ಮುಂಬೈ

ಮುಂಬೈ ಕಳ್ಳಭಟ್ಟಿ ದುರಂತಕ್ಕೆ ಬಲಿ ಸಂಖ್ಯೆ 84ಕ್ಕೇರಿಕೆ

Pinterest LinkedIn Tumblr

mu

ಮುಂಬೈ (ಪಿಟಿಐ): ಇಲ್ಲಿನ ಮಲಾಡ್‌ ಪ್ರದೇಶದ ಲಕ್ಷ್ಮಿ ನಗರ ಕೊಳೆಗೇರಿಯಲ್ಲಿ ಸಂಭವಿಸಿದ ಕಳ್ಳಬಟ್ಟಿ ಸಾರಾಯಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 84ಕ್ಕೆ ಏರಿದೆ. ಮತ್ತೊಂದೆಡೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಯ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 84ಕ್ಕೆ ಏರಿಕೆಯಾಗಿದ್ದು, ನಗರ 8 ವಿವಿಧ ಆಸ್ಪತ್ರೆಗಳಲ್ಲಿ 34 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮುಂಬೈ ಪೊಲೀಸ್ ವಕ್ತಾರ ಧನಂಜಯ್ ಕುಲಕರ್ಣಿ ಅವರು ತಿಳಿಸಿದ್ದಾರೆ.

ಅಲ್ಲದೇ, ಘಟನೆ ಸಂಬಂಧ ಐವರನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಮೈನಕಾ ಬಾಯಿ ತಲೆಮರಿಸಿಕೊಂಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

84 ಜನರನ್ನು ಬಲಿಪಡೆದಿರುವ ಈ ಕಳ್ಳಬಟ್ಟಿ ದುರಂತ ಎರಡನೇ ಅತಿದೊಡ್ಡ ದುರ್ಘಟನೆಯಾಗಿದೆ. ಮುಂಬೈ ಉಪ ನಗರ ವ್ಯಾಪ್ತಿಯ ವಿಖ್ರೋಳಿಯಲ್ಲಿ 2004ರಲ್ಲಿ ನಡೆದ ಕಳ್ಳಬಟ್ಟಿ ದುರಂತದಲ್ಲಿ 87 ಮಂದಿ ಬಲಿಯಾಗಿದ್ದರು.

ಮತ್ತೊಂದೆಡೆ, ಪ್ರಕರಣ ಸಂಬಂಧ ನಿನ್ನೆ (ಶುಕ್ರವಾರ) ರಾಜು ಹನುಮಂತ ಪಾಸ್ಕರ್‌ (50), ಡೊನಾಲ್ಡ್‌ ರಾಬರ್ಟ್‌ ಪಟೇಲ್‌ (47) ಹಾಗೂ ಗೌತಮ್‌ ಹರ್ಟೆ ಎಂಬವರನ್ನು ಬಂಧಿಸಲಾತ್ತು. ಐಪಿಸಿ 304 (ಕೊಲೆ ಉದ್ದೇಶವಿಲ್ಲದೇ ಮಾಡಿದ ಹತ್ಯೆ), 328 (ನಿಷೇಧಿತ ಮದ್ಯ ಮಾರಾಟ) ಹಾಗೂ ಐಪಿಸಿ 34 (ಅಬಕಾರಿ ಕಾಯ್ದೆ) ಅಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಗ್ಗೆ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಒಬ್ಬ ಪೊಲೀಸ್‌ ಇನ್‌ಸ್ಪೆಕ್ಟರ್‌, ಮೂವರು ಪೊಲೀಸ್‌ ಅಧಿಕಾರಿಗಳು, ನಾಲ್ವರು ಕಾನ್‌ಸ್ಟೆಬಲ್‌ಗಳು ಸೇರಿದಂತೆ ಒಟ್ಟು 8 ಮಂದಿಯನ್ನು ಅಮಾನತುಪಡಿಸಲಾಗಿದೆ ಎಂದು ಮುಂಬೈ ನಗರ ಪೊಲೀಸ್‌ ಕಮಿಷನರ್‌ ರಾಕೇಶ್‌ ಮಾರಿಯಾ ತಿಳಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು, ಘಟನೆ ಸಂಬಂಧ ತನಿಖೆ ನಡೆಸಿ ಎರಡು ದಿನಗಳ ಒಳಗಾಗಿ ವರದಿ ನೀಡುವಂತೆ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Write A Comment