ಮಂಗಳೂರು,ಮಾರ್ಚ್.16 : ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ 40 ವಾರಗಳ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಎಂಬ ಕಾರ್ಯಕ್ರಮದ 7 ನೇ ವಾರದ ಸ್ವಚ್ಚತಾ ಅಭಿಯಾನವನ್ನು ನಗರದ ಪಾಂಡೇಶ್ವರ ಪರಿಸರದಲ್ಲಿ ಕೈಗೊಳ್ಳಲಾಯಿತು. ಮಂಗಳೂರು ರಾಮಕೃಷ್ಣ ಮಿಷನ್ನಿನ ಅಧ್ಯಕ್ಷರಾದ ಸ್ವಾಮಿಜೀ ಕಾಮಾನಂದಜಿಯವರ ಸಮ್ಮುಖದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. ಸಂಚಾರಿ ಪೋಲಿಸ್ ಉಪಆಯುಕ್ತರಾದ ಶ್ರೀ ಉದಯ ನಾಯಕ್ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಸುಮಾರು 120 ಪದವಿ ವಿದ್ಯಾರ್ಥಿಗಳು, ಆಶ್ರಮದ ಭಕ್ತರು ಹಾಗೂ ಹಿತೈಷಿಗಳು ಸ್ವಚ್ಚತಾ ಕಾರ್ಯ ಕೈಗೊಂಡರು.
ಸ್ವಯಂಸೇವಕರ ತಂಡವು ಪಾಂಡೇಶ್ವರ ರೈಲೆ ಕ್ರಾಸಿಂಗ್ ಬಳಿ ವರ್ಷಾಂತರಗಳಿಂದ ಶೇಖರಗೊಂಡಿದ್ದ ಕಸದ ರಾಶಿಯನ್ನು ತೆರವುಗೊಳಿಸಿ ಜೆ. ಸಿ. ಬಿ. ಯಂತ್ರದ ಮೂಲಕ ನೆಲವನ್ನು ಸಮತಟ್ಟುಗೋಳಿಸಲಾಯಿತು.ತದನಂತರ ಕ್ರಾಸಿಂಗ್ ಬಳಿ ವಾಹನಗಳ ಸರಾಗ ಮತ್ತು ಕ್ರಮಬದ್ಧ ಸಂಚಾರಕ್ಕಾಗಿ ರಸ್ತೆ ವಿಭಾಜಕಗಳನ್ನು ಅಳವಡಿಸಲಾಯಿತು. ಪಾಂಡೆಶ್ವರ ಸುತ್ತ ಮುತ್ತಲಿನ ಪರಿಸರದಲ್ಲಿ ಸ್ವಚ್ಚತಾ ಕಾರ್ಯಕೈಗೊಂಡು, ಮನೆಮನೆಗೆ ತೆರಳಿ ಜಾಗೃತಿ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು.
ಇದರ ಮುನ್ನಾದಿನ ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಸ್ವಯಂಸೇವಕರಿಗೆ,ವಿದ್ಯಾರ್ಥಿಗಳಿಗೆ ರಾಮಕೃಷ್ಣ ಮಿಷನ್ನಿನಲ್ಲಿ ಸ್ವಚ್ಚ ಮನಸ್ಸು ಎಂಬ ಕಾರ್ಯಕ್ರಮದ ಅಡಿಯಲ್ಲಿ ಪ್ರವಚನ ಧ್ಯಾನ ಉಪನ್ಯಾಸ ಹಾಗೂ ವಿಶೇಷ ವಿಡಿಯೋ ಶೋ ಜರುಗಿದವು.