ಕನ್ನಡ ವಾರ್ತೆಗಳು

ವಿಶ್ವ ಯೋಗ ದಿನಾಚರಣೆಗೆ ಜಿಲ್ಲಾಡಳಿತ ಸಜ್ಜು : ಎ.ಬಿ.ಇಬ್ರಾಹಿಂ

Pinterest LinkedIn Tumblr

DC_Press_Meet

ಮಂಗಳೂರು, ಜೂನ್. 18 : ವಿಶ್ವಾದ್ಯಂತ ಜೂನ್ 21 ರಂದು ವಿಶ್ವ ಯೋಗ ದಿನಾಚರಣೆ ಯನ್ನು ಆಚರಿಸುತ್ತಿದ್ದು, ಮಂಗಳೂರು ನಗರದಲ್ಲಿಯೂ ಯೋಗ ದಿನಾಚರಣೆಯನ್ನು ಜಿಲ್ಲಾಡಳಿತ ,ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಆಚರಿಸಲು ಸರ್ವ ಸಜ್ಜುಗೊಂಡಿದ್ದು, ಅಂದು ಬೆಳಿಗ್ಗೆ 8.30 ಗಂಟೆಗೆ ನಗರದ ಟಿ.ಎಂ.ಎ.ಪೈ ಕನ್ ವೆನ್ವೆಷನ್ ಹಾಲ್‌ನಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಅವರು ವಿಶ್ವ ಯೋಗ ದಿನಾಚರಣೆಗೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಿಳಿಸಿದ್ದಾರೆ.ಅವರು ಗುರುವಾರ ಈ ಸಂಬಂಧ ನಡೆದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರ್ನಾಟಕ ಅಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯ ಮೂಡಬಿದ್ರೆ, ಫಾದರ್ ಮುಲ್ಲರ್ ಹೋಮಿಯೊಪತಿ ವೈದ್ಯಕೀಯ ಮಹಾವಿದ್ಯಾಲಯ, ಸರ್ಕಾರಿ ವೆನ್‌ಲಾಕ್ ನರ್ಸಿಂಗ್ ವಿದ್ಯಾರ್ಥಿಗಳು, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸದಸ್ಯರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ,ಕ್ರೀಡಾ ಶಾಲೆ ವಿದ್ಯಾರ್ಥಿಗಳು, ವಿವಿಧ ಯುವ ಕ್ರೀಡಾ ಕ್ಲಬ್‌ಗಳ ಸದಸ್ಯರು, ಆಶಾ ಕಾರ್ಯಕರ್ತರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿಗಳು ಸೇರಿದಂತೆ ಕಛೇರಿಯ ಎಲ್ಲಾ ಸಿಬ್ಬಂದಿಗಳು ಸೇರಿದಂತೆ ಸುಮಾರು 600 ಕ್ಕೂ ಹೆಚ್ಚು ಜನರು ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಯೋಗ ಮಾಡಲಿದ್ದಾರೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ದೇವದಾಸ್ ಅವರು ಮಾಹಿತಿ ನೀಡಿದರು.

ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸುವವರು ಸಡಿಲವಾದ ಉಡುಪುಗಳನ್ನು ಧರಿಸಿ ತಮ್ಮ ತಮ್ಮ ಯೋಗ ಮ್ಯಾಟ್‌ಗಳನ್ನು ತಾವೇ ತರುವಂತೆ ಜೋಕಟ್ಟೆ ಸರಕಾರಿ ಆಯುಷ್ ಆಸ್ಪತ್ರೆ ವೈದ್ಯಾಧಿಕಾರಿ ಡಾ||ಮುರಳೀಧರ್ ಅವರು ಮನವಿ ಮಾಡಿದರು.ಯೋಗ ಮತ್ತು ಮುದ್ರೆ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ಈ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.

ಸಭೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪಾಂಡುರಂಗ ಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವಾಲ್ಟರ್ ಡಿ ಮೆಲ್ಲೋ ಮುಂತಾದವರು ಉಪಸ್ಥಿತರಿದ್ದರು.

Write A Comment