ಕನ್ನಡ ವಾರ್ತೆಗಳು

ಭಾಷೆಯ ಹೆಚ್ಚಿನ ಉಪಯೋಗದಿಂದ ಆ ಭಾಷೆಯ ಉತ್ತಮ ನಿರ್ಮಾಣ ಹಾಗೂ ನಿರ್ವಹಣೆ ಸಾಧ್ಯ : ಡಾ| ಯು.ಬಿ. ಪವನಜ

Pinterest LinkedIn Tumblr

Allousis_kannada_workshp_1

ಮಂಗಳೂರು,ಜುಲೈ.05: ಒಂದು ಭಾಷೆ ಉಳಿಸಬೇಕಾದರೆ ಹಾಗೂ ಬೆಳೆಸಬೇಕಾದರೆ, ಅದನ್ನು ಜನರು ಬಳಸಬೇಕು ಎಂದು ಭಾರತೀಯ ಭಾಷೆಗಳು, ಬೆಂಗಳೂರು ಇದರ ಯೋಜನಾ ನಿರ್ವಾಹಕ ಡಾ| ಯು.ಬಿ. ಪವನಜ ಸಂತ ಅಲೋಶಿಯಸ್‌ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಕನ್ನಡ ವಿದ್ಯಾರ್ಥಿಗಳಿಗಾಗಿ ಕಾಲೇಜಿನ ಐ.ಟಿ. ಬ್ಲಾಕ್‌ನಲ್ಲಿ ಶನಿವಾರ ಏರ್ಪಡಿಸಲಾದ ಎರಡು ದಿನಗಳ ಕನ್ನಡ ವಿಕಿಪೀಡಿಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

Allousis_kannada_workshp_2 Allousis_kannada_workshp_3

ವಿಕಿಪೀಡಿಯಾದಲ್ಲಿ ಪ್ರಪಂಚದ ಸುಮಾರು 289ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಮಾಹಿತಿ ಲಭ್ಯವಿದ್ದು, ಅವುಗಳಲ್ಲಿ ಭಾರತದ ಸುಮಾರು 23 ಭಾಷೆಗಳಿವೆ. ಇವುಗಳಲ್ಲಿ ಕೊಂಕಣಿ ಭಾಷೆ ಅಭಿವೃದ್ಧಿ ಕಾಣುತ್ತಿದ್ದು, ತುಳು ಭಾಷಾ ಮಾಹಿತಿ ಮಾತ್ರ ಅಷ್ಟೊಂದು ಬೆಳವಣಿಗೆ ಕಂಡಿಲ್ಲ. ಭಾಷೆಗಳ ಮಾಹಿತಿ ತುಂಬಿಸುವ ಕಾರ್ಯ ಯುವ ವಿದ್ಯಾರ್ಥಿಗಳಿಂದ ನಡೆಯಬೇಕು. ವಿಕಿಪೀಡಿಯಾಕ್ಕೆ ಮಾಹಿತಿ ತುಂಬಬೇಕಾದರೆ ಭಾಷೆಯ ತಜ್ಞರಾಗಬೇಕೇಂದೇನಿಲ್ಲ. ಆದರೆ, ಸಂಶೋಧನ ಪೂರಿತ ಉತ್ತಮ ಮಾಹಿತಿ ಸೇರಿಸಬೇಕು. ಇದರಿಂದ ನಮ್ಮಲ್ಲೂ ಜ್ಞಾನ ಬೆಳೆಯುತ್ತದೆ ಹಾಗೂ ಪ್ರಪಂಚಕ್ಕೆ ಜ್ಞಾನ ನೀಡಿದ ಆತ್ಮತೃಪ್ತಿ ನಮ್ಮಲ್ಲಿ ಉಂಟಾಗುತ್ತದೆ ಎಂದರು.

ಮಂಗಳೂರು ಆಕಾಶವಾಣಿಯ ನಿಲಯ ನಿರ್ದೇಶಕ ವಸಂತ ಕುಮಾರ್‌ ಪೆರ್ಲ ಮಾತನಾಡಿ, ಈ ಮಾಹಿತಿ ಸ್ಫೋಟದ ಯುಗದಲ್ಲಿ ಪ್ರತಿಯೊಂದನ್ನೂ ಅಂತರ್ಜಾಲದ ಮುಖಾಂತರವೇ ಪಡೆಯುವುದರಿಂದ ಕನ್ನಡದಲ್ಲೂ ವಿಷಯ ಪೂರೈಸುವ ಕೆಲಸವಾಗಬೇಕು. ಯುವಕರು ತಂತ್ರಜ್ಞಾನದಲ್ಲಿ ಮುಂದಿರುವುದರಿಂದ ಜ್ಞಾನ ಹಾಗೂ ಅನುಭವ ಹೊಂದಿರುವ ಹಿರಿಯರೊಂದಿಗೆ ಸೇರಿ ಈ ಕೆಲಸ ನಡೆಸಬೇಕು. ಇಂದಿಗೂ ಅದೆಷ್ಟೋ ಉತ್ತಮ ಮಾಹಿತಿಗಳು ಪುಸ್ತಕದಲ್ಲೇ ಅಡಗಿದ್ದು, ಅವುಗಳನ್ನು ತಂತ್ರಜ್ಞಾನಕ್ಕೆ ಅಳವಡಿಸುವಲ್ಲಿ ಯುವಜನರು ಕಾರ್ಯಪ್ರವೃತ್ತರಾಗಬೇಕು ಎಂದರು.

Allousis_kannada_workshp_5 Allousis_kannada_workshp_7

ಕಾಲೇಜಿನ ಸಂಶೋಧನ ವಿಭಾಗದ ನಿರ್ದೇಶಕ ಫಾ| ಡಾ| ಪ್ರವೀಣ್‌ ಮಾರ್ಟಿಸ್‌ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಸಿಐಎಸ್‌ನ ರಹಮಾನುದ್ದೀನ್‌ ಶೇಖ್‌, ಅತಿಥಿಯಾಗಿ ಕಾಲೇಜಿನ ಹಣಕಾಸು ಅಧಿಕಾರಿ ಫಾ| ವಾಲ್ಟರ್‌ ಆಂದ್ರಾದೆ ಭಾಗವಹಿಸಿದ್ದರು. ಉಪನ್ಯಾಸಕ ಡಾ| ವಿಶ್ವನಾಥ ಬದಿಕಾನ ಸ್ವಾಗತಿಸಿ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ| ಸರಸ್ವತಿ ವಂದಿಸಿದರು.

Write A Comment