ಕನ್ನಡ ವಾರ್ತೆಗಳು

ಅಹ್ಮದಾಬಾದ್ ಮಾದರಿ ಅನುಸರಿಸಲಿರುವ ಮಂಗಳೂರು ಆಟೋ ಚಾಲಕರು

Pinterest LinkedIn Tumblr

Auto_drver_sabe_1

ಮಂಗಳೂರು, ಜೂನ್.20: ದೈನಂದಿನ ಆದಾಯಕ್ಕಾಗಿ ಪರಿಶ್ರಮ ಪಡುವ ಮಂಗಳೂರು ನಗರದ ಆಟೋ ಚಾಲಕರು ಹೆಚ್ಚುವರಿ ಆದಾಯ ಮತ್ತು ಆರ್ಥಿಕ,ಸಾಮಾಜಿಕ ಭದ್ರತೆಗಾಗಿ ಅಹ್ಮದಾಬಾದ್ ಮಾದರಿಗೆ ಮೊರೆ ಹೋಗಿದ್ದು, ಮೊದಲ ಹಂತವಾಗಿ ಮೂವತ್ತು ಲಕ್ಷ ರೂಪಾಯಿ ಮೂಲ ಶೇರು ಬಂಡವಾಳದೊಂದಿಗೆ ಕುಡ್ಲ ಸೌಹಾರ್ದ ಸಹಕಾರಿ ನಿಯಮಿತವನ್ನು ಸ್ಥಾಪಿಸಲು ಉದ್ದೇಶಿಸಿದ್ದಾರೆ. ನಗರದ ದಕ್ಷಿಣ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕರ ಸಂಘದ ಆಶ್ರಯದಲ್ಲಿ ರಿಕ್ಷಾ ಚಾಲಕರ ಕ್ಷೇಮಾಭಿವೃದ್ಧಿ ಸಹಕಾರಿ ಸಂಘದ ಸ್ಥಾಪನೆ ಬಗ್ಗೆ ಸಮಾಲೋಚನಾ ಸಭೆಯನ್ನು ಶನಿವಾರ ನಗರದ ಪೊಲೀಸ್ ಲೇನ್ ನಾಸಿಕ್ ಬಂಗೇರ ಸಭಾ ಭವನದಲ್ಲಿ ನಡೆಯಿತು.

ಆಟೋ ಚಾಲಕ, ಮಾಲಕರು ದಿನವಿಡೀ ಎಷ್ಟೇ ದುಡಿದರು ದೈನಂದಿನ ಖರ್ಚಿಗಾಗಿ, ಮಕ್ಕಳ ಶಿಕ್ಷಣ, ಮನೆ ಮತ್ತಿತರ ಸಾಮಾಜಿಕ ಆರ್ಥಿಕ ಭದ್ರತೆಗಾಗಿ ಪರದಾಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ಈಗಿರುವ ವ್ಯವಸ್ಥೆಯಲ್ಲೇ ಪರ್ಯಾಯ ಆದಾಯ ಬೇಕಾಗಿದೆ. ಅದಕ್ಕಾಗಿ ಅಹ್ಮದಾಬಾದಿನ ಐ‌ಐ‌ಎಂ ವಿದ್ಯಾರ್ಥಿ ಅಭಿವೃದ್ಧಿ ಪಡಿಸಿದ ಜಿ‌ಎಸ್ ಆಟೋ ಮಾದರಿಯಲ್ಲೇ ಮಂಗಳೂರಿನಲ್ಲಿ ಹೊಸ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ ಎಂದು ಸಮಾಲೋಚನಾ ಸಭೆ ಉದ್ಘಾಟಿಸಿದ ಸಾಮಾಜಿಕ ಕಾರ್ಯಕರ್ತ ಯು.ಮೋಹನಚಂದ್ರ ಪ್ರಕಟಿಸಿದರು.

Auto_drver_sabe_2 Auto_drver_sabe_3 Auto_drver_sabe_4

ಇಂತಹ ಪ್ರಯತ್ನವನ್ನು ಸಾಕಾರ ಮಾಡಲು ಕುಡ್ಲ ಸೌಹಾರ್ದ ಸಹಕಾರಿ ಸಂಘ ಸ್ಥಾಪನೆ ಮಾಡಲಾಗುತ್ತಿದೆ. ಇದರ ಮೂಲಕ ಸಂಘದ ಸದಸ್ಯರಾಗುವ ರಿಕ್ಷಾ ಚಾಲಕ,ಮಾಲಕ ಮತ್ತವರ ಆಶ್ರಯದಾತರಿಗೆ ತುರ್ತು ಸಾಲ ಸಹಿತ ಎಲ್ಲ ರೀತಿಯ ಬ್ಯಾಂಕಿಂಗ್ ಸೌಲಭ್ಯ, ಸಂಘದ ವತಿಯಿಂದಲೇ ಬಿಡಿಭಾಗ ಮಾರಾಟ ಮಳಿಗೆ ಇತ್ಯಾದಿಗಳನ್ನು ಆರಂಭಿಸುವ ಅವಕಾಶವಿದೆ. ಅದೇ ರೀತಿ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕೂಡ ನೀಡಲಾಗುತ್ತದೆ. ಹೆಚ್ಚಿನ ಆದಾಯಕ್ಕಾಗಿ ಆಟೋ ರಿಕ್ಷಾಗಳಲ್ಲಿ ಡಿಜಿಟಲ್ ಜಾಹಿರಾತು ಪ್ರದರ್ಶಿಸುವ ಯೋಜನೆ ಇದೆ ಎಂದು ಮೋಹನಚಂದ್ರ ವಿವರಿಸಿದರು.

ಹನ್ನೊಂದು ಮಂದಿ ಸೇರಿಕೊಂಡು ಪ್ರಸ್ತಾವಿತ ಕುಡ್ಲ ಸೌಹಾರ್ದ ಸಹಕಾರದ ಸಂಘಟನೆ ಆರಂಭಿಸಿ ಶೇರು ಬಂಡವಾಳ ಸಂಗ್ರಹಿಸಲಾಗುತ್ತಿದೆ. ಈಗಾಗಲೇ ಅಂದಾಜು ಹದಿನೈದು ಲಕ್ಷ ರೂಪಾಯಿ ಸಂಗ್ರಹಿಸಲಾಗಿದ್ದು, ಇನ್ನೆರಡು ತಿಂಗಳಲ್ಲಿ ಕನಿಷ್ಟ 750 ಶೇರುದಾರರ ಸಹಿತ ಮೂವತ್ತು ಲಕ್ಷ ಸಂಗ್ರಹಿಸುವ ಗುರಿ ಇರಿಸಲಾಗಿದೆ ಎಂದು ಆಟೋ ರಿಕ್ಷಾ ಚಾಲಕರ ಸಂಘದ ಕೋಶಾಧಿಕಾರಿ ಮತ್ತು ಪ್ರವರ್ತಕರಾದ ಪ್ರಕಾಶ್ ವಿವರಿಸಿದರು. ಅಸಂಘಟಿತ ಆಟೋ ಚಾಲಕ, ಮಾಲಕ ವರ್ಗದ ಕ್ಷೇಮಾಭಿವೃದ್ಧಿಗಾಗಿ ಸರಿಯಾದ ಸರಕಾರಿ ನೀತಿ ನಿಯಮಗಳ ಕೊರತೆಯಿಂದ ಇಂದು ಆಟೋ ವಲಯದ ಕಾರ್ಮಿಕರು ಆರ್ಥಿಕ, ಸಾಮಾಜಿಕ ಅಭದ್ರತೆಯನ್ನು ಎದುರಿಸುತ್ತಿದ್ದಾರೆ. ವಸತಿ,ಶಿಕ್ಷಣಕ್ಕಾಗಿ ಆಟೋ ಚಾಲಕರು ಪರದಾಡಬೇಕಾಗಿದೆ. ಹೊಸ ಸಂಸ್ಥೆಯು ಆಟೋ ಕಾರ್ಮಿಕರಿಗೆ ಸೂಕ್ತ ಭರವಸೆಯನ್ನು ಒದಗಿಸಲಿ ಎಂದು ಆಟೋ ಚಾಲಕರ ಸಂಘದ ಗೌರವ ಅಧ್ಯಕ್ಷ ಆಲಿ ಹಸನ್ ಹಾರೈಸಿದರು.

Auto_drver_sabe_5 Auto_drver_sabe_6 Auto_drver_sabe_7 Auto_drver_sabe_8 Auto_drver_sabe_9

ಆಟೋ ಚಾಲಕರು ಕುಡ್ಲ ಸೌಹಾರ್ದ ಸಹಕಾರಿಯ ಸದಸ್ಯರಾಗುವ ಮೂಲಕ ರಾಜ್ಯ ಸರಕಾರದ ಯಶಸ್ವಿನಿ ಆರೋಗ್ಯ ಯೋಜನೆಯ ಸೌಲಭ್ಯವನ್ನು ಪಡೆಯಲು ಅರ್ಹರಾಗುತ್ತಾರೆ. ಮಾತ್ರವಲ್ಲದೆ, ಸ್ವಂತ ವ್ಯಾಪಾರ ಸಾಲ,ವೈಯಕ್ತಿಕ ಸಾಲ, ವಿಮೆ, ಶಿಕ್ಷಣಕ್ಕೆ ಧನ ಸಹಾಯ, ಪಿಂಚಣಿ ಯೋಜನೆ,ಗುಂಪು ವಿಮೆ, ಕೇಂದ್ರ ಸರಕಾರದ ಆರ್ಥಿಕ ವಿಮಾ ಯೋಜನೆ ಸಹಿತ ಹಲವಾರು ಕಾರ್ಯಕ್ರಮಗಳ ಪ್ರಯೋಜನ ಪಡೆಯುವುದಲ್ಲದೆ, ಸಂಘದ ಲಾಭಾಂಶವನ್ನು ಪಡೆಯಲು ಅರ್ಹರಾಗುತ್ತಾರೆ ಎಂದು ಬೆಂಗಳೂರು ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನದ ನಿರ್ದೇಶಕ ಪಿ.ರಾಮಚಂದ್ರ ರಾವ್ ಸಲಹೆ ನೀಡಿದರು.ಸಭೆಯ ಅಧ್ಯಕ್ಷತೆಯನ್ನು ಆಟೋ ಚಾಲಕರ ಸಂಘದ ಅಧ್ಯಕ್ಷ ಆಲ್ಪೋನ್ಸ್ ಡಿಸೋಜ ವಹಿಸಿದ್ದರು. ಅಜೀಮ್ ಪ್ರೇಂಜಿ ಪ್ರತಿಷ್ಠಾನದ ಉಮಾಶಂಕರ್ ಪೆರ್ವೋಡಿ ಅವರು ಸಂಘಟನೆಯ ಸಾಧ್ಯತೆ ಭಾದ್ಯತೆಗಳನ್ನು ವಿವರಿಸಿದರು.

ಆಟೋ ಚಾಲಕರ ಸಂಘದ ಕಾರ್ಯಾಧ್ಯಕ್ಷ ಅಶೋಕ್ ಕೊಂಚಾಡಿ ಅವರು ನಿಯೋಜಿತ ಕುಡ್ಲ ಸೌಹಾರ್ದ ಸಹಕಾರಿಯ ಕುರಿತು ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಟಾಟಾ ಎ‌ಐಜಿಯ ರಂಜಿತ್ ಶೆಟ್ಟಿ, ಸಂಘದ ಸುಭಾಸ್ ಕಾವೂರ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Write A Comment