮ್ಮಕ್ಕ ಬಿಡುಗಡೆ ಗೊಳಿಸಿದರು.
ಈ ಸಂದರ್ಭ ವಿದ್ಯಾರ್ಥಿಗಳ ಜತೆ ಪ್ರೀತಿಯ ನುಡಿಗಳನ್ನಾಡಿದ ಅವರು, ಗಿಡಗಳನ್ನು ನೆಟ್ಟರೆ ಹಸಿರು ಮನುಷ್ಯನನ್ನು ಕಾಪಾಡುತ್ತದೆ ಎಂದರು. ಮರವನ್ನು ಉಳಿಸಿ ಬೆಳೆಸು ವಲ್ಲಿ ಇಂದಿನ ಯುವ ಪೀಳಿಗೆಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದರು. ಮರ ಕಡಿದರೆ ಮಗುವನ್ನು ಸಾಯಿಸಿದಂತೆ. ಆದ್ದರಿಂದ ಮರ ಕಡಿಯದೆ ಅಭಿವೃದ್ಧಿ ಕಾಮಗಾರಿ ನಡೆಸಬೇಕು. ಕೇವಲ ಸಸಿಗಳನ್ನು ನೆಟ್ಟ ರಷ್ಟೇ ಸಾಲದು ಅವುಗಳನ್ನು ಪೋಷಿಸಿ ಸಂರಕ್ಷಿಸಬೇಕು ಎಂದು ಅವರು ಸಲಹೆ ನೀಡಿದರು.
ಮಕ್ಕಳಿಲ್ಲ ಎಂಬ ಕೊರಗು ನೀಗಲು 26 ವರ್ಷಗಳ ಕಾಲ ಗಿಡಗಳನ್ನು ನೆಟ್ಟು ಪೋಷಿಸಿದೆ. ಪತಿಯ ಮರಣಾನಂತರ ದತ್ತುಪುತ್ರನ ಜತೆ ಬೆಂಗಳೂರಲ್ಲಿ ಬಾಡಿಗೆ ಮನೆಯಲ್ಲಿದ್ದೇನೆ. ತನಗೆ ಮಾಸಿಕ 500 ರೂ. ವಿಧವಾ ವೇತನ ಬಿಟ್ಟರೆ ಸರಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ ಎಂದು ಬೇಸರಿಸಿದರು.
ಪದ್ಮಶ್ರೀ ಪ್ರಶಸ್ತಿ ಘೋಷಿಸಿ:
ಸಾಲು ಮರದ ತಿಮ್ಮಕ್ಕ ಈಗ ಶತಾಯುಷಿ. ಅವರ ಸಾಧನೆ ಗುರುತಿಸಿ ಪದ್ಮಶ್ರೀ ಪ್ರಶಸ್ತಿ ಅಥವಾ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕಿತ್ತು. ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ತಿಮ್ಮಕ್ಕ ಹೆಸರಲ್ಲಿ ‘ನೆರಳು ಭಾಗ್ಯ ಯೋಜನೆ’ ಪ್ರಕಟಿಸಿದ್ದಾರೆ. ಆದರೆ ನಾಡಿಗೆ ನೆರಳು ನೀಡಿದ ತಿಮ್ಮಕ್ಕನ ಬದುಕಿಗೆ ಮೊದಲು ನೆರಳು ನೀಡಬೇಕಿದೆ. ತಿಮ್ಮಕ್ಕನಿಗೆ ಏನಾದರೂ ಪ್ರಶಸ್ತಿ ಕೊಡುವುದಿದ್ದರೆ ಬದುಕಿದ್ದಾಗ ಕೊಡಿ ಎಂದು ತಿಮ್ಮಕ್ಕ ಅವರ ದತ್ತುಪುತ್ರ ಉಮೇಶ್ ಸರಕಾರವನ್ನು ಆಗ್ರಹಿಸಿದರು.
ಊರಿನಲ್ಲಿ ಹೆರಿಗೆ ಆಸ್ಪತ್ರೆಯ ಅಗತ್ಯವಿದೆ :
‘‘ಸರಕಾರದ ಬಳಿ ನಾನು ಯಾವುದೇ ಸೌಲಭ್ಯಕ್ಕಾಗಿ ಅಂಗಲಾಚಿಲ್ಲ. ನಮ್ಮೂರಿನಲ್ಲಿ ಹೆರಿಗೆ ಆಸ್ಪತ್ರೆ ಕಟ್ಟಿಸಿಕೊಡಿ ಎಂದು ಭಿನ್ನವಿಸಿಕೊಂಡಿದ್ದೆ. ಆದರೆ ಸರಕಾರದವರು ಅದನ್ನು ಕಿವಿಗೆ ಹಾಕಿಕೊಂಡಿಲ್ಲ’’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪುತ್ತೂರು ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ.ಶ್ರೀಶಕುಮಾರ್ ಉಪನ್ಯಾಸ ನೀಡಿದರು.
ಈ ಸಂದರ್ಭ ಸಾಲುಮರದ ತಿಮ್ಮಕ್ಕರನ್ನು ಜೋಸೆಫ್ ಕಾಲೇಜು ಹಾಗೂ ಸಹ್ಯಾದ್ರಿ ಟ್ರೆಕ್ಕರ್ಸ್ ಗುಂಪಿನ ಪರವಾಗಿ ಸನ್ಮಾನಿಸಲಾಯಿತು.
ಫಾ. ಲಾರೆನ್ಸ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಫಾ. ವಿಲ್ಫ್ರೆಡ್ ಪ್ರಕಾಶ್ ಡಿಸೋಜ, ಸಾಲುಮರದ ತಿಮ್ಮಕ್ಕರ ಜೀವನ ಚರಿತ್ರೆಯನ್ನು ಬರೆದ ಲೇಖಕಿ ಇಂದಿರಮ್ಮ ಬೇಲೂರು, ಉಪನ್ಯಾಸಕಿ ಆರ್.ದುರ್ಗಾ ಮೆನನ್, ವಿದ್ಯಾರ್ಥಿ ಮಂಡಳಿ ಅಧ್ಯಕ್ಷೆ ಶಿಫಾಲಿ ಎಂ.ಎಸ್., ಸಹ್ಯಾದ್ರಿ ಸಂರಕ್ಷಣಾ ಸಂಚಯದ ಸಂಚಾಲಕ ದಿನೇಶ್ ಹೊಳ್ಳ ಉಪಸ್ಥಿತರಿದ್ದರು.