ಕನ್ನಡ ವಾರ್ತೆಗಳು

ಕರ್ಣಾಟಕ ಬ್ಯಾಂಕ್‌ನ ಸಂಸ್ಥಾಪಕರ ದಿನಾಚರಣೆ – ಇಸ್ರೋದ ಕಾರ್ಯವೈಖರಿ ಹಾಗೂ ಮಂಗಳಯಾನದ ಬಗ್ಗೆ ಉಪನ್ಯಾಸ.

Pinterest LinkedIn Tumblr

karntka_bank_fouderday_1

ಮಂಗಳೂರು, ಫೆ. 19 : ಇಸ್ರೋದ ಮಂಗಳಯಾನ ಆರು ತಲೆಮಾರಿನ ವಿಜ್ಞಾನಿಗಳ ನಿರಂತರ ಸಾಧನೆಯ ಫಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಮಾಜಿ ಅಧ್ಯಕ್ಷ ಪದ್ಮಭೂಷಣ ಡಾ.ಕೆ.ರಾಧಾಕೃಷ್ಣನ್ ಅಭಿಪ್ರಾಯಿಸಿದ್ದಾರೆ. ಅವರು ಬುಧವಾರ ಕರ್ಣಾಟಕ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಬ್ಯಾಂಕ್‌ನ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ನೀಡಿದ ಉಪನ್ಯಾಸದಲ್ಲಿ ಇಸ್ರೋದ ಕಾರ್ಯವೈಖರಿ ಹಾಗೂ ಮಂಗಳಯಾನ (ಮಾಮ್) ಯಶಸ್ಸಿನ ಕುರಿತು ಮಾತನಾಡುತ್ತಿದ್ದರು.

1975ರಲ್ಲಿ ಭಾರತದ ಪ್ರಥಮ ಉಪಗ್ರಹ ವಾದ ಆರ್ಯಭಟ ಉಡಾವಣೆಯ ಬಳಿಕ 119 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಉಡಾಯಿಸ ಲಾಗಿದೆ. ಇದರ ಬಳಿಕದ ಪ್ರಥಮ 25 ವರ್ಷಗಳಲ್ಲಿ 40 ಉಪಗ್ರಹಗಳನ್ನು ಉಡಾಯಿಸಲಾಗಿದ್ದು, ಬಳಿಕದ 10 ವರ್ಷಗಳಲ್ಲಿ 42 ಉಪಗ್ರಹಗಳ ಉಡಾವಣೆ ಹಾಗೂ ಬಳಿಕದ ಐದು ವರ್ಷಗಳಲ್ಲಿ 37 ಹಾಗೂ ಕಳೆದ ಆರು ತಿಂಗಳಲ್ಲಿ ಆರು ಉಪಗ್ರಹಗಳನ್ನು ಉಡಾಯಿಸಲಾಗಿದೆ. ಪ್ರತಿ ಯೊಂದು ಬಾರಿಯ ಉಡಾವಣೆಯಲ್ಲಿನ ವೈಫಲ್ಯ ಹಾಗೂ ಯಶಸ್ಸು ಕೂಡಾ ಅತ್ಯಂತ ಸೂಕ್ಷ್ಮವಾಗಿ ಗಮನ ಹರಿಸಿ ಪರಿಹಾರ ಮಾರ್ಗದ ಮೂಲಕ ಕಾರ್ಯತಂತ್ರ ರೂಪಿಸಿ ಮುಂದಿನ ಹೆಜ್ಜೆ ಇಡಲಾಗುತ್ತದೆ. ಇದರಿಂದಾಗಿಯೇ ಮಂಗಳಯಾನ ಯಶಸ್ವಿಯಾಗಿದೆ. ಇದು ಇಸ್ರೋದ 16,000 ಸಿಬ್ಬಂದಿಯ ಸಾಮೂಹಿಕ ಪ್ರಯತ್ನವಾಗಿದೆ ಎಂದು ಅವರು ಹೇಳಿದರು. ಇಸ್ರೋದಲ್ಲಿ 2000ನೆ ಇಸವಿಯಲ್ಲಿನ ಡಾ.ಕಸ್ತೂರಿ ರಂಗನ್ ಅವರ ನೇತೃತ್ವ, ಬಳಿಕ ಮಾಧವನ್ ನಾಯರ್ ಅವರ ನೇತೃತ್ವದ ಜೊತೆಗೆ ಇಂದಿನ ಯುವ ವಿಜ್ಞಾನಿಗಳ ಹೊಸ ಹೊಸ ಆಲೋಚನೆಗಳು ಇಸ್ರೋದ ಯಶಸ್ಸಿಗೆ ಕಾರಣವಾಗಿವೆ.

karntka_bank_fouderday_4 karntka_bank_fouderday_2 karntka_bank_fouderday_3

ಉಪಗ್ರಹ ಉಡಾವಣೆಯ ಸಂದರ್ಭದ ವೈಫಲ್ಯ ಹಾಗೂ ಯಶಸ್ಸಿನ ನಡುವಿನ ಅಂತರ ಅತೀ ಸೂಕ್ಷ್ಮವಾಗಿದ್ದು, ವೈಫಲ್ಯ ಇಲ್ಲಿ ಸಾಮಾನ್ಯ. ಯಾವುದೇ ಕಾರಣಕ್ಕೂ ವೈಫಲ್ಯದ ಹೊಣೆಯನ್ನು ಓರ್ವ ವಿಜ್ಞಾನಿ ಅಥವಾ ಸಿಬ್ಬಂದಿಯ ಮೇಲೆ ಹೊರಿಸಲಾಗುವುದಿಲ್ಲ. ವೈಫಲ್ಯ ಕಂಡಾಗ ಆದ ತಪ್ಪನ್ನು ಒಟ್ಟಾಗಿ ಕೂಡಿಕೊಂಡು ಬಗೆಹರಿಸಿ ಮುಂದಿನ ಹೆಜ್ಜೆ ಇಡಲಾಗುತ್ತದೆ. ಮಂಗಳಯಾನದಿಂದ ಏನು ಪ್ರಯೋಜನ, ಇಷ್ಟೊಂದು ದೊಡ್ಡ ಮೊತ್ತ ಭಾರತದ ಬಡತನ ನಿವಾರಣೆಗೆ ಬಳಸಬಹುದೆಂಬ ಟೀಕೆಯನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸಿ ಅಮೆರಿಕ, ರಷ್ಯಾ ಕಳುಹಿಸಿದ ಉಪಗ್ರಹಗಳ ವೆಚ್ಚಕ್ಕೆ 10 ಪಟ್ಟು ಕಡಿಮೆ ವೆಚ್ಚದಲ್ಲಿ ಭಾರತ ಮಂಗಳಯಾನ ಯಶಸ್ವಿಗೊಳಿಸಿರುವುದು ಭಾರತೀಯರ ಹೆಮ್ಮೆ. ಮಾತ್ರವಲ್ಲದೆ ಇಲ್ಲಿ ಯಶಸ್ಸು ಅಥವಾ ವೈಫಲ್ಯಕ್ಕೆ ಯಾರಾದರೂ ಒಬ್ಬರನ್ನು ಜವಾಬ್ದಾರಿಯನ್ನಾಗಿಸದೆ ಸಾಮೂಹಿಕ ಕಾರ್ಯತಂತ್ರವೇ ಇಸ್ರೋದ ಕಾರ್ಯವೈಖರಿ ಎಂದು ಅವರು ಹೇಳಿದರು. ಮಂಗಳಯಾನದ ಯಶಸ್ಸಿನಿಂದಾಗಿ ಇಂದು ಜಗತ್ತೇ ನಮ್ಮ ವ್ಯವಸ್ಥೆಯನ್ನು ಅಧ್ಯಯನ ನಡೆಸುವಂತಹ ವಾತಾವರಣ ನಿರ್ಮಾಣವಾಗಿದೆ.

ದೇಶ ವಿದೇಶಗಳಲ್ಲೂ ಇಸ್ರೋಗೆ ಹಿಂದಿಗಿಂತಲೂ ಹೆಚ್ಚಿನ ಮನ್ನಣೆ ದೊರಕಿದೆ. ವಿಜ್ಞಾನಿಗಳ ಕಾರ್ಯಾಚರಣೆಗೆ ದೇಶದ ನಾಯಕತ್ವದ ಸಹಕಾರ ಮಾತ್ರವಲ್ಲದೆ, ವೈಫಲ್ಯ ಕಂಡಾಗ ಅದರ ಜವಾಬ್ದಾರಿಯನ್ನು ಹೊರುವ ನಾಯಕತ್ವವೂ ಅತ್ಯಗತ್ಯವಾಗಿರುತ್ತದೆ ಎಂದು ಕಳೆದ ಸೆಪ್ಟಂಬರ್ 24ರ ಇಸ್ರೋದ ಮಂಗಳಯಾನಕ್ಕೆ ಉಪಗ್ರಹ ಉಡಾವಣೆಯ ಸಂದರ್ಭ ಪ್ರಧಾನ ಮಂತ್ರಿಯವರ ಉತ್ತೇಜನವನ್ನು ಅವರು ಈ ಸಂದರ್ಭ ಸ್ಮರಿಸಿದರು. ಉಪಗ್ರಹಗಳಿಂದಾಗಿ ಮಾಹಿತಿ ತಂತ್ರಜ್ಞಾನ ದಲ್ಲಿ ಕ್ರಾಂತಿಯಾಗಿರುವ ಜೊತೆಯಲ್ಲೇ ವಿಪತ್ತು ನಿರ್ವಹಣೆಯಲ್ಲೂ ಪ್ರಮುಖ ಪಾತ್ರ ವಹಿಸಲಾಗುತ್ತಿದೆ. 70ರ ದಶಕದಲ್ಲಿ ಚಂಡ ಮಾರುತದಿಂದಾಗಿ ಸಾಯುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿತ್ತು. ಆದರೆ ಇದೀಗ ಉಪಗ್ರಹಗಳಿಂದಾಗಿ ಚಂಡಮಾರುತ ಅಥವಾ ಪ್ರಾಕೃತಿಕ ವಿಕೋಪಗಳ ಕುರಿತಂತೆ ಮಾಹಿತಿ ಮುಂಚಿ ತವಾಗಿ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭ ಮುಂಚಿತವಾಗಿಯೇ ನಿರ್ದಿಷ್ಟ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲಾಗುತ್ತಿರುವ ಮೂಲ ಸಾವು ನೋವನ್ನು ಬಹುತೇಕವಾಗಿ ಕಡಿಮೆಗೊಳಿಸಲು ಸಾಧ್ಯವಾಗಿದೆ ಎಂದು ಡಾ. ರಾಧಾಕೃಷ್ಣನ್ ಹೇಳಿದರು.

karntka_bank_fouderday_7 karntka_bank_fouderday_5 karntka_bank_fouderday_6

ಕರ್ನಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪಿ. ಜಯರಾಂ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸುದೀರ್ಘ ಇತಿಹಾಸವನ್ನು ಹೊಂದಿರುವ ಕರ್ಣಾಟಕ ಬ್ಯಾಂಕ್ 21 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶದಲ್ಲಿ ಲಕ್ಷಾಂತರ ಗ್ರಾಹಕರನ್ನು ಹೊಂದಿದೆ ಎಂದರು. ಅಧ್ಯಕ್ಷತೆ ವಹಿಸಿದ ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ಅನಂತಕೃಷ್ಣ, ಬ್ಯಾಂಕಿಂಗ್ ಕ್ಷೇತ್ರದ ಹಲವಾರು ಸವಾಲುಗಳನ್ನು ಎದುರಿಸಿ ಅತ್ಯುತ್ತಮ ಆರ್ಥಿಕ ಶಕ್ತಿಯಾಗಿ ಕರ್ನಾಟಕ ಬ್ಯಾಂಕ್ ಮೂಡಿ ಬಂದಿದೆ. ಮಾತ್ರವಲ್ಲದೆ ಮುಂದಿನ ಸಮಾಜಕ್ಕೆ ಕರ್ಣಾಟಕ ಬ್ಯಾಂಕ್ ತನ್ನ ಸೇವೆಯನ್ನು ಇನ್ನಷ್ಟು ವಿಸ್ತರಿಸುವ ಮಹಾನ್‌ಗುರಿಯನ್ನು ಹೊಂದಿದೆ ಎಂದರು. ವೆನ್ಲಾಕ್ ಆಸ್ಪತ್ರೆ ಹಾಗೂ ಶ್ರೀ ರಾಮಕೃಷ್ಣ ಸೇವಾ ಸಮಾಜ ಪುತ್ತೂರು ಇವುಗಳಿಗೆ ಬ್ಯಾಂಕಿನ ವತಿಯಿಂದ ಆರ್ಥಿಕ ಸಹಾಯ ಹಸ್ತಾಂತರಿಸಲಾಯಿತು. ಬ್ಯಾಂಕಿನ ಮುಖ್ಯ ಮಹಾಪ್ರಬಂಧಕರಾದ ಎಂ.ಎಸ್. ಮಹಾಬಲೇಶ್ವರ ಭಟ್ ವಂದಿಸಿದರು. ಜೆನ್ನಿರ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸದ ನಂತರ ವಿದ್ವಾನ್ ರಾಜೇಶ್ ವೈದ್ಯ ಚೆನ್ನೆ ಹಾಗೂ ವಿದ್ವಾನ್ ವಿಠ್ಠಲ್ ರಾಮಮೂರ್ತಿ ಚೆನ್ನೈ ಅವರಿಂದ ವೀಣಾ-ವಯೋಲಿನ್ ವಾದನದ ಜುಗುಲ್‌ಬಂದಿ ನಡೆಯಿತು. ಹಿರಿಯ ಮಹಾ ಪ್ರಬಂಧಕ ಪಿ. ಜೈರಾಮ್ ಹಂದೆ ವಂದಿಸಿದರು. ವಿಜ್ಞಾನದತ್ತ ಆಸಕ್ತಿ ಮೂಡಿಸಿದ ಮಂಗಳಯಾನ ಮಂಗಳಯಾನದ ಯಶಸ್ಸು ಯುವ ಜನಾಂಗದಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಕಾರಣವಾಗಿದೆ.

ಸಾಮಾಜಿಕ ಜಾಲತಾಣದ ಮೂಲಕ ಮಂಗಳಯಾನದ ಕುರಿತಂತೆ 3ಲಕ್ಷಕ್ಕೂ ಅಧಿಕ ಯುವ ಸಮುದಾಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅವರಲ್ಲಿ 18ರಿಂದ 25 ವರ್ಷದವರೇ ಅಧಿಕ ಎಂಬುದು ಸಂತಸದ ವಿಚಾರ. ಇಸ್ರೋದಿಂದ ಭಾರತ ಮಾತ್ರವಲ್ಲದೆ ವಿದೇಶಗಳು ಕೂಡಾ ತಮ್ಮ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಉತ್ಸುಕವಾಗಿವೆ. ಈಗಾಗಲೇ ಫ್ರಾನ್ಸ್, ಜರ್ಮನಿ ಸಹಿತ ಸುಮಾರು 18 ದೇಶಗಳ 40 ಉಪಗ್ರಹಗಳು ಇಸ್ರೋ ಮೂಲಕ ಬಾಹ್ಯಾಕಾಶ ಸೇರಿವೆ ಎಂದು ಡಾ. ರಾಧಾಕೃಷ್ಣನ್ ಹೇಳಿದರು. ಮಂಗಳೂರಿನಲ್ಲಿ ನೆಲೆಸುವ ಬಯಕೆ
ಇದು ಮಂಗಳೂರಿಗೆ ನನ್ನ ಪ್ರಥಮ ಭೇಟಿಯಲ್ಲ. ಹಾಗಿದ್ದರೂ ಮಂಗಳೂರಿಗೆ ಬರುವುದೆಂದರೆ ನನಗೆ ತುಂಬಾ ಇಷ್ಟ. ಕಳೆದ ವರ್ಷ ನನ್ನ ಪತ್ನಿ ಕೆಲ ದಿನಗಳ ಕಾಲ ಇಲ್ಲಿದ್ದು ಬಂದ ಮೇಲೆ ನನ್ನ ನಿವೃತ್ತಿಯ ಬಳಿಕ ಮಂಗಳೂರಿನಲ್ಲೇ ವಾಸಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಮಂಗಳೂರಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು ಡಾ.ರಾಧಾಕೃಷ್ಣನ್.

Write A Comment