ಕನ್ನಡ ವಾರ್ತೆಗಳು

ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಯ ಜೀವನ್ಮರಣ ಹೋರಾಟ : ಡಿಕ್ಕಿ ಹೊಡೆದ ಕಾರು ಇನ್ನೂ ನಾಪತ್ತೆ.

Pinterest LinkedIn Tumblr

mulk_car_photo_1

ಮೂಲ್ಕಿ,ಮಾರ್ಚ್.16  : ಕಿನ್ನಿಗೋಳಿ ಸಮೀಪದ ದಾಮಸ್‌ಕಟ್ಟೆ ಬಳಿಯ ಪಾಂಪೈ ಕಾಲೇಜಿನ ವಿದ್ಯಾರ್ಥಿನಿಯರು ಕಾಲೇಜು ಮುಗಿಸಿಕೊಂಡು ಮೂರು ಕಾವೇರಿ ಬಸ್ ನಿಲ್ದಾಣದತ್ತ ಬೆಳ್ಮಣ್-ಕಿನ್ನಿಗೋಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವಿದ್ಯಾರ್ಥಿನಿಯರ ಗುಂಪಿಗೆ ಏಕಾ‌ಏಕಿ ಕಳೆದ ಬುಧವಾರ (ಮಾ.11) ಅಪರಿಚಿತ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ಗಾಯಗೊಂಡಿರುವ ಘಟನೆಗೆ ಕಾರಣವಾದ ಓಮ್ನಿ ಕಾರು ಇನ್ನೂ ಪತ್ತೆಯಾಗದೇ ಇರುವುದು ತನಿಖೆಗೆ ತೊಡಕಾಗಿದೆ ಎಂದು ತಿಳಿದು ಬಂದಿದೆ.

ಈ ಘಟನೆಯಲ್ಲಿ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿಯರಾದ ನಿಡ್ಡೋಡಿ ಮುಚ್ಚೂರು ನಿವಾಸಿಗಳಾದ ಅಕ್ಷತಾ(23), ಮಮತಾ(22)ರವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು ಇವರಲ್ಲಿ ಅಕ್ಷತಾ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾಳೆ. ಆದರೆ ಮಮತಾಳಿಗೆ ತಲೆಯ ಮಿದುಳಿಗೆ ಗಂಭೀರ ಗಾಯವಾಗಿದ್ದು ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್‍ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾಳೆ ಎಂದು ಆಕೆಯ ಸಹಪಾಠಿಗಳು ಪತ್ರಿಕೆಗೆ ತಿಳಿಸಿದ್ದಾರೆ.

ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದ ಓಮ್ನಿ ಕಾರು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿದ್ದರು. ಅದು ಪಾಂಪೈ ಪದವಿ ಪೂರ್ವ ಕಾಲೇಜಿನ ಹೊರಭಾಗದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಆ ಕಾರಿನ ಚಿತ್ರಣ ದಾಖಲಾಗಿರುವುದನ್ನೇ ಆಧಾರವಾಗಿಟ್ಟುಕೊಂಡು ಸುರತ್ಕಲ್ ಸಂಚಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆದು ಐದು ದಿನವಾದರು ಕಾರು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಕಾರಿನ ನಂಬರ್ ಪ್ಲೇಟ್‌ನ ಸ್ಪಷ್ಟ ಚಿತ್ರಣ ಕ್ಯಾಮಾರಾದಲ್ಲಿ ದಾಖಲಾಗದೇ ಇರುವುದು ಹಾಗೂ ವಿದ್ಯಾರ್ಥಿಗಳು ಕಾರಿನ ಬಗ್ಗೆ ಗಮನ ಹರಿಸದಿರುವುದು ತನಿಖೆಗೆ ಹಿನ್ನಡೆ ಆಗಿದೆ.

ಈ ಬಗ್ಗೆ ಸಂಚಾರಿ ಇನ್ಸ್‌ಪೆಕ್ಟರ್ ಗೋಪಾಲಕೃಷ್ಣ ಭಟ್ ಪ್ರತಿಕ್ರಿಯಿಸಿ ಕಾರಿನ ಚಿತ್ರಣದ ಆಧಾರದಲ್ಲಿ ಘಟನೆ ನಡೆದ ಅದೇ ಸಮಯದ ಹೊಂದಾಣಿಕೆಯಲ್ಲಿ ಕಿನ್ನಿಗೋಳಿ ಮುಖ್ಯರಸ್ತೆಯಲ್ಲಿರುವ ಖಾಸಗಿ ಸಿಸಿ ಕ್ಯಾಮಾರಾದಲ್ಲೂ ಕಾರು ದಾಖಲಾಗಿದ್ದರು ನಂಬರ್ ಪ್ಲೇಟ್ ಭಾಗದ ಚಿತ್ರ ಸಿಕ್ಕಿಲ್ಲ. ಈ ಬಗ್ಗೆ ಪಕ್ಷಿಕೆರೆ, ಕಾರ್ನಾಡು, ಮೂಲ್ಕಿ, ಹಳೆಯಂಗಡಿಯ ಎಲ್ಲಾ ಖಾಸಗಿ ಹಾಗೂ ಹೆಜಮಾಡಿಯ ಚೆಕ್‌ಪೋಸ್ಟ್‌ನಲ್ಲಿರುವ ಪೊಲೀಸ್ ಸಿಸಿ ಕ್ಯಾಮಾರ ಪರಿಶೀಲನೆ ನಡೆಸಿದ್ದರು ಪೂರಕವಾದ ಮಾಹಿತಿ ದೊರಕಿಲ್ಲ. ಕಾರಿನ ಬಣ್ಣ ಮಾತ್ರ ಪತ್ತೆ ಹಚ್ಚಿದ್ದರು ಅಂತಹ ಸಾಕಷ್ಟು ಕಾರುಗಳ ತನಿಖೆ ನಡೆಸಿದ್ದೇವೆ. ನಮ್ಮ ಪ್ರಯತ್ನ ನಿರಂತರ ಸಾಗಿದೆ ಎಂದು ಹೇಳಿದ್ದಾರೆ.

ಕಾಲೇಜಿನ ವಿದ್ಯಾರ್ಥಿ ಸಮೂಹವು ಸಹ ಈ ಘಟನೆಯಿಂದ ಆಕ್ರೋಶಗೊಂಡಿದ್ದು ದುರ್ಘಟನೆಗೆ ಕಾರಣವಾದ ಕಾರನ್ನು ಪತ್ತೆ ಹಚ್ಚಲು ಇನ್ನಷ್ಟು ಒತ್ತಡ ಹಾಕುವ ದೃಷ್ಟಿಯಿಂದ ಸೋಮವಾರ (ಮಾ.೧೬) ಮಮತಾಳ ತರಗತಿಯ ಇತರ ವಿದ್ಯಾರ್ಥಿಗಳು ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರಲ್ಲಿ ಮನವಿ ಮಾಡುವ ನಿರ್ಧಾರ ಮಾಡಿದ್ದು ಇದಕ್ಕೂ ಸ್ಪಂದಿಸದಿದ್ದಲ್ಲಿ ಕಾಲೇಜಿನ ಎಲ್ಲಾ ತರಗತಿಯ ವಿದ್ಯಾರ್ಥಿಗಳ ಮೂಲಕ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ ಜೊತೆಗೆ ವಿದ್ಯಾರ್ಥಿನಿಯ ಆಸ್ಪತ್ರೆಯ ಖರ್ಚನ್ನು ಸಹ ಭರಿಸಲು ಆಡಳಿತ ಮಂಡಳಿಯಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಆಕೆಯ ತರಗತಿಯ ವಿದ್ಯಾರ್ಥಿಯೋರ್ವ ಮಾಹಿತಿ ನೀಡಿದ್ದಾನೆ.

Write A Comment