ಮಂಗಳೂರು,ಜುಲೈ.11 : ಮುಂಬರುವ ಮುಂಗಾರು ಅಧಿವೇಶನದಲ್ಲಿ ಮಂಡಣೆಯಾಗಲಿರುವ ಮಸೂದೆಯಲ್ಲಿ ಬಾಲಕಾರ್ಮಿಕ ಪದ್ಧತಿ ನಿಷೇಧದ ಕುರಿತು ಜನಜಾಗೃತಿ ಮೂಡಿಸಲು ಮತ್ತು 18 ವರ್ಷದೊಳಗಿನ ಎಲ್ಲಾ ರೀತಿಯ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಗೊಳಿಸುವ ನಿಟ್ಟಿನಲ್ಲಿ ಸಿ.ಎ.ಸಿ.ಎಲ್ ರಾಜ್ಯಘಟಕವು ರಾಜ್ಯಾದ್ಯಂತ ಪ್ರತೀ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯವರ ಕಛೇರಿಯ ಮುಂಭಾಗದಲ್ಲಿ ಶುಕ್ರವಾರ ಹಕ್ಕೊತ್ತಾಯ ಕಾರ್ಯಕ್ರಮ ನಡೆಸಿದ್ದರು.
14 ವರ್ಷದ ಕೆಳಗಿನ ಮಕ್ಕಳನ್ನು ದುಡಿಸಿಕೊಳ್ಳಲು ಅವಕಾಶ ಮಾಡಿಕೊಡಲಿರುವ ಮಸೂದೆಯಲ್ಲಿರುವ ಅಂಶಗಳನ್ನು ಕೈ ಬಿಡಬೇಕು. ಮತ್ತು ಬಾಲಕಾರ್ಮಿಕ ಪದ್ಧತಿಯನ್ನು 14 ವರ್ಷದ ತನಕ ಸಂಪೂರ್ಣವಾಗಿ ನಿಷೇಧಿಸಲು ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ ನಡೆಯಬೇಕು ಎಂದು ಕರ್ನಾಟಕದ ರಾಜ್ಯ ಸಂಚಾಲಕರಾದ ಶ್ರೀ ರೆನ್ನಿ ಡಿ’ಸೋಜ ರವರು ಈ ಸಂದರ್ಭ್ದಲ್ಲಿ ಕರೆಕೊಟ್ಟರು.
ದಕ್ಷಿಣ ಕನ್ನಡ ಜಿಲ್ಲೆಯ ಸಿ.ಎ.ಸಿ.ಎಲ್-ಕೆ ಮತ್ತು ಸಮಾನ ಮನಸ್ಕ ಸಂಘಟೆಗಳ ಪ್ರತಿನಿಧಿಗಳಾದ ಸುರೇಶ ಶೆಟ್ಟಿ, ಸಿಲ್ವೆಸ್ಟರ್ ಡಿಸೋಜ, ನಾಗೇಂದ್ರ ರಾವ್, ಆಶಾಲತಾ, ಉಷಾ ನಾಯಕ, ಪ್ರೇಮಿ ಫೆರ್ನಾಂಡಿಸ್, ತುಕಾರಾಮ್ ಯಕ್ಕಾರು, ಹಸನ್ ಸಾಹೇಬ್, ಆಶಾ ಬೇಕಲ್, ದುರ್ಗಾಪ್ರಸಾದ, ಮತ್ತು ಇತರರು ಭಾಗವಹಿದ್ದರು.
ಹಕ್ಕೊತ್ತಾಯ ಚಳುವಳಿಯ ಮುಖ್ಯ ಅಂಶಗಳು :
1) ಭಾರತದ ಸಂವಿಧಾನದ ಪರಿಛೇದ 24 ನ್ನು ತಿದ್ದುಪಡಿ ಮಾಡಿ 18 ವರ್ಷಕ್ಕಿಂತ ಕೆಳಗಿನ ಮಕ್ಕಳು ಯಾವುದೇ ಉದ್ಯಮ ಅಥವಾ ಘಟಕಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಬೇಕು.
2) ವಿಶ್ವ ಸಂಸ್ಥೆ ಮಕ್ಕಳ ಹಕ್ಕುಗಳ ಒಡಂಬಡಿಕೆ ಮತ್ತು ರಾಷ್ಟ್ರೀಯ ಮಕ್ಕಳ ನೀತಿ 2013 ರಲ್ಲಿ ಒಪ್ಪಿಕೊಂಡಂತೆ ಮಕ್ಕಳೆಂದರೆ 18 ವರ್ಷದೋಳಗಿನ ಎಲ್ಲ ವ್ಯಕ್ತಿಗಳು ಮಕ್ಕಳು ಎಂದು ಎಲ್ಲ ಕಾಯಿದೆಗಳಲ್ಲಿ ತಿದ್ದುಪಡಿಯಾಗಬೇಕು.
3) 18 ವರ್ಷದೊಳಗಿನ ಎಲ್ಲಾ ರೀತಿಯ ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸಿ ಅಪಾಯಕಾರಿ ಮತ್ತು ಅಪಾಯಕಾರಿ ರಹಿತ ಉದ್ದಿಮೆಯೆಂಬ ವರ್ಗೀಕರಣವನ್ನು ನಿಲ್ಲಿಸಬೇಕು.
4) ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ಪ್ರಸ್ತಾಪಿಸಿದಂತೆ ಗುಣಮಟ್ಟದ ಮತ್ತು ಎಲ್ಲರನ್ನೂ ಒಳಗೊಳ್ಳುವ ಶಿಕ್ಷಣವನ್ನು ಎಲ್ಲಾ ಮಕ್ಕಳಿಗೆ ನೀಡುವ ನಿಟ್ಟಿನಲ್ಲಿ ಮಕ್ಕಳ ಶಿಕ್ಷಣ ಹಕ್ಕಿನ ಕಾಯಿದೆ 2009 ನ್ನು 3 ರಿಂದ 6 ವರ್ಷ ಮತ್ತು 14 ರಿಂದ 18 ವರ್ಷ ವಯಸ್ಸಿಗೆ ವಿಸ್ತರಿಸಬೇಕು.
5) ಮಕ್ಕಳ ಹಿತದೃಷ್ಠಿಯಿಂದ ಮಸೂದೆಯನ್ನು ತರುವ ನಿಟ್ಟಿನಲ್ಲಿ ಈಗಾಗಲೇ ಸಿ.ಎ.ಸಿ.ಎಲ್ ತಂದಿರುವ ಮಾದರಿ ಬಾಲಕಾರ್ಮಿಕ ಪದ್ಧತಿ ನಿಷೇಧ ಮಸೂದೆಯ ಕರಡನ್ನು ಕಾರ್ಮಿಕ ಮಂತ್ರಾಲಯವು ಗಣನೆಗೆ ತೆಗೆದುಕೊಂಡು ಅದರಲ್ಲಿರುವ ಅಂಶಗಳ ಬಗ್ಗೆ ಕಾರ್ಮಿಕ ಇಲಾಖೆ ಮತ್ತು ನಾಗರಿಕ ಸಮಾಜದೊಂದಿಗೆ ಮುಕ್ತ ಚರ್ಚೆಗೆ ಅವಕಾಶ ನೀಡಬೇಕು.
6) ಸಾರ್ವಜನಿಕರಿಗೆ ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆಯು ದೇಶದ ಜನತೆಗೆ ಸಾರ್ವಜನಿಕವಾಗಿ ಸಿಗುವಂತೆ ಮಾಡಿ ಸರ್ಕಾರವು ಪಾರದರ್ಶಕತೆಯನ್ನು ಕಾಪಾಡುವಂತೆ ಕ್ರಮ ಕೈಗೊಳ್ಳಬೇಕು.
ತದನಂತರ ಜಿಲ್ಲಾಧಿಕಾರುಯವರ ಮೂಲಕ ರಾಷ್ಟ್ರಪತಿಯವರಿಗೆ, ಪ್ರಧಾನ ಮಂತ್ರಿಯವರಿಗೆ, ಲೋಕಸಭಾ ಸ್ಪೀಕರ್ ರವರಿಗೆ, ರಾಷ್ಟ್ರೀಯ ಕಾಂಗ್ರೆಸ್ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆರವರಿಗೆ, ಯು.ಪಿ.ಎ. ಅಧ್ಯಕ್ಷರಿಗೆ, ಕಾರ್ಮಿಕ ಮತ್ತು ಉದ್ಯೋಗ ಸಚಿವರಿಗೆ, ಜಿಲ್ಲಾಧಿಕಾರಿಯವರಿಗೆ, ಮತ್ತು ಮಂಗಳೂರು ಲೋಕಸಭಾ ಸಂಸತ್ ಸದಸ್ಯರಿಗೆ ಮನವಿಯನ್ನು ಸಲ್ಲಿಸಲಾಯಿತು.




