ಕನ್ನಡ ವಾರ್ತೆಗಳು

ಜುಲೈ.19: ಬಂಟರ ಯಾನೆ ನಾಡವರ ಮಾತೃಸಂಘದ ವತಿಯಿಂದ ಗ್ರಾಂ.ಪಂಚಾಯತುಗಳಿಗೆ ಆಯ್ಕೆಯಾದ ಸಮಾಜ ಬಾಂಧವರಿಗೆ ಅಭಿನಂದನೆ

Pinterest LinkedIn Tumblr

Bunts_Sanga_Press_1

ಮಂಗಳೂರು : ಬಂಟರ ಯಾನೆ ನಾಡವರ ಮಾತೃಸಂಘದ ವತಿಯಿಂದ ದ.ಕ. ಮತ್ತು ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತುಗಳಿಗೆ ನೂತನವಾಗಿ ಆಯ್ಕೆಯಾದ ಸಮಾಜ ಬಾಂಧವರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮ ದಿನಾಂಕ 19-07-2015ನೇ ಭಾನುವಾರ ಬೆಳಿಗ್ಗೆ 9-30ಕ್ಕೆ ನಗರದ ಬಂಟ್ಸ್ ಹಾಸ್ಟೆಲ್‌ನ ಎ.ಬಿ. ಶೆಟ್ಟಿ ಸಭಾಂಗಣದಲ್ಲಿ ಜರಗಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಮಾತೃಸಂಘದ ಅಧ್ಯಕ್ಷರಾದ ಶ್ರೀ ಮಾಲಾಡಿ ಅಜಿತ್‌ಕುಮಾರ್ ರೈಯವರು ವಹಿಸಲಿರುವರು. ಗಣ್ಯ ಅತಿಥಿಗಳಾಗಿ ಮುಂಬೈ ಲೋಕಸಭಾ ಸದಸ್ಯ ಶ್ರೀ ಗೋಪಾಲ ಶೆಟ್ಟಿ ಮತ್ತು ಕರ್ನಾಟಕದ ಮಾಜಿ ಸಚಿವ ಹಾಗೂ ಮಾಜಿ ಲೋಕಸಭಾ ಸದಸ್ಯ ಶ್ರೀ ಜಯಪ್ರಕಾಶ ಹೆಗ್ಡೆಯವರು ಭಾಗವಹಿಸಲಿರುವರು ಎಂದು ಮಾತೃಸಂಘದ ಅಧ್ಯಕ್ಷರಾದ ಶ್ರೀ ಮಾಲಾಡಿ ಅಜಿತ್‌ಕುಮಾರ್ ರೈಯವರು ತಿಳಿಸಿದ್ದಾರೆ.

ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಗ್ರಾಮ ಪಂಚಾಯತುಗಳಿಗೆ ಜರಗಿದೆ ಚುನಾವಣೆಯಲ್ಲಿ ಗಣನೀಯ ಸಂಖ್ಯೆಯ ಬಂಟ ಸಮಾಜದ ಅಭ್ಯರ್ಥಿಗಳು ವಿಜಯಗಳಿಸಿರುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯ ತಳಹದಿಯಾದ ಗ್ರಾಮ ಪಂಚಾಯತುಗಳು ಆದರ್ಶ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ, ಆ ಮುಖೇನ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಪ್ರಗತಿಯಾಗಲು ಸಾಧ್ಯ.

ನೂತನವಾಗಿ ಆಯ್ಕೆಯಾದ ಸಮಾಜದ ಬಂಧುಗಳನ್ನು ಅಭಿನಂದಿಸುವುದರಿಂದ ಅವರು ಇನ್ನೂ ಹೆಚ್ಚಿನ ಉತ್ಸಾಹದಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸೇವೆ ಸಲ್ಲಿಸಲು ಪ್ರೋತ್ಸಾಹಿಸಿದಂತಾಗುವುದು. ಮಾತ್ರವಲ್ಲದೆ, ಸಂಘವು ಗ್ರಾಮೀಣ ಪ್ರದೇಶದ ಎಲ್ಲಾ ಸಮಾಜ ಬಾಂಧವರೊಂದಿಗೆ ಇನ್ನೂ ಹೆಚ್ಚಿನ ನಿಕಟ ಬಾಂಧವ್ಯವನ್ನು‌ಉಳಿಸಲು ಮತ್ತು ಬೆಳೆಸಲು ಸಹಕಾರಿ ಯಾಗುವುದು ಎಂದರು.

Bunts_Sanga_Press_2

ಬಂಟ ಸಮಾಜವು, ಅನಾದಿಕಾಲದಿಂದಲೂ ಧಾರ್ಮಿಕ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಮುಂಚೂಣಿ ಯಲ್ಲಿದ್ದು, ಎಲ್ಲಾ ಜಾತಿ ಮತ ವರ್ಗಗಳ ಜನರ ಕಷ್ಟ ಸುಖ- ದುಃಖಗಳಲ್ಲಿ ಬಾಗಿಯಾಗಿ, ಎಲ್ಲರನ್ನೂ ಅರಿತುಕೊಂಡು ಸಾಮರಸ್ಯದ ಸಹಜೀವನವನ್ನು ನಡೆಸಿ ತಮ್ಮ ಅನುಕರಣೀಯ ನಡತೆಯಿಂದ ಎಲ್ಲಾ ಜಾತಿ, ಮತ ಬಾಂಧವರ ಪ್ರೀತ್ಯಾದರಗಳನ್ನು ಗಳಿಸಿ ಗೌರಾನ್ವಿತ ಸ್ಥಾನಮಾನಗಳನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತುಗಳಿಗೆ ಇತ್ತೀಚೆಗೆ ಜರಗಿದ ಚುನಾವಣೆಯಲ್ಲಿ ಆಯ್ಕೆಯಾದ ಸಮಾಜದ ಬಂಧುಗಳನ್ನು ಮಾತೃಸಂಘದ ವತಿಯಿಂದ ಅಭಿನಂದಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ನೂತನವಾಗಿ ಆಯ್ಕೆಯಾದ ಎಲ್ಲಾ ಸಮಾಜ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮಾತೃಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸಂಘದ ಸರ್ವ ಸದಸ್ಯರು ಈ ಮೂಲಕ ಪ್ರೀತಿಪೂರ್ವಕವಾಗಿ ಆಮಂತ್ರಿಸುತ್ತಿರುವುದಾಗಿ ಮಾಲಾಡಿ ಅಜಿತ್‌ಕುಮಾರ್ ರೈ ಅವರು ಈ ಸಂದರ್ಭದಲ್ಲಿ ವಿನಂತಿಸಿದ್ದಾರೆ.

ಪತ್ರಿಕಾ ಗೋಷ್ಟಿಯಲ್ಲಿ ಮಂಗಳೂರು ತಾಲೂಕು ಸಮಿತಿ ಸಂಚಾಲಕ ಶ್ರೀ ಯಸ್. ಜಯರಾಮ ಸಾಂತ, ಸಹ ಸಂಚಾಲಕ ಶ್ರೀ ಉಮೇಶ ರೈ. ಅಭಿನಂದನಾ ಕಾರ್ಯಕ್ರಮ ಸಮಿತಿ ಸಂಚಾಲಕ ದಿವಾಕರ ಸಾಮಾನಿ, ಸಮನ್ವಯಕಾರ ಶ್ರೀ ಉಲ್ಲಾಸ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Write A Comment