ಉಳ್ಳಾಲ, ಮೇ 12: ಉಳ್ಳಾಲ ಬೀಚ್‌ನಲ್ಲಿ ಸಮುದ್ರಕ್ಕೆ ಸ್ನಾನ ಮಾಡಲು ಇಳಿದ ಇಬ್ಬರನ್ನು ತಡೆದ ವಿಚಾರಕ್ಕೆ ಸಂಬಂಧಿಸಿ ಇತ್ತಂಡಗಳ ನಡುವೆ ಮಾತಿನ ಚಕಮಕಿ ನಡೆದು, ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಉಳ್ಳಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮೊಗವೀರಪಟ್ನ ನಿವಾಸಿ ವಾಸುದೇವ (35) ವಿಜಯ್(40) ಜಿತೇಂದ್ರ(40) ಎಂದು ಗುರುತಿಸಲಾಗಿದೆ.
ದೇರಳಕಟ್ಟೆ ನಿವಾಸಿಗಳಾದ ಅಲ್ಫಾಝ್, ನೌಷಾದ್ , ಸಿನಾನ್ ಸಹಿತ ಐವರ ತಂಡ ಉಳ್ಳಾಲ ಮೊಗವೀರಪಟ್ಣ ಸಮುದ್ರ ತೀರಕ್ಕೆ ವಿಹಾರಕ್ಕೆಂದು ರವಿವಾರ ತೆರಳಿತ್ತು. ಕ್ಷುಲ್ಲಕ ವಿಚಾರಕ್ಕೆ ಇತ್ತಂಡಗಳ ಮಧ್ಯೆ ವಾಗ್ವಾದ ನಡೆದಿತ್ತು. ಈ ಬಗ್ಗೆ ಉಳ್ಳಾಲ ಠಾಣೆಗೆ ದೇರಳಕಟ್ಟೆಯ ತಂಡದವರು ಮೊಗವೀರಪಟ್ಣದ ನಿವಾಸಿಗಳು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದರು.
ಮುಕ್ಕಚ್ಚೇರಿ ಸಮೀಪ ಶನಿವಾರ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮುಕ್ಕಚ್ಚೇರಿ ನಿವಾಸಿ ಅರ್ಶಾದ್ ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.