ಕನ್ನಡ ವಾರ್ತೆಗಳು

ಪಡಿತರ ಚೀಟಿ ತಿಂಗಳೊಳಗೆ ಪಡೆಯದಿದ್ದರೆ ರದ್ದು: ಜಿಲ್ಲಾಧಿಕಾರಿ ಎಚ್ಚರಿಕೆ

Pinterest LinkedIn Tumblr

dc_ration_card_1

ಮಂಗಳೂರು,ಫೆ.19  : ಮುಂದಿನ ಒಂದು ತಿಂಗಳ ಒಳಗೆ ಪಡಿತರ ಚೀಟಿ ಪಡೆಯದಿದ್ದರೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದರು.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಅನೌಪಚಾರಿಕ ಪಡಿತರ ಪ್ರದೇಶ ವ್ಯಾಪ್ತಿಯಲ್ಲಿ ಎಪಿಎಲ್ ಕಾರ್ಡ್ ಅಪೇಕ್ಷಿಸಿ ಅರ್ಜಿ ಸಲ್ಲಿಸಿದವರ ಹಾಗೂ ನವೀಕರಣ ಕೋರಿದವರ ಸುಮಾರು 4 ಸಾವಿರ ಪಡಿತರ ಚೀಟಿ ವಿತರಣೆಯಾಗದೆ ಬಾಕಿ ಇದೆ. ಪಡಿತರ ಚೀಟಿ ಸಿದ್ಧಗೊಂಡಿರುವ ಬಗ್ಗೆ ಮಾಹಿತಿ ನೀಡಲಾಗಿದ್ದರೂ, ಈವರೆಗೆ ಯಾರೂ ಕೂಡಾ ಬಂದಿಲ್ಲ. ಮುಂದಿನ ಒಂದು ತಿಂಗಳ ಒಳಗೆ ಪಡಿತರ ಚೀಟಿ ಪಡೆಯದಿದ್ದರೆ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ದ.ಕ. ಜಿಲ್ಲೆಯಲ್ಲಿ ಹೊಸ ಪಡಿತರ ಚೀಟಿ ಕೋರಿ ಸ್ವೀಕರಿಸಿದ 77670 ಅರ್ಜಿಗಳ ಪೈಕಿ 17,232 ಅರ್ಜಿಗಳಿಗೆ ಮಾತ್ರ ಪಡಿತರ ಚೀಟಿ ವಿತರಣೆಗೆ ಬಾಕಿಯಿದೆ ಎಂದು ಅವರು ತಿಳಿಸಿದರು.

5976 ಅರ್ಜಿಗೆ ಮಾತ್ರ ಮತದಾರರ ಗುರುತುಚೀಟಿ ಮಾಹಿತಿ ದಾಖಲಾಗಿದ್ದು, ಉಳಿದ 11,256 ಅರ್ಜಿಗಳಿಗೆ ಮತದಾರರ ಗುರುತುಚೀಟಿ ಸಂಖ್ಯೆ ದಾಖಲಿಸದ ಕಾರಣ ಪಡಿತರ ಚೀಟಿ ಅಂತಿಮಗೊಳಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು. ಈ ವರೆಗೆ ಮತದಾರರ ಚೀಟಿ ಸಂಖ್ಯೆ ದಾಖಲಿಸದವರು ನಗರ ಪ್ರದೇಶದಲ್ಲಿ ಮಂಗಳೂರು ವನ್ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ 15 ದಿನದೊಳಗೆ ಮತದಾರರ ಚೀಟಿ ಅಥವಾ ಆಧಾರ್ ಸಂಖ್ಯೆ ದಾಖಲಿಸಬಹುದು. ಇಲ್ಲವಾದರೆ ಪಡಿತರ ಚೀಟಿ ರದ್ಧುಗೊಳಿಸಲಾಗುವುದು ಎಂದು ಅವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಶರಣಬಸಪ್ಪ ಮಾತನಾಡಿ, ಅನರ್ಹ ಬಿಪಿಎಲ್ ಕುಟುಂಬಗಳನ್ನು ಪತ್ತೆ ಹಚ್ಚಲು ಬಿಪಿಎಲ್ ಪಡಿತರ ಚೀಟಿದಾರರ ಪಟ್ಟಿಯನ್ನು ಪಡಿತರ ಅಂಗಡಿ, ಗ್ರಾಮ ಪಂಚಾಯಿತಿಗಳ ಬೋರ್ಡ್‌ನಲ್ಲಿ ಸಾರ್ವಜನಿಕರ ಅವಗಾಹನೆಗೆ ಹಾಕಲಾಗಿದೆ ಎಂದರು. ಪಟ್ಟಿಯಲ್ಲಿ ಅನರ್ಹರ ಹೆಸರಿದ್ದರೆ, ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಎಸ್‌ಆರ್ ಯೋಜನೆ ಅನ್ವಯ 6100 ಬಿಪಿಎಲ್ ಪಡಿತರದಾರರಿಗೆ ಠೇವಣಿ ರಹಿತ ಅಡುಗೆ ಅನಿಲ ಸಂಪರ್ಕಕ್ಕೆ ಆದೇಶಿಸಲಾಗಿದೆ. ಫಲಾನುಭವಿಗಳು ಪಡಿತರ ಚೀಟಿ ಜೆರಾಕ್ಸ್, ಬ್ಯಾಂಕ್ ಅಕೌಂಟ್‌ನ ಪಾಸ್ ಪುಸ್ತಕದ ಜೆರಾಕ್ಸ್, ಭಾವಚಿತ್ರ ಸಹಿತ ಇತರೆ ದಾಖಲೆಯನ್ನು ಸಂಬಂಧಿತ ಡೀಲರ್‌ಗೆ ನೀಡಿ ಅಡುಗೆ ಅನಿಲ ಸಂಪರ್ಕ ಪಡೆದುಕೊಳ್ಳ ಬಹುದು  ಎಂದು  ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದರು.

Write A Comment