ಕರ್ನಾಟಕ

ನಾಳೆ ನಗರದೆಲ್ಲೆಡೆ ಯೋಗ; ಶಿಲ್ಪಾಶೆಟ್ಟಿ ಕೇಂದ್ರ ಬಿಂದು

Pinterest LinkedIn Tumblr

Shilpa-Shetty

ಬೆಂಗಳೂರು, ಜೂ. 20: ಅಂತಾರಾಷ್ಟ್ರೀಯ ಯೋಗ ದಿನಕ್ಕೆ ನಗರದಲ್ಲಿ ಭಾರೀ ಸಿದ್ಧತೆ ನಡೆದಿದ್ದು, ಸಚಿವರು, ಶಾಸಕರಾದಿಯಾಗಿ ಸಾವಿರಾರು ಮಂದಿ ನಾಳೆಯ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧ ಸಂಘ ಸಂಸ್ಥೆಗಳು ಬೇರೆ ಬೇರೆ ಕಡೆಗಳಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ನಗರದ ನಿವಾಸಿಗಳಿಗೆ ನಾಳೆ `ಯೋಗ`ದ ದಿನವಾಗಲಿದೆ.

ಶ್ವಾಸ ಸಂಸ್ಥೆ ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ಕಾರ್ಯಕ್ರಮವೊಂದರಲ್ಲೇ 15 ಸಾವಿರಕ್ಕೂ ಹೆಚ್ಚು ಮಂದಿ ಯೋಗಾಭ್ಯಾಸ ಮಾಡಲಿದ್ದಾರೆ. ನಟ-ನಟಿಯರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಎಲ್ಲರ ಕೇಂದ್ರ ಬಿಂದುವಾಗಲಿದ್ದು, ವಿವಿಧ ಆಸನಗಳ ಪ್ರದರ್ಶನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಭಾಗವಹಿಸಲಿದ್ದಾರೆ.

ಪತಂಜಲಿ ಯೋಗ ಶಿಕ್ಷಣ ಸಮಿತಿ ಸಾಣೇಗುರುವನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಅಲ್ಲಿ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಅಕ್ಷರ ಪವರ್ ಯೋಗ ಅಕಾಡೆಮಿಯು ಮಾಂಫೋ ಕನ್ವೆನ್ಷನ್ ಸೆಂಟರ್‍ನಲ್ಲಿ, ರಾಷ್ಟ್ರೋತ್ಥಾನ ಪರಿಷತ್ ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ, ಆರೋಗ್ಯ ಮಂದಿರ ಟ್ರಸ್ಟ್ ಯೋಗ ಶಿಬಿರವನ್ನು ಆಯೋಜಿಸಿವೆ.

ಅದೇ ರೀತಿ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠ, ಬ್ರಹ್ಮಾ ಕುಮಾರೀಸ್, ಬೆಂಗಳೂರು ವಿಶ್ವವಿದ್ಯಾಲಯ, ವಿಜಯನಗರ ಫೈನ್ಸ್ ಆಟ್ರ್ಸ್ ಸ್ಕೂಲ್, ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರ ಸೇರಿದಂತೆ ಹಲವು ಸಂಘ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಕಾರ್ಯಕ್ರಮ ಆಯೋಜಿಸಿದೆ.

ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ತಾನು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಸ್ಪಷ್ಟಪಡಿಸಿರುವುದರಿಂದ ಬಹುತೇಕ ಸಚಿವರು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಆಯುಷ್ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿರುವುದರಿಂದ ನಗರ ಸೇರಿದಂತೆ ರಾಜ್ಯಾದ್ಯಂತ ಕಾರ್ಯಕ್ರಮ ಯಶಸ್ವಿಯಾಗಲಿದೆ. ರಾಜ್ಯದಲ್ಲಿರುವ ಕೇಂದ್ರ ಸಚಿವರು ಕೂಡ ಕಾರ್ಯಕ್ರಮದ ಯಶಸ್ವಿಗೆ ಅಹರ್ನಿಶಿ ಶ್ರಮಿಸುತ್ತಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಸೂಚನೆ ಬಂದಿದ್ದು, ಈ ನಿಟ್ಟಿನಲ್ಲಿ ವಿವಿಧೆಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಕೇಂದ್ರೀಯ ಶಾಲೆಗಳಲ್ಲಿ ಯೋಗ ಪ್ರದರ್ಶನ ನಡೆಯಲಿದೆ. ಜಿಲ್ಲಾಮಟ್ಟದಲ್ಲೂ ಕಾರ್ಯಕ್ರಮ ಆಯೋಜಿಸಲಾಗಿದ್ದು, ನೂರಾರು ಮಂದಿ ಭಾಗವಹಿಸುವ ಸಾಧ್ಯತೆ ಇದೆ.

Write A Comment