ಬೆಳ್ತಂಗಡಿ, ಜು.11: ಎಚ್ಪಿಸಿಎಲ್ ಡೀಸೆಲ್ ಪೈಪ್ಲೈನ್ಗೆ ಕನ್ನ ಕೊರೆದಿರುವ ಪ್ರಕರಣವೊಂದು ಮಡಂತ್ಯಾರು ಸಮೀಪ ಮಚ್ಚಿನ ಗ್ರಾಮದ ಬಂಗೇರಕಟ್ಟೆ ಎಂಬಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ. ಇಲ್ಲಿ ಭಾರೀ ಪ್ರಮಾಣದಲ್ಲಿ ಡೀಸೆಲ್ ಸೋರಿಕೆಯಾಗುತ್ತಿದ್ದ ಹಿನ್ನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಇದು ಪತ್ತೆಯಾಗಿದೆ.
ಅತ್ಯಂತ ವ್ಯವಸ್ಥಿತವಾಗಿ ಇಲ್ಲಿ ಡೀಸೆಲ್ ಪೈಪ್ಲೈನ್ಗೆ ಕನ್ನ ಕೊರೆಯಲಾಗಿದೆ. ಪೈಪ್ಲೈನ್ಗೆ ಒಂದು ಇಂಚು ವಿಸ್ತೀರ್ಣದ ಪೈಪ್ ಜೋಡಿಸಿ ಅದಕ್ಕೆ ಗೇಟ್ವಾಲ್ ಅಳವಡಿಸಲಾಗಿದೆ. ಅಲ್ಲಿಂದ ಮುಂದೆ 20 ಮೀಟರ್ ದೂರಕ್ಕೆ ಪೈಪ್ ಜೋಡಿಸಿರುವುದು ಪತ್ತೆಯಾಗಿದೆ. ಮಣ್ಣಿನ ಅಡಿಯಲ್ಲಿ ಇದನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಲಾಗಿದೆ. ಇದೀಗ ಪರಿಸರದಲ್ಲಿ ಡಿಸೇಲ್ ಸೋರಿಕೆಯಾಗಿ ಗದ್ದೆ, ಕೆರೆ, ತೋಡುಗಳ ನೀರಿನಲ್ಲಿ ಸೇರಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಕದಿಯುವುದಕ್ಕಾಗಿ ಅಳವಡಿಸಿದ ಗೇಟ್ವಾಲ್ನಲ್ಲಿ ಡೀಸೆಲ್ ಸೋರಿಕೆಯಾಗುತ್ತಿತ್ತು.
ಮಡಂತ್ಯಾರು-ಬಳ್ಳಮಂಜ ರಸ್ತೆಯಲ್ಲಿ ಮಡಂತ್ಯಾರಿನಿಂದ ಸುಮಾರು 3 ಕಿ.ಮೀ. ದೂರದಲ್ಲಿ ಬಂಗೇರುಕಟ್ಟೆ ಎಂಬಲ್ಲಿ ರಸ್ತೆಯಿಂದ ಸುಮಾರು 200 ಮೀಟರ್ ದೂರದಲ್ಲಿ ಪೈಪ್ಲೈನ್ಗೆ ಕನ್ನ ಕೊರೆದಿರುವುದು ಕಂಡುಬಂದಿದೆ. ಕಳೆದ ಕೆಲ ದಿನಗಳಿಂದ ಇಲ್ಲಿ ಭಾರೀ ಪ್ರಮಾಣದಲ್ಲಿ ಡೀಸೆಲ್ ಸೋರಿಕೆಯಾಗಿ ಸಮೀಪದ ಗದ್ದೆ, ಕೆರೆ, ತೋಡುಗಳ ನೀರಿನಲ್ಲಿ ಬೆರೆತಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಎಚ್ಪಿಸಿಎಲ್ ಕಂಪೆನಿಗೆ ಮಾಹಿತಿ ನೀಡಿದ್ದರು. ಅದರಂತೆ ಕಂಪೆನಿಯ ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಅಕ್ರಮವಾಗಿ ಜೋಡಿಸಿದ್ದ ಪೈಪ್ಗಳನ್ನು ತೆರವುಗೊಳಿಸಲಾಗಿದ್ದು, ಸೋರಿಕೆ ತಡೆಗೆ ಕ್ರಮ ಕೈಗೊಳ್ಳಲಾಗಿದೆ.
ಕೆಲವು ವರ್ಷಗಳ ಹಿಂದೆ ಇದೇ ಪರಿಸರದಲ್ಲಿ ಭಾರೀ ಪ್ರಮಾಣದಲ್ಲಿ ಡೀಸೆಲ್ ಕಳ್ಳತನ ನಡೆದಿತ್ತು. ಇದೀಗ ಪತ್ತೆಯಾಗಿರುವ ಗೇಟ್ವಾಲ್ ಹಾಗೂ ಪೈಪ್ಗಳು ಮತ್ತೆ ಕಳ್ಳತನ ನಡೆಯುತ್ತಿರುವ ಸುಳಿವು ನೀಡಿದೆ. ಇಷ್ಟೊಂದು ವ್ಯವಸ್ಥಿತವಾಗಿ ಕಳ್ಳತನಕ್ಕೆ ಸಂಚು ರೂಪಿಸಿರುವುದನ್ನು ಗಮನಿಸಿದರೆ ಇದರ ಹಿಂದೆ ಭಾರೀ ಜಾಲವೇ ಕಾರ್ಯಾಚರಿಸುತ್ತಿರುವ ಅನುಮಾನ ವ್ಯಕ್ತವಾಗಿದೆ. ಜೊತೆಗೆ ಇದು ಹಿಂದೆ ನಡೆದಿದ್ದ ಭಾರೀ ಪ್ರಮಾಣದ ಕಳ್ಳತನದ ಉಳಿದ ಕುರುಹುಗಳೇ ಆಗಿರಬಹುದೆಂಬ ಅನುಮಾನವನ್ನೂ ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಎಎಸ್ಪಿ ರಾಹುಲ್ಕುಮಾರ್, ಬೆಳ್ತಂಗಡಿ ವೃತ್ತ ನಿರೀಕ್ಷಕ ಬಿ.ಆರ್.ಲಿಂಗಪ್ಪ, ಪೂಂಜಾಲಕಟ್ಟೆ ಠಾಣಾಧಿಕಾರಿ ಲತೇಶ್ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
