ಕನ್ನಡ ವಾರ್ತೆಗಳು

ಮರಳು ಸಾಗಾಟಕ್ಕೆ ಕಡಿವಾಣ ಹಾಕದ ಜಿಲ್ಲಾಡಳಿತ -ಹೊರ ರಾಜ್ಯಕ್ಕೆ ಭರದಿಂದ ಸಾಗುತ್ತಿದೆ ಅಕ್ರಮ ಮರಳುಗಾರಿಕೆ.

Pinterest LinkedIn Tumblr

SAND

ಮಂಗಳೂರು,ಜೂನ್.03: ದ.ಕ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಕಡಿವಾಣ ಹಾಕಲು ಜಿಲ್ಲಾಧಿಕಾರಿ, ಎಸ್‌ಪಿ ಸಭೆಗಳ ಮೇಲೆ ಸಭೆ ನಡೆಸಿದರೂ ಯಾವುದೇ ಬದಲಾವಣೆಯಾಗಿಲ್ಲ. ಬದಲಿಗೆ ಜೆಲ್ಲೆಯಿಂದ ಮರಳು ರಾಜಾರೋಷವಾಗಿ ಹೊರ ರಾಜ್ಯ, ಜಿಲ್ಲೆಗಳಿಗೆ ಸಾಗಾಟವಾಗುತ್ತಿದೆ. ಕಾರಣ ಮರಳುಗಾರಿಕೆಯ ಹಿಂದಿರುವ ದೊಡ್ಡ ಕುಳಗಳು, ಬೆಂಗಳೂರಿನಲ್ಲಿ ಕುಳಿತಿರುವ ದೊರೆಗಳು. ರಸ್ತೆ ಕಾಮಗಾರಿಯಿಂದ ಚಾರ್ಮಾಡಿ ಘಾಟಿಯಲ್ಲಿ ಘನವಾಹನ ಸಂಚಾರ ನಿಷೇಧವಾದರೂ ಮರಳು ತುಂಬಿದ ಲಾರಿಗಳು ಮಾತ್ರ ಯಾವುದೇ ಅಡೆತಡೆ ಇಲ್ಲದೆ ಸಂಚರಿಸುತ್ತಿವೆ.

ಜಿಲ್ಲೆಯ ಜೀವನದಿ ನೇತ್ರಾವತಿ, ಕುಮಾರಧಾರ ಸೇರಿದಂತೆ ಜಿಲ್ಲೆಯ ನದಿ ಪಾತ್ರಗಳಿಗೆ ಯಂತ್ರಗಳನ್ನು ನುಗ್ಗಿಸಲಾಗುತ್ತಿದೆ. ಈ ಮರಳನ್ನು ಕೇರಳ ರಾಜ್ಯ ಸೇರಿದಂತೆ ಮೈಸೂರು, ಬೆಂಗಳೂರು, ಹಾಸನ ಜಿಲ್ಲೆಗಳಿಗೆ ಅಕ್ರಮವಾಗಿ ಸಾಗಿಸಿ ಬಾರೀ ಮೊತ್ತದ ಹಣ ಸಂಪಾದಿಸಲಾಗುತ್ತಿದೆ.

ಬೇಲಿಯೇ ಎದ್ದು ಹುಲ್ಲು ಮೇಯುವಾಗ ಯಾರ ಮೇಲೆ ಕ್ರಮಕೈಗೊಳ್ಳುವುದು ಎಂಬುದೇ ಪೊಲೀಸ್ ಇಲಾಖೆಗೆ ಚಿಂತೆಯಾಗಿದೆ. ಪ್ರಭಾವಿ ವ್ಯಕ್ತಿಗಳ ಕೈಯಲ್ಲಿರುವ ಮರಳು ಮಾಫಿಯಾದಿಂದ ಚೆಕ್‌ಪೋಸ್ಟ್‌‌ನಿಂದ ಹಿಡಿದು ಪ್ರತಿ ಪೊಲೀಸ್ ಠಾಣೆ, ಅಧಿಕಾರಿಗಳಿಗೂ ಮಮೂಲಿ ಸಂದಾಯವಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಬೆಂಗಳೂರಿನಲ್ಲಿ ಮರಳಿನ ಅಭಾವ ಇರುವುದರಿಂದ ಕರಾವಳಿಯಿಂದ ಮರಳು ಸಾಗಾಟಕ್ಕೆ ಸರ್ಕಾರವೇ ಅಲಿಖಿತ ಅನುಮತಿ ನೀಡಿದೆ ಎನ್ನಲಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಮರಳು ಮಾಫಿಯಾದ ವಿರುದ್ಧ ಕ್ರಮ ಕೈಗೊಳ್ಳುವುದು ಕೇವಲ ಕಣ್ಣೊರೆಸುವ ತಂತ್ರವಷ್ಟೆ. ಒಂದು ಕಡೆ ತಡೆದರೆ ಇನ್ನೊಂದು ಕಡೆ ಒಳಮಾರ್ಗವಾಗಿ ಮರಳು ತುಂಬಿದ ಲಾರಿಗಳು ರಾತ್ರಿ ವೇಳೆ ಸಂಚರಿಸುತ್ತಿವೆ.

ಅಂತರ್ ಜಿಲ್ಲಾ ಮರಳು ಸಾಗಾಟ ನಿರ್ಬಂಧವನ್ನು ತೆಗೆದುಹಾಕಿ ಮುಕ್ತ ಸಾಗಾಟಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿರುವುದರಿಂದ ಸ್ಥಳೀಯರು ಮರಳಿನ ಅಭಾವ ಎದುರಿಸುವಂತಾಗಿದೆ. ಜಿಲ್ಲೆಯಿಂದ ದುಬಾರಿ ಬೆಲೆಗೆ ಹೊರ ಜಿಲ್ಲೆಗಳಿಗೆ ಮರಳು ಸಾಗಾಟ ನಡೆಯುತ್ತಿದೆ. ಇದನ್ನು ವಿರೋಧಿಸಿ ಸಿವಿಲ್ ಕಂಟ್ರಾಕ್ಟರ್ಸ್ ಅಸೋಸಿಯೇಶನ್ ಪ್ರತಿಭಟನೆ ನಡೆಸುವುದಾಗಿ ಅಸೋಸಿಯೇಶನ್ ಅಧ್ಯಕ್ಷ ಎಂ. ಪುರುಷೋತ್ತಮ ಕೊಟ್ಟಾರಿ ಎಚ್ಚರಿಸಿದ್ದಾರೆ.

ಮುಕ್ತ ಮರಳು ಸಾಗಾಟಕ್ಕೆ ಅವಕಾಶ ನೀಡಿರುವುದರಿಂದ ದಿನವೊಂದಕ್ಕೆ 300ಕ್ಕೂ ಮಿಕ್ಕಿ ಘನ ವಾಹನಗಳಲ್ಲಿ 20ರಿಂದ 25 ಟನ್‍ನಷ್ಟು ಮರಳು ಲಾರಿಯಲ್ಲಿ ತುಂಬಿಸಿ ಬೇರೆ ಜಿಲ್ಲೆಗಳಿಗೆ ರವಾನಿಸಲಾಗುತ್ತಿದೆ. ಒಟ್ಟಾರೆ ದಿನಕ್ಕೆ 6000ದಿಂದ 8000ಟನ್‍ನಷ್ಟು ಮರಳನ್ನು ದುಬಾರಿ ಬೆಲೆಗೆ ಅಕ್ರಮವಾಗಿ ಸಾಗಿಸಲಾಗುತ್ತಿದೆ.

Write A Comment