ಕರ್ನಾಟಕ

ಬೈಕ್ ಕಳ್ಳರ ಸೆರೆ; 18 ದ್ವಿಚಕ್ರ ವಾಹನ ವಶ

Pinterest LinkedIn Tumblr

Bikes

ಬೆಂಗಳೂರು, ಜೂ.20: ಡ್ಯೂಕ್ ಸೇರಿದಂತೆ ದುಬಾರಿ ಬೈಕ್‌ಗಳನ್ನು ನಕಲಿ ಕೀ ಬಳಸಿ ಕಳವು ಮಾಡುತ್ತಿದ್ದ ಐವರನ್ನು ಬಂಧಿಸಿರುವ ಪಶ್ಚಿಮ ವಿಭಾಗದ ಪೊಲೀಸರು 10 ಲಕ್ಷ ಮೌಲ್ಯದ 18 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾಮಾಕ್ಷಿಪಾಳ್ಯ ಪೊಲೀಸರು ಮಂಡ್ಯದ ದುದ್ದ ಗ್ರಾಮದ ವೆಂಕಟೇಶ(38)ನನ್ನು ಬಂಧಿಸಿ 5 ಲಕ್ಷ ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಡಿಸಿಪಿ ಲಾಬೂರಾಮ್ ತಿಳಿಸಿದ್ದಾರೆ.

ಹಳೆ ಆರೋಪಿಯಾದ ಈತ ಬಸವೇಶ್ವರನಗರ, ಸೋಲದೇವನಹಳ್ಳಿ, ಹನುಮಂತನಗರ, ತ್ಯಾಗರಾಜನಗರ, ಅಮೃತಹಳ್ಳಿ, ಕೆ.ಪಿ.ಅಗ್ರಹಾರ, ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮನೆ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಮಂಡ್ಯ ಜಿಲ್ಲೆಗೆ ತೆರಳಿ ಮಾರಾಟ ಮಾಡುತ್ತಿದ್ದನು.

ಹಿಂದೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದರೂ ತನ್ನ ಹಳೆಯ ಚಾಳಿ ಮುಂದುವರೆಸಿದ್ದ. ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಇನ್ಸಪೆಕ್ಟರ್ ಹರೀಶ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ.

ಕಾಟನ್‌ಪೇಟೆ ಪೊಲೀಸ್ ಠಾಣೆ ಪೊಲೀಸರು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ನಾಗವಾರದ ಇಮ್ರಾನ್ ಖಾನ್(20), ಎಂ.ಡಿ.ಮುಜಾಯಿದ್(28), ಸೈಯದ್(26) ಹಾಗೂ ದುಬೈ ಲೇಔಟ್‍ನ ಇರ್ಫಾನ್ ಬೇಗ್(24)ನನ್ನು ಬಂಧಿಸಿ 5 ಲಕ್ಷ ಮೌಲ್ಯದ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ.

ಆರೋಪಿಗಳು ಕಳವು ಮಾಡಿದ ದ್ವಿಚಕ್ರ ವಾಹನಗಳಲ್ಲಿ ಕೆಟಿಎಂ ಡ್ಯೂಕ್ ಮಾದರಿ ವಾಹನ ಒಂದಾಗಿದ್ದು ಅದರ ಮೌಲ್ಯ ಒಂದೂವರೆ ಲಕ್ಷ ರೂ.ಗಳಾಗಿವೆ. ಮತ್ತೊಂದು ಫ್ರೇಜರ್ ಕಂಪನಿಯದಾಗಿದೆ. ಅವರ ಮೌಲ್ಯ 90 ಸಾವಿರ ಎಂದು ತಿಳಿದುಬಂದಿದೆ ಎಂದು ಹೇಳಿದರು.

ಆರೋಪಿಗಳ ಬಂಧನದಿಂದ ಕಾಟನ್‌ಪೇಟೆಯ 3, ಇಂದಿರಾನಗರದ 2 ಪ್ರಕರಣಗಳು, ಚಿಕ್ಕಪೇಟೆ, ಜ್ಞಾನ ಭಾರತಿ ಮತ್ತು ಶಿವಾಜಿನಗರ ಪೊಲೀಸ್ ಠಾಣೆಗಳ ಒಂದೊಂದು ಪ್ರಕರಣಗಳು ಸೇರಿ ಒಟ್ಟು 8 ಪ್ರಕರಣಗಳು ಪತ್ತೆಯಾಗಿವೆ.

ಕಾಟನ್‌ಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಜಿ.ಆರ್.ರಮೇಶ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರು ಬೈಕ್ ಶೋಕಿ ಹಾಗೂ ಐಷಾರಾಮಿ ಜೀವನ ನಡೆಸಲು ಬೈಕ್ ಕಳವು ಮಾಡುತ್ತಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು ತಿಳಿಸಿದರು.

Write A Comment