ಕನ್ನಡ ವಾರ್ತೆಗಳು

ಸರ್ಫಿಂಗ್: ಪ್ರತಿ ವಿಭಾಗದಲ್ಲಿ 10 ಮಂದಿ ಅಗತ್ಯ : ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ.

Pinterest LinkedIn Tumblr

surfing_dc_meet

ಮಂಗಳೂರು, ಮೇ.19: ಮೇ 29ರಿಂದ 31 ರವರೆಗೆ ಪಣಂಬೂರು ಬೀಚ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಯ ಪ್ರತೀ ವಿಭಾಗದಲ್ಲಿ ಪುರುಷರಲ್ಲಿ ಕನಿಷ್ಠ 10 ಹಾಗೂ ಮಹಿಳೆಯರಲ್ಲಿ ಕನಿಷ್ಠ 6 ಸ್ಪರ್ಧಾಳುಗಳು ಇದ್ದಲ್ಲಿ ಮಾತ್ರ ಬಹುಮಾನ ನೀಡಲು ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.

ಅವರು ಸೋಮವಾರ ಈ ಸಂಬಂಧ ತಮ್ಮ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಪ್ರತೀ ವಿಭಾಗದಲ್ಲಿ ನಿಗದಿತ ಸ್ಪರ್ಧಾಳುಗಳು ಭಾಗವಹಿಸದಿದ್ದರೂ ಸ್ಪರ್ಧೆ ನಡೆಸಲಾಗುವುದು. ಆದರೆ ಬಹುಮಾನಕ್ಕೆ ಪರಿಗಣಿಸಲಾಗದು ಎಂದು ಅವರು ಹೇಳಿದರು. ಈಗಾಗಲೇ ಆಯೋಜಕರು 28 ಲಕ್ಷ ರೂ.ಗಳ ಅಂದಾಜು ವೆಚ್ಚ ಪಟ್ಟಿಯನ್ನು ಸಲ್ಲಿಸಿದ್ದಾರೆ. ಉದ್ಘಾಟನಾ ಕಾರ್ಯಕ್ರಮ ಮೇ 29ರಂದು ಬೆಳಿಗ್ಗೆ 7 ಗಂಟೆಗೆ ನಡೆಯಲಿದೆ ಎಂದರು.

ಶಾಸಕ ಬಿ.ಎ. ಮೊಹಿದೀನ್ ಬಾವಾ ಅವರು ಮಾತನಾಡಿ, ಸರ್ಫಿಂಗ್ ಉತ್ಸವಕ್ಕೆ ಹೆಚ್ಚು ಸಾರ್ವಜನಿಕರನ್ನು ಆಕರ್ಷಿಸುವ ದೃಷ್ಠಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೇದಿಕೆಯಲ್ಲಿ ಆಯೋಜಿಸಬೇಕು ಎಂದರು. ಸರ್ಫಿಂಗ್ ಪ್ರಯುಕ್ತ ಪಣಂಬೂರು ಬೀಚ್ ಸುತ್ತಮುತ್ತಲ ಮೂಲಸೌಕರ್ಯಗಳನ್ನು ಇನ್ನಷ್ಟು ಉತ್ತಮಗೊಳಿಸಲಾಗುವುದು. ಇದೊಂದು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಾಗಿರುವುದರಿಂದ ಸ್ಥಳೀಯ ಕಾರ್ಪೋರೇಟ್ ಸಂಸ್ಥೆಗಳೂ ಇದಕ್ಕ್ಕೆ ಸಹಕರಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವಪ್ರಭು, ಯತೀಶ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು.

Write A Comment