ಕನ್ನಡ ವಾರ್ತೆಗಳು

71,000 ರೂ. ಮೌಲ್ಯದ ಅಕ್ರಮ ದಾಸ್ತಾನು ಅಕ್ಕಿ ಮತ್ತು 4 ಲ.ರೂ. ಗಳ ಲಾರಿ ವಶ.

Pinterest LinkedIn Tumblr

rice_mile_ried

ಮಂಗಳೂರು, ,ಎಪ್ರಿಲ್.25 : ನಗರದ ಹಳೆ ಬಂದರು ಪ್ರದೇಶದಲ್ಲಿಯ ಸಗಟು ಮಾರಾಟ ಮಳಿಗೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನಿರಿಸಿ ಸಾಗಾಟಕ್ಕೆ ಯತ್ನಿಸಿದ್ದ ಪಡಿತರ ವ್ಯವಸ್ಥೆಯಡಿಯ 71 ಗೋಣಿ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡು ಅಂಗಡಿಯ ಮಾಲಕನನ್ನು ಬಂಧಿಸಿದ್ದಾರೆ. ಹಳೆಯ ಬಂದರು ಪ್ರದೇಶದ ಕೆನರಾ ಚೇಂಬರ್ಸ್ ರಸ್ತೆ ಬದಿಯಲ್ಲಿರುವ ಶ್ರೀ ಪ್ರಸಾದ್ ಟ್ರೇಡಿಂಗ್ ಕಂಪನಿಯ ಮಾಲಕ, ಕೊಡಿಯಾಲಗುತ್ತು ‘ಶ್ರೀ ಪ್ರಸಾದ್’ ಮನೆಯ ನಿವಾಸಿ ದೇವದಾಸ್ ಭಟ್ (52) ಬಂಧಿತ ಆರೋಪಿ.

ಶ್ರೀ ಪ್ರಸಾದ್ ಟ್ರೇಡಿಂಗ್ ಕಂಪನಿಯಲ್ಲಿ ಸರಕಾರದಿಂದ ಪಡಿತರ ವ್ಯವಸ್ಥೆಯಡಿ ವಿತರಣೆಯಾದ ಬೆಳ್ತಿಗೆ ಅಕ್ಕಿಯನ್ನು ಯಾವುದೋ ದಾಖಲೆಗಳಿಲ್ಲದೆ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದು ಹೆಚ್ಚಿನ ಬೆಲೆಗೆ ಮಾರಾಟಕ್ಕಾಗಿ ಬೇರೆಡೆಗೆ ಸಾಗಿಸಲಾಗಿತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಪಾಂಡೇಶ್ವರ ಪೊಲೀಸರು ಅಲ್ಲಿಗೆ ದಾಳಿ ನಡೆಸಿದಾಗ ಹೊರಗಡೆ ನಿಲ್ಲಿಸಲಾಗಿದ್ದ ಲಾರಿಯ ಬಳಿ ನಿಂತಿದ್ದ ಇಬ್ಬರ ಪೈಕಿ ಓರ್ವ ಪರಾರಿಯಾಗಿದ್ದರೆ, ದೇವದಾಸ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಲಾರಿಯಲ್ಲಿ ತಲಾ 50 ಕೆ.ಜಿ. ತೂಕದ ನಾಲ್ಕು ಚೀಲ ಬೆಳ್ತಿಗೆ ಅಕ್ಕಿಯಿದ್ದು, ಗೋದಾಮನ್ನು ತಪಾಸಣೆ ನಡೆಸಿದಾಗ ತಲಾ 50 ಕೆ.ಜಿ. ತೂಕದ 67 ಚೀಲ ಬೆಳ್ತಿಗೆ ಅಕ್ಕಿ ಪತ್ತೆಯಾಗಿದೆ.

ಇದು ಪಡಿತರ ಅಕ್ಕಿಯಾಗಿದ್ದು, ಶಿವಮೊಗ್ಗದ ನಿವಾಸಿಯೋರ್ವನಿಂದ ಖರೀದಿಸಿದ್ದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಭಟ್ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

71000 ರೂ. ಮೌಲ್ಯದ ಅಕ್ಕಿ ಮತ್ತು 4 ಲ.ರೂ. ಮೌಲ್ಯದ ಲಾರಿಯನ್ನು ವಶಪಡಿಸಿಕೊಂಡಿರುವ ಪಾಂಡೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Write A Comment