ಕನ್ನಡ ವಾರ್ತೆಗಳು

ಮಗುವಿನ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ : ಶಾಲಾಡಳಿತ ವಿರುದ್ಧ ಕಾನೂನು ಕ್ರಮಕ್ಕೆ ಮಗುವಿನ ಹೆತ್ತವರ ಆಗ್ರಹ

Pinterest LinkedIn Tumblr

ullala_rape_pressmeet_1

ಮಂಗಳೂರು, ಮಾ.16: ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ -ಬಗಂಬಿಲದಲ್ಲಿರುವ ಖಾಸಗಿ ಶಾಲೆಯ ಆಡಳಿತ ಮಂಡಳಿಯು ಮಗುವಿನ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಲಘುವಾಗಿ ಪರಿಗಣಿಸಿದೆ. ಹಾಗಾಗಿ ಈ ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಮಗುವಿನ ತಾಯಿ ಮಾಡೂರಿನ ಝರೀನಾ ಆಗ್ರಹಿಸಿದ್ದಾರೆ.

ಮಂಗಳೂರಿನ ವಿವಿಧ ಮುಸ್ಲಿಮ್ ಸಂಘಟನೆಗಳ ಸಹಕಾರದೊಂದಿಗೆ ನಗರದ ಮುಸ್ಲಿಂ ಸೆಂಟ್ರಲ್ ಕಚೇರಿ ಸಭಾಂಗಣದಲ್ಲಿ ರವಿವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಘಟನೆ ನಡೆದು ಮೂರು ದಿನಗಳಾದರೂ ಶಾಲೆಯ ಆಡಳಿತ ಮಂಡಳಿ ನಮ್ಮನ್ನು ಸಂಪರ್ಕಿಸಿಲ್ಲ. ಆಸ್ಪತ್ರೆಗೆ ದಾಖಲಾಗಿರುವ ಮಗುವಿನ ಯೋಗಕ್ಷೇಮ ವಿಚಾರಿಸಿಲ್ಲ. ಘಟನೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಆಡಳಿತ ಕಮಿಟಿಯವರು ವರ್ತಿಸುತ್ತಿದ್ದಾರೆ. ಹಾಗಾಗಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದರು.

ullala_rape_pressmeet_2

ಶಾಲಾಡಳಿತ ಮಂಡಳಿಯಿಂದ ನಾವು ಇಂತಹದನ್ನು ನಿರೀಕ್ಷಿಸಿರಲಿಲ್ಲ. ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಲು ನ್ಯಾಯ ಕೇಳಲು ಹೋದ ನಮ್ಮನ್ನೇ ದಬಾಯಿಸಿದ್ದಾರೆ. ಕೇಸು ದಾಖಲಿಸುತ್ತೇವೆ ಎಂದು ಬೆದರಿಸಿದ್ದಾರೆ. ಹಾಗಿದ್ದರೆ ನಮಗೆ ನ್ಯಾಯವಿಲ್ಲವೇ? ನಮ್ಮ ಮಗುವಿನ ಮೇಲೆ ನಡೆದ ದೌರ್ಜನ್ಯಕ್ಕೆ ಯಾರು ಹೊಣೆ? ಯಾರೂ ಈ ವಿಷಯದಲ್ಲಿ ಜಾತಿ ಬೇಧ ಮಾಡದೆ ನ್ಯಾಯ ಕೊಡಿ ಎಂದು ಝರೀನಾ ಮಾಡೂರು ಭಿನ್ನವಿಸಿಕೊಂಡರು.

ನನ್ನ ಮನೆಯಿಂದ ಶಾಲೆಗೆ ಐದಾರು ಕಿ.ಮೀ. ದೂರವಿದೆ. ಪ್ರತಿದಿನ ಬೆಳಗ್ಗೆ 8 ಗಂಟೆಗೆ ಮಗುವನ್ನು ಒಂದು ವಾಹನದಲ್ಲಿ ಕರೆದೊಯ್ದರೆ, ಅಪರಾಹ್ನ 1 ಗಂಟೆಗೆ ಇನ್ನೊಂದು ವಾಹನದಲ್ಲಿ ತಂದು ಬಿಡುತ್ತಾರೆ. ಬೆಳಗ್ಗೆ ವಾಹನದಲ್ಲಿ ಇತರ ಕೆಲವು ಮಕ್ಕಳಿದ್ದರೆ ಅಪರಾಹ್ನ ತೊಕ್ಕೊಟು ಕ್ರಾಸ್ ಬಳಿಕ ಮಾಡೂರಿನಲ್ಲಿರುವ ನಮ್ಮ ಮನೆಯವರೆಗೆ ಮಗು ಮಾತ್ರ ಶಾಲಾ ವಾಹನದಲ್ಲಿರುತ್ತದೆ. ಮಾ.13ರಂದು ಅಪರಾಹ್ನ 1:10ರ ವೇಳೆಗೆ ಶಾಲಾ ವಾಹನ ಮನೆ ಬಳಿ ಬಂದಿತ್ತು. ಮನೆಗೆ ಬಂದ ಮಗು ತುಂಬಾ ಮಂಕಾಗಿತ್ತು. ಊಟ ಕೂಡ ಮಾಡಲು ಕೇಳಲಿಲ್ಲ. ಗಾಬರಿಯಿಂದ ನಾನು ತಕ್ಷಣ ಶಾಲೆಯ ಆಯ ಜೊತೆ ಫೋನ್‌ನಲ್ಲಿ ಮಾತನಾಡಿದೆ. ಬೆಳಗ್ಗೆ 10ರ ವೇಳೆಗೆ ತರಗತಿಯ ಕುರ್ಚಿಯೊಂದು ತಾಗಿ ಕಾಲಿನ ತೊಡೆಯ ಭಾಗದಲ್ಲಿ ಗೀಚಿದ ಗಾಯ ಕಂಡಿದ್ದು ಬಿಟ್ಟರೆ ಬೇರೆ ಏನೂ ಆಗಿಲ್ಲ ಎಂದರು.

ಸುಮಾರು 3:30ರ ವೇಳೆಗೆ ಮಗು ಮೂತ್ರ ಶಂಕೆ ಮಾಡಲು ಹೋದಾಗ ನೋವಾಗುತ್ತದೆ ಎಂದು ಕೂಗಿದಳು. ಹಾಗೇ ಏನಾಯಿತು ಎಂದು ಕೇಳಿದಾಗ ಶಾಲಾ ವಾಹನದ ಚಾಲಕ ಅಪ್ಪಿ ಮುದ್ದಾಡಿದ ಎಂದಿತು. ತಕ್ಷಣ ನಾನು ಗಂಡ ಮತ್ತಿತರರಿಗೆ ವಿಷಯ ತಿಳಿಸಿ ಶಾಲೆಗೆ ಹೋದಾಗ ಅಲ್ಲಿ ಯಾರೂ ಮಾತನಾಡಲು ಸಿದ್ಧರಿರಲಿಲ್ಲ. ನಮ್ಮ ಶಾಲೆಯಲ್ಲಿ ಅಂತಹ ಘಟನೆ ನಡೆದಿಲ್ಲ. ನೀವೆಲ್ಲ ಸುಮ್ಮನೆ ಆರೋಪಿಸುತ್ತೀರಿ. ನಮ್ಮ ಶಾಲೆಯ ಪ್ರತಿಷ್ಠೆಯ ಪ್ರಶ್ನೆ. ತಕ್ಷಣ ನೀವು ಇಲ್ಲಿಂದ ಹೊರಟು ಹೋಗಬೇಕು ಎಂದು ನಮ್ಮನ್ನೇ ದಬಾಯಿಸಿದರಲ್ಲದೆ, ಪೊಲೀಸರಿಗೆ ದೂರು ಕೊಡುವುದಾಗಿ ಬೆದರಿಸಿದರು. ಹಾಗೇ ಗೀಚಿದ ಗಾಯವನ್ನು ಅದೇ ಆಯಾಗೆ ತೋರಿಸಿದಾಗ ‘ಇದು ಬೆಳಗ್ಗಿನ ಗಾಯವಲ್ಲ’ ಎಂದು ಹೇಳಿದರೂ ಆಡಳಿತ ಮಂಡಳಿ ನಮಗೆ ನ್ಯಾಯ ನೀಡಲಿಲ್ಲ. ಆ ಬಳಿಕ ನಾವು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆವು. ತದನಂತರ ಲೇಡಿಗೋಶನ್ ಆಸ್ಪತ್ರೆಗೆ ಸೇರಿಸಲಾಯಿತು. ಈಗಲೂ ಮಗು ಆಸ್ಪತ್ರೆಯಲ್ಲಿದೆ. ಆದರೆ ಸೌಜನ್ಯಕ್ಕಾದರೂ ಶಾಲಾಡಳಿತ ಮಂಡಳಿ ಆಸ್ಪತ್ರೆಗೂ ಭೇಟಿ ನೀಡಿಲ್ಲ. ನಮ್ಮ ಜೊತೆಯೂ ಮಾತುಕತೆ ನಡೆಸಿಲ್ಲ. ಲೈಂಗಿಕ ದೌರ್ಜನ್ಯದಿಂದ ಮಗುವಿನ ಮೇಲೆ ಆಘಾತವಾಗಿದ್ದರೆ, ಶಾಲಾಡಳಿತ ಮಂಡಳಿಯ ವರ್ತನೆಯಿಂದ ನಮಗೆ ಬೇಸರವಾಗಿದೆ ಎಂದು ಝರೀನಾ ಹೇಳಿದರು.

ಮಗುವಿನ ಭವಿಷ್ಯದ ಹಿತದೃಷ್ಟಿಯಿಂದ ನನ್ನ ಮಗುವನ್ನು ಆ ಶಾಲೆಗೆ ಸೇರಿಸಿದ್ದೆ. ಆದರೆ ನನ್ನ ಕನಸು ನುಚ್ಚು ನೂರಾಯಿತು. ಘಟನೆ ತೀವ್ರ ಸ್ವರೂಪ ಪಡೆದರೂ ಕನಿಷ್ಠ ಮಾನವೀಯತೆ ತೋರದ ಆ ಶಾಲೆಗೆ ಇನ್ಮೇಲೆ ನಾನು ನನ್ನ ಮಗುವನ್ನು ಕಳುಹಿಸಲಾರೆ ಎಂದೂ ಝರೀನಾ ಹೇಳಿದರು.

ಘಟನೆ ನಡೆದ ದಿನ ನಾವು ಶಾಲೆಗೆ ಹೋದಾಗ ಸಂಜೆ ಟ್ರಿಪ್‌ನ ಮಕ್ಕಳನ್ನು ಕರೆದೊಯ್ಯಲು ಅದೇ ವಾಹನದ ಚಾಲಕ ಅಲ್ಲಿಗೆ ಬಂದಿದ್ದ. ಆತ ಅಮಲು ಪದಾರ್ಥ ಸೇವಿಸಿದ್ದ. ಅದನ್ನು ಶಾಲೆಯವರ ಗಮನಕ್ಕೆ ತಂದಾಗ ನಮಗೆ ಈತ ಅಮಲು ದ್ರವ್ಯ ಸೇವಿಸುವುದು ಈಗಷ್ಟೇ ಗೊತ್ತಾಯಿತು ಎಂದರು. ಅಲ್ಲದೆ ಈತ ಓಡಿಸುವ ವಾಹನದ ಗಾಜಿಗೆ ಸ್ಕ್ರೀನ್ ಕೂಡ ಅಳವಡಿಸಲಾಗಿದೆ. ಶಾಲಾಡಳಿತ ಮಂಡಳಿಗೆ ಇದೆಲ್ಲ್ಲ ಗೊತ್ತಿದ್ದರೂ ಮುಂಜಾಗರೂಕತಾ ಕ್ರಮ ಜರಗಿಸಿಲ್ಲ. ಆದ ತಪ್ಪನ್ನು ಒಪ್ಪಿಕೊಂಡು ನಮಗೆ ಸಾಂತ್ವನ ನೀಡುವ ಬದಲು ನಮ್ಮ ಮೇಲೆಯೇ ಹರಿಹಾಯ್ದಿದ್ದಾರೆ ಎಂದು ಝರೀನಾ ಘಟನೆಯ ಬಗ್ಗೆ ವಿವರಿಸಿದರು.ಸಚಿವ ಯು.ಟಿ.ಖಾದರ್ ಶನಿವಾರ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ನ್ಯಾಯ ಕೊಡುವ ಭರವಸೆ ನೀಡಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಝರೀನಾ ಉತ್ತರಿಸಿದರು.

ಈ ಸಂದರ್ಭ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂಯುಕ್ತ ಮುಸ್ಲಿಮ್ ಜಮಾಅತ್ ದ.ಕ.ಜಿಲ್ಲಾಧ್ಯಕ್ಷ, ಮಾಜಿ ಮೇಯರ್ ಕೆ.ಅಶ್ರಫ್, ಶಾಲಾಡಳಿತ ಮಂಡಳಿ ಮತ್ತು ಶಿಕ್ಷಕ ವರ್ಗದವರು ಶಾಲೆಯ ಪ್ರತಿಷ್ಠೆಯ ಪ್ರಶ್ನೆ ಎಂಬಂತೆ ಘಟನೆಯನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ದೌರ್ಜನ್ಯಕ್ಕೀಡಾದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಿಲ್ಲ. ಕನಿಷ್ಠ ಹೆತ್ತವರ ನೋವಿಗೂ ಸ್ಪಂದಿಸಲಿಲ್ಲ. ಹಾಗಾಗಿ ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸಬೇಕು, ದೌರ್ಜನ್ಯಕ್ಕೀಡಾದ ಬಾಲಕಿಗೆ ಪರಿಹಾರ ಧನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಘಟನೆಯನ್ನು ಜಿಲ್ಲಾಡಳಿತ, ಜಿಲ್ಲೆಯ ಸಚಿವರು, ಶಾಸಕರು ಗಂಭೀರವಾಗಿ ಪರಿಗಣಿಸಿಲ್ಲ. ಶನಿವಾರ ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಕೂಡ ಈ ಬಗ್ಗೆ ಮಾತನಾಡಿಲ್ಲ. ಮಗುವಿನ ಮೇಲಾದ ಲೈಂಗಿಕ ದೌರ್ಜನ್ಯದ ವರದಿಯ ಬಗ್ಗೆಯೂ ಗೊಂದಲವಿದೆ. ಲೇಡಿಗೋಶನ್ ಆಸ್ಪತ್ರೆಯವರು ಪೊಲೀಸರಿಗೆ ವರದಿ ಕೊಟ್ಟಿದ್ದೇವೆ ಎನ್ನುತ್ತಾರೆ. ಪೊಲೀಸರು ಇನ್ನೂ ಅಂತಿಮ ವರದಿ ಬಂದಿಲ್ಲ ಎನ್ನುತ್ತಾರೆ. ಈ ಬಗ್ಗೆ ಗೊಂದಲವಿದೆ. ಇದನ್ನು ನಿವಾರಿಸಬೇಕು ಎಂದು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ದೌರ್ಜನ್ಯಕ್ಕೀಡಾದ ಮಗುವಿನ ತಂದೆ ಮುಹಮ್ಮದ್ ರಫೀಕ್, ಮಗುವಿನ ಸಂಬಂಧಿ ಮೊಯ್ದಿನ್ ಮಾಡೂರು, ನ್ಯಾಯವಾದಿಗಳಾದ ಮುಝಫ್ಫರ್ ಅಹ್ಮದ್ ಮತ್ತು ಹನೀಫ್ ಉಚ್ಚಿಲ್, ಮಾಡೂರು ಜುಮಾ ಮಸೀದಿಯ ಅಧ್ಯಕ್ಷ ಅಝೀಝ್ ಮಾಡೂರು, ಅಖಿಲ ಭಾರತ ಬ್ಯಾರಿ ಪರಿಷತ್ ಉಪಾಧ್ಯಕ್ಷ ಹಮೀದ್ ಕುದ್ರೋಳಿ, ಹಸಿಮೀನು ವ್ಯಾಪಾರಸ್ಥರು ಮತ್ತು ಕಮಿಷನ್ ಏಜೆಂಟರ ಸಂಘದ ಕಾರ್ಯದರ್ಶಿ ಸಿ.ಎಂ. ಮುಸ್ತಫ, ಸಿ.ಎಂ. ಹನೀಫ್ ಮತ್ತಿತರರಿದ್ದರು.

Write A Comment