ಕನ್ನಡ ವಾರ್ತೆಗಳು

ಮುಡಿಪು ಪವಾಡ ಬೆಟ್ಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ

Pinterest LinkedIn Tumblr

Mudupi_chrh_photo_1

ಕೊಣಾಜೆ, ಎ.25 : ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರವಾಗಿದ್ದು, ಇಲ್ಲಿ ಹಲವಾರು ಧರ್ಮ, ಜಾತಿ, ಭಾಷೆ ಮುಂತಾದವುಗಳಲ್ಲಿ ವ್ಯತ್ಯಾಸಗಳಿದ್ದರೂ ಎಲ್ಲರೂ ಏಕತೆಯ ಭಾವದಿಂದ ಬದುಕುತ್ತಿದ್ದೇವೆ. ಆದರೆ ಕೆಲವೊಂದು ಮತಾಂಧರಿಂದಾಗಿ ಇಡೀ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಮತಾಂಧ ತಾನು ಹಾಳಾಗುವುದಲ್ಲದೆ ಇಡೀ ಸಮಾಜವನ್ನು ಕೆಡಿಸುತ್ತಿದ್ದಾನೆ. ಈ ಬಗ್ಗೆ ನಾವು ಎಚ್ಚರಿಕೆಯಿಂದ ಇದ್ದುಕೊಂಡು ಶಾಂತಿ ನೆಮ್ಮದಿಯ, ಪ್ರೀತಿ ವಿಶ್ವಾಸದ ಸಮಾಜವನ್ನು ಕಟ್ಟಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಅವರು ಶುಕ್ರವಾರ ಮುಡಿಪುವಿನ ಸಂತ ಜೋಸೆಫ್‌ವಾಝ್ ಪವಾಡಬೆಟ್ಟಕ್ಕೆ ಭೇಟಿ ನೀಡಿ ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ ಕೆಲ ದಿನಗಳ ಹಿಂದೆ ಜೋಸೆಫ್‌ವಾಝ್ ಅವರಿಗೆ ಸಂತ ಪದವಿ ದೊರೆತಾಗ ಮುಡಿಪುವಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದೆ. ಆದರೆ ಅನಿವಾರ್ಯ ಕಾರಣದಿಂದ ಇಲ್ಲಿಗೆ ಬರಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಉಳ್ಳಾಲ ಕಾರ್ಯಕ್ರಮಕ್ಕೆ ಬಂದು ಮುಡಿಪುವಿನ ಪವಾಡಬೆಟ್ಟಕ್ಕೆ ಬರಲು ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ ಎಂದು ಹೇಳಿದರು. ಎಲ್ಲಾ ಧರ್ಮಗಳು ಮಾನವನ ಏಳಿಗೆಗಾಗಿ ಇರುವಂತಹುದು. ನಮ್ಮ ಸರಕಾರವು ಸಂವಿಧಾನ ಬದ್ಧ್ದವಾಗಿ ಎಲ್ಲ ಧರ್ಮದ ಜನರ ರಕ್ಷಣೆ, ಪ್ರೋತ್ಸಾಹ, ಉತ್ತಮ ಆಡಳಿತವನ್ನು ಸಮಾನವಾಗಿ ನೀಡುತ್ತಿದೆ. ಅಲ್ಲದೆ ಎಲ್ಲಾ ಧರ್ಮಗಳು ಮಾನವೀಯ ವೌಲ್ಯಗಳನ್ನು ಹೆಚ್ಚಿಸುವಂತಹ ಕೆಲಸ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ರಾಜ್ಯ ಸರಕಾರದಿಂದ ಮುಡಿಪುವಿನ ಸಂತ ಜೋಸೆಫ್‌ವಾಝ್ ಪವಾಡಬೆಟ್ಟಕ್ಕೆ ಘೋಷಣೆ ಮಾಡಿದ್ದ 25 ಲಕ್ಷ ಮೊತ್ತದ ಚೆಕ್ ವಿತರಿಸಿದರು. ಅಲ್ಲದೆ ಪ್ರವಾಸೋದ್ಯಮ ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆರ್ಥಿಕ ಸಹಕಾರವನ್ನು ಒದಗಿಸುವುದಾಗಿ ಭರವಸೆ ನೀಡಿದರು.

Mudipu_chrh_photo_3 Mudipu_chrh_photo_4 Mudipu_chrh_photo_5 Mudipu_chrh_photo_6

ಕ್ರೈಸ್ತ ಧರ್ಮಗುರು ಮಾತನಾಡಿ, ಕ್ರೈಸ್ತ ಅಭಿವೃದ್ಧಿ ಮಂಡಳಿಯನ್ನು ಕ್ರೈಸ್ತ ಅಭಿವೃದ್ಧಿ ನಿಗಮ ಎಂಬ ಪರಿವರ್ತನೆ ಹಾಗೂ 135 ವರ್ಷಗಳ ಇತಿಹಾಸ ಹೊಂದಿರುವ ಫಾದರ್ ಮುಲ್ಲರ್ಸ್‌ ಸಂಸ್ಥೆಯನ್ನು ಡೀಮ್ಡ್ ವಿಶ್ವವಿದ್ಯಾನಿಲಯವಾಗಿ ರೂಪಿಸಲು ಸಹಕಾರ ನೀಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ನೀಡಿದರು.ಕಾರ್ಯಕ್ರಮದ ಆರಂಭದಲ್ಲಿ ಸಂತಜೋಸೆಫ್ ವಾಝ್ ಕ್ಷೇತ್ರದ ವತಿಯಿಂದ ಮುಖ್ಯಮಂತ್ರಿ ಅವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮುಡಿಪು ಪವಾಡಬೆಟ್ಟ ಕ್ಷೇತ್ರದ ಧರ್ಮಗುರು ಫಾ.ಗ್ರೆಗೋರಿ ಡಿಸೋಜಾ ಅವರು ಸ್ವಾಗತಿಸಿ, ಸಂತಜೋಸೆಫ್ ವಾಝ್ ಬೆಟ್ಟದ ಪರಿಚಯವನ್ನು ಮಾಡಿದರು.

ಕಾರ್ಯಕ್ರಮದಲ್ಲಿ ಸಚಿವ ಯು.ಟಿ.ಖಾದರ್, ರಮಾನಾಥ ರೈ, ಖಮರುಲ್ ಇಸ್ಲಾಂ, ವಿನಯ್‌ಕುಮಾರ್ ಸೊರಕೆ, ಐವನ್ ಡಿಸೋಜಾ, ಶಾಸಕರಾದ ಮೊಯ್ದಿನ್‌ಬಾವ, ಜೆ.ಆರ್.ಲೋಬೊ, ಜಿಲ್ಲಾಧಿಕಾರಿ ಇಬ್ರಾಹೀಂ, ಮಂಗಳೂರು ವಿ.ವಿ.ಕುಲಸಚಿವ ಪ್ರೊ.ಕೆ.ಬೈರಪ್ಪ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Write A Comment