Mumbai

ಉಡುಪಿಯಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಮಾಲೋಚನಾ ಸಭೆ; ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಸರಕಾರ ಉತ್ತೇಜಿಸಲಿ- ಶಾಸಕ ಸುರೇಶ್ ಶೆಟ್ಟಿ ಗುರ್ಮೆ

Pinterest LinkedIn Tumblr

ಮುಂಬಯಿ: ಕರಾವಳಿಯ ಉಭಯ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಅಭಿವೃದ್ಧಿಗಾಗಿ ಸುಮಾರು 23 ವರ್ಷಗಳ ಹಿಂದೆ ಮುಂಬಯಿಯ ಉದ್ಯಮಿ, ಸಮಾಜಸೇವಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಇವರ ಮುಂದಾಳುತ್ವದಲ್ಲಿ ಸ್ಥಾಪನೆಗೊಂಡ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಯ ವತಿಯಿಂದ ನ. 18, ಕರಾವಳಿ ಕರ್ನಾಟಕದ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿ ಹಾಗೂ ಕಡಲು ಕೊರೆತಕ್ಕೆ ಶಾಶ್ವತ ಪರಿಹಾರ ಮತ್ತು ರುದ್ರಭೂಮಿಗಳಲ್ಲಿ ವಿದ್ಯುತ್ ಚಿತೆ ನಿರ್ಮಿಸುವ ಯೋಜನೆ ಬಗ್ಗೆ ಸಮಾಲೋಚನಾ ಸಭೆಯು ಶೇಷಶಯನ ಸಭಾಗೃಹ ಕಿದಿಯೂರು ಹೋಟೆಲ್ ಉಡುಪಿಯಲ್ಲಿ ಸಮಿತಿಯ ಅಧ್ಯಕ್ಷರಾದ ಎಲ್. ವಿ ಅಮೀನ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶವಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡಲ್ಲಿ ಉದ್ಯೋಗ ಸೃಷ್ಟಿಯ ಜೊತೆಗೆ ಆರ್ಥಿಕಾಭಿವೃದ್ಧಿ ಸಾಧ್ಯವಾಗಲಿದೆ. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಕೈಗೊಂಡಿರುವ ಯೋಜನೆಗಳಿಗೆ ತಾನು ಕಾಯಾ, ವಾಚಾ, ಮನಸ್ಸಿನಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಜಿಲ್ಲಾಧ್ಯಕ್ಷ ಡಿ. ಆರ್. ರಾಜು ಕಾರ್ಕಳ ಅವರು ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರವಿಷಯ ಮಂಡಿಸಿ ರಾಜ್ಯದ ಪ್ರವಾಸೋದ್ಯಮದಲ್ಲಿ ಕರಾವಳಿ ಕರ್ನಾಟಕದ ಪಾತ್ರ ಮಹತ್ತರವಾಗಿದೆ. ಕರಾವಳಿ ಕರ್ನಾಟಕದ ಉಳ್ಳಾಲದಿಂದ ಕಾರವಾರ ವರೆಗಿನ ಸುಮಾರು 320 ಕಿ.ಮೀ. ಸಮುದ್ರ ತೀರ ನಿರಂತರವಾಗಿ ಪ್ರತೀವರ್ಷ ಕಡಲ್ಕೊರೆತದ ಹೊಡೆತಕ್ಕೆ ಸಿಲುಕಿದ್ದರೂ ಈವರೆಗೂ ಕಡಲ್ಕೊರೆತ ತಡೆಗಟ್ಟುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ.ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸೂಕ್ತ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಸಂಪರ್ಕ ರಸ್ತೆ ಚತುಷ್ಪಥ ಅಭಿವೃದ್ಧಿ ವಿಚಾರದಲ್ಲಿ ಕರಾವಳಿಯ ಜಿಲ್ಲೆಗಳು ತೀರಾ ಹಿಂದುಳಿದಿವೆ. ಪ್ರಮುಖವಾಗಿ ನಮ್ಮ ಜಿಲ್ಲೆಗಳಿಗೆ ಸಂಪರ್ಕ ಕೊಂಡಿಯಾಗಿರುವ ಪಶ್ಚಿಮ ಘಟ್ಟ ಶ್ರೇಣಿಯ ರಸ್ತೆಗಳ ಅಭಿವೃದ್ಧಿಯಾಗಬೇಕು. ಎಲ್ಲಾ ಪ್ರಮುಖ ಸಂಪರ್ಕ ರಸ್ತೆಗಳು ಚತುಷ್ಪಥ ರಸ್ತೆಗಳಾದರೆ ಮೂಲಸೌಕರ್ಯ ಅಭಿವೃದ್ಧಿಯಾಗುತ್ತದೆ. ಜೊತೆಗೆ ಪ್ರವಾಸೋದ್ಯಮವೂ ಬೆಳೆಯಲು ಸಾಧ್ಯವಿದೆ. ಕಡಲ್ಕೊರೆತ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಸ್ಥಳೀಯರ ತಾಂತ್ರಿಕ ಪರಿಣಿತ ತಂತ್ರಜ್ಞರ ಜೊತೆ ಸಭೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ. ಕರಾವಳಿ ಜಿಲ್ಲೆಗಳ ಯುವಜನತೆಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಅವಿಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಉದ್ಯೋಗದಾತ ಹೊಸ
ಕಂಪೆನಿಗಳು ಬರಬೇಕು. ಈಗಿರುವ ವಿದ್ಯುತ್ ಕಂಪೆನಿಗಳಲ್ಲಿ ಶೇ. 95ರಷ್ಟು ಹೊರ ರಾಜ್ಯದವರೇ ತುಂಬಿದ್ದು ಸ್ಥಳೀಯರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಕರಾವಳಿ ಜಿಲ್ಲೆಗಳಲ್ಲಿ ಕೈಗಾರಿಕೆ ಹಾಗೂ ವಾಣಿಜ್ಯ ಚಟುವಟಿಕೆಗಳು ಬೆಳೆಯಬೇಕಿದೆ. ಅಲ್ಲದೇ ಪರಿಸರ ಸಂರಕ್ಷಣೆ, ನೆಲ, ಜಲ ಸಂರಕ್ಷಣೆಯಲ್ಲಿ ನಮ್ಮ ಸಂಘಟನೆ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದೆ. ಅರಣ್ಯ ನಾಶ ತಡೆಯುವ ನಿಟ್ಟಿನಲ್ಲಿ ರುದ್ರಭೂಮಿಗಳಲ್ಲಿ ವಿದ್ಯುತ್ ಚಿತಾಗಾರವನ್ನು ನಿರ್ಮಾಣ ಮಾಡಬೇಕು ಎನ್ನುವುದು ಸರ್ಕಾರಕ್ಕೆ ನಮ್ಮ ಒತ್ತಾಯವಾಗಿದೆ ಎಂದರು.

ಸಮಿತಿಯ ಅಂತರಾಷ್ಟ್ರೀಯ ಉಪಾಧ್ಯಕ್ಷರಾದ ಯುಎಇ ಯ ಡಾ. ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಮಾತನಾಡುತ್ತಾ ಪರಿಸರ ಪ್ರೇಮಿ ಪ್ರಾರಂಭ ಆದ್ದರಿಂದ ಜಿಲ್ಲೆ ಎಷ್ಟು ಅಭಿವೃದ್ಧಿಗೊಂಡಿದೆ ಎನ್ನುವುದು ನಾವೆಲ್ಲರೂ ಅವಲೋಕಿಸ ಬೇಕಾಗಿದೆ. ಜಿಲ್ಲೆಯ ವಿದ್ಯಾವಂತರು ಉದ್ಯೋಗವನ್ನು ಅರಸಿ ಜಗತ್ತಿನ ಮೂಲೆ ಮೂಲೆಗೆ ಉದ್ಯೋಗವನ್ನು ಅರಸಿ ಹೋಗಿದ್ದಾರೆ. ಅದಕ್ಕೆ ಕಾರಣ ನಮ್ಮ ಜಿಲ್ಲೆಯಲ್ಲಿ ಉದ್ಯಮಗಳು ಬೃಹತ್ ಮಟ್ಟದಲ್ಲಿ ಬೆಳೆದಿಲ್ಲ. ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಬರುತ್ತಿಲ್ಲ ನಾವೆಲ್ಲರೂ ಶ್ರಮವಹಿಸಬೇಕಾಗಿದೆ. ಸರಕಾರ ಉದ್ಯಮಿಗಳಿಗೆ ಮತ್ತು ಉದ್ಯೋಗಕ್ಕೆ ವಿಶೇಷವಾದ ಸೌಲಭ್ಯಗಳನ್ನು ಸಹಕಾರಗಳನ್ನು ನೀಡಬೇಕು ಹಾಗಿದ್ದರೆ ಮಾತ್ರ ಬೃಹತ್ ಕಂಪನಿಗಳು ನಮ್ಮ ಜಿಲ್ಲೆಯ ಯುವಕರಿಗೆ ಉದ್ಯೋಗ ಮತ್ತು ಮೆಟ್ರೋ ಸಿಟಿ ಆಗಬಹುದು. ಕರಾವಳಿ ಪ್ರದೇಶವನ್ನು ಸರಕಾರ ಪ್ರವಾಸೋದ್ಯಮ ಆಗುವಂತೆ ಕಾರ್ಯನಿರ್ವಹಿಸಬೇಕು. ಅದಕ್ಕೆ ಸಮಿತಿ ಎಲ್ಲಾ ರೀತಿಯ ಸಹಕಾರ ನೀಡುತ್ತದೆ ಎಂದು ನುಡಿದರು. ಜಿಲ್ಲಾ ಸಮಿತಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಜಯಶ್ರೀ ಕೃಷ್ಣ ಪರಿಸರ ಸಮಿತಿಗೆ ದ.ಕ ಮತ್ತು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಅರುಣ್ ಪ್ರಕಾಶ್ ಶೆಟ್ಟಿ ಅವರಿಗೆ ಶಾಲು ಹೊದಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಉಪಾಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲಿಯಾನ್, ಗೌರವ ಕೋಶಾಧಿಕಾರಿ ತುಳಸಿದಾಸ್ ಎಲ್. ಅಮೀನ್, ಪ್ರದೀಪ್ ಎನ್.ಆರ್. ಕಾರ್ಕಳ, ಗೌರವ ಕಾರ್ಯದರ್ಶಿ ಪ್ರೊ. ಶಂಕರ್, ಮಾಜಿ ಅಧ್ಯಕ್ಷರಾದ ಹರೀಶ್ ಕುಮಾರ್ ಶೆಟ್ಟಿ, ಧರ್ಮಪಾಲ್ ಯು. ದೇವಾಡಿಗ ಉಪಸ್ಥಿತರಿದ್ದರು.

ಉಪಾಧ್ಯಕ್ಷ ನಿತ್ಯಾನಂದ ಡಿ ಕೋಟ್ಯಾನ್ ಪ್ರಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಧನ್ಯವಾದ ರ್ಪಿಸಿದರು. ಜಿಲ್ಲಾ ಗೌರವ ಜೊತೆ ಕಾರ್ಯದರ್ಶಿ ಸುರೇಂದ್ರ ಮೆಂಡನ್ ಕಾರ್ಯಕ್ರಮ ಸಂಯೋಜಿಸುವಲ್ಲಿ ಸಹಕರಿಸಿದರು.

ಸಭೆಯಲ್ಲಿ ಪರಿಸರ ಪ್ರೇಮಿ ಸಮಿತಿಯ ಉಪಾಧ್ಯಕ್ಷ. ಜಿ ಟಿ ಆಚಾರ್ಯ. ಹಿರಿಯಡ್ಕ ಮೋಹನ್ದಾಸ್ ಜೊತೆ ಕಾರ್ಯದರ್ಶಿ ರವಿ ದೇವಾಡಿಗ , ಹ್ಯಾರಿ ಸಿಕ್ವೇರ, ಸದಸ್ಯರುಗಳಾದ ರಮಾನಂದ ರಾವ್ .ಡಾ. ವಿಜಯಕುಮಾರ್ ಶೆಟ್ಟಿ, ರಾಕೇಶ್ ಭಂಡಾರಿ, ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಜಿ ಎಸ್ ನಾಯಕ್. ನ್ಯಾಯವಾದಿ ಸತೀಶ್ ಬಂಗೇರ, ಪತ್ರಕರ್ತ ಹೇಮರಾಜ್ ಕರ್ಕೇರ, ರಾಜು ಮೆಂಡನ್ ಮತ್ತಿತರರು ಪಾಲ್ಗೊಂಡಿದ್ದರು.

ವಿದ್ಯುತ್ ಚಿತಾಗಾರದ ಸಾಮಾಗ್ರಿಗಳಿಗೆ ಸರಕಾರಸಬ್ಸಿಡಿ ನೀಡುವಂತೆ ಆಗ್ರಹ: ತೋನ್ಸೆ ಜಯಕೃಷ್ಣ ಶೆಟ್ಟಿ
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ ಮಾತನಾಡಿ, ಕಳೆದ 40 ವರ್ಷಗಳಿಂದ ಸರ್ಕಾರಗಳು ಕಡಲ್ಕೊರೆತ ಬಗ್ಗೆ ಕೆಲಸ ಮಾಡುತ್ತಾ ಬಂದಿದ್ದರೂ ಸಮಸ್ಯೆ ಬಗೆಹರಿದು ಸಮುದ್ರಕ್ಕೆ ಹಾಕಿದ ಕಲ್ಲುಗಳು ಭೂಮಟ್ಟಕ್ಕೆ ತಲುಪುತ್ತಿಲ್ಲ. ಮಹಾರಾಷ್ಟ್ರ ಮಾದರಿಯಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.
ಒಬ್ಬ ವ್ಯಕ್ತಿ ಸತ್ತಾಗ ಆತನ ಶವವನ್ನು ಸುಡಲು ಸುಮಾರು 500 ಕೆ.ಜಿ ಯಷ್ಟು ಕಟ್ಟಿಗೆ ಬೇಕಾಗುತ್ತದೆ ಅಲ್ಲದೆ ಅದರಿಂದ ಹೊರ ಬರುವ ಹೊಗೆಯೂ ಪರಿಸರ ಮಾಲಿನ್ಯವನ್ನು ಉಂಟು ಮಾಡುತ್ತದೆ ಆದ್ದರಿಂದ ವಿದ್ಯುತ್ ಚಿತಾಗಾರ ನಿರ್ಮಾಣ ರುದ್ರಭೂಮಿಗಳಲ್ಲಿ ವಿದ್ಯುತ್ ಚಿತಾಗಾರ ರಚಿಸಲು ಸರಕಾರ ಮುಂದಾಗಬೇಕು. ಆ ಮೂಲಕ ಪರಿಸರ ಹಾಗೂ ಅರಣ್ಯ ಸಂಪತ್ತನ್ನು ಉಳಿಸುವ ಕೆಲಸ ಆಗಬೇಕಿದೆ. ಮಾತ್ರವಲ್ಲದೆ ವಿದ್ಯುತ್ ಚಿತಾಗಾರದ ಸಾಮಾಗ್ರಿಗಳಿಗೆ ಸಬ್ಸಿಡಿ ನೀಡುವಂತೆ ಆಗ್ರಹಿಸಿದರು.

ಅವಿಭಜಿತ ಜಿಲ್ಲೆಯ ಅಭಿವೃದ್ಧಿಗೆ ಸರಕಾರ ಸೂಕ್ಷ್ಮವಾಗಿ ಗಮನಿಸಿ ಎಲ್ಲಾ ಯೋಜನೆಗಳನ್ನು ರೂಪಿಸಿಕೊಳ್ಳಬೇಕು; ಎಲ್. ವಿ. ಅಮೀನ್
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ಎಲ್. ವಿ. ಅಮೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಲ್ಲೆಯ ಅಭಿವೃದ್ಧಿಗಾಗಿ ಪರಿಸರ ಪ್ರೇಮಿ ಪ್ರಾರಂಭದಿಂದಲೂ ಮಹಾತ್ವರ ವಾದ ಹೋರಾಟವನ್ನು ನಡೆಸಿ ಎಲ್ಲಾ ಹೋರಾಟಗಳಲ್ಲೂ ಜಯವನ್ನು ಸಾಧಿಸಿಕೊಂಡು ಬಂದಿದೆ ಜಿಲ್ಲೆಯಲ್ಲಿ ಕೈಗಾರಿಕೋಧ್ಯಮಗಳು ಬರಬೇಕು ಅದರಿಂದ ಇನ್ನಷ್ಟು ನಮ್ಮ ಜಿಲ್ಲೆಯ ಅಭಿವೃದ್ಧಿಯಾಗುತ್ತದೆ. ಕಡಲ್ಕೊರೆತ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.ವಿದ್ಯುತ್ ಚಿತ್ರಗಾರ ಹೋಗುವಲ್ಲಿ ಸರಕಾರ ಗಮನ ಹರಿಸಬೇಕು. ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಳ ಮಹತ್ವ ಮನವಿಯನ್ನು ಸರಕಾರಕ್ಕೆ ಈಗಾಗಲೇ ನೀಡಿದ್ದೇವೆ ಇದನ್ನು ಸೂಕ್ಷ್ಮವಾಗಿ ಗಮನಿಸಿ ಜಿಲ್ಲೆಯ ಅಭಿವೃದ್ಧಿಗೆ ಬೇಕಾಗುವ ಎಲ್ಲಾ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದು ನುಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಅರುಣ್ ಪ್ರಕಾಶ್ ಶೆಟ್ಟಿ ಅವರಿಗೆ ಶಾಲು ಹೊದಿಸಿ ಗೌರವಿಸಲಾಯಿತು.

Comments are closed.