ಕನ್ನಡ ವಾರ್ತೆಗಳು

ಸಂಪಾಜೆ ಸಮೀಪ ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ಮೂವರು ಬಲಿ – ಇನ್ನಿಬ್ಬರಿಗೆ ಗಂಭೀರ ಗಾಯ

Pinterest LinkedIn Tumblr

car_tippert_acdent_1

ಸುಳ್ಯ, ಫೆ.19: ಕಾರು ಮತ್ತು ಟಿಪ್ಪರ್ ಲಾರಿಯೊಂದರ ಮಧ್ಯೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟು, ಮಹಿಳೆ ಸಹಿತ ಇನ್ನಿಬ್ಬರು ಗಾಯಗೊಂಡ ದಾರುಣ ಘಟನೆ ಸಂಪಾಜೆ ಗ್ರಾಮದ ಕಡಪಳ ಎಂಬಲ್ಲಿ ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಸಂಭವಿಸಿದೆ.

ಪಂಬೆತ್ತಾಡಿ ಗ್ರಾಮದ ಲಕ್ಷ್ಮೀನಾರಾಯಣ ಭೀಮಗುಳಿ(60), ಅವರ ಪತ್ನಿ ಚಿನ್ನಮ್ಮ(52) ಹಾಗೂ ಪುತ್ರ ಅವಿನಾಶ್(35) ಮೃತಪಟ್ಟವ ರಾಗಿದ್ದಾರೆ. ಅವಿನಾಶ್‌ರ ಪತ್ನಿ ಭವ್ಯಾ(32) ಹಾಗೂ ಪುತ್ರ ಅಭಿನಂದನ್(6) ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಕ್ಷ್ಮೀನಾರಾಯಣರ ಕುಟುಂಬವು ವೀರಾಜ ಪೇಟೆಯಲ್ಲಿ ಸಂಬಂಧಿಕರ ಮನೆಯಲ್ಲಿ ನಡೆದ ಉತ್ತರಕ್ರಿಯೆ ಕಾರ್ಯಕ್ರಮದಲ್ಲಿ ಭಾಗ ವಹಿಸಿ ತಮ್ಮ ಆಲ್ಟೊ ಕಾರಿನಲ್ಲಿ ಊರಿಗೆ ಹಿಂದಿರುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

car_tippert_acdent_2

ಇವರಿದ್ದ ಕಾರು ಸಂಜೆ 5 ಗಂಟೆ ಸುಮಾರಿಗೆ ಕಡಪಳಕ್ಕೆ ತಲುಪಿದಾಗ ಮಂಗಳೂರಿನಿಂದ ಮಡಿಕೇರಿಗೆ ಮರಳು ಸಾಗಿಸುತ್ತಿದ್ದ ಟಿಪ್ಪರ್ ಇವರ ಕಾರಿಗೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರನ್ನು ಲಾರಿ ಬಹಳ ದೂರದವರೆಗೆ ಎಳೆದೊಯ್ದಿದ್ದು, ಕಾರು ಚಲಾಯಿಸುತ್ತಿದ್ದ ಅವಿನಾಶ್ ಹಾಗೂ ಎದುರಿನ ಸೀಟಿನಲ್ಲಿ ಕುಳಿತಿದ್ದ ಲಕ್ಷ್ಮೀನಾರಾಯಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಚಿನ್ನಮ್ಮರನ್ನು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕೊಂಡೊಯ್ಯುವ ದಾರಿಮಧ್ಯೆ ಅವರು ಮೃತಪಟ್ಟಿದ್ದಾರೆ. ಕಾರಿನೊಳಗೆ ಸಿಲುಕಿದ್ದ ಭವ್ಯಾ ಮತ್ತು ಅಭಿನಂದನ್‌ರನ್ನು ಊರವರು ಪ್ರಯಾಸದಿಂದ ಹೊರ ತೆಗೆದು ಸುಳ್ಯ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಮೃತದೇಹಗಳನ್ನು ಸುಳ್ಯ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ಗುರುವಾರ ಅಂತ್ಯಕ್ರಿಯೆ ನಡೆಯಲಿದೆ.

ಈ ಭೀಕರ ರಸ್ತೆ ಅಪಘಾತದಿಂದ ಪ್ರತಿಷ್ಠಿತ ಭೀಮಗುಳಿ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ. ಸಹಕಾರ, ಧಾರ್ಮಿಕ, ಸಾಮಾಜಿಕ ರಂಗಗಳಲ್ಲಿ ಸಕ್ರಿಯರಾಗಿದ್ದ ಲಕ್ಷ್ಮೀನಾರಾಯಣ ಅವರು ಜನಾನುರಾಗಿಯಾಗಿದ್ದರು. ಪಂಬೆತ್ತಾಡಿ ಸೊಸೈಟಿ ನಿರ್ದೇಶಕರಾಗಿ, ಪಂಬೆತ್ತಾಡಿ ಹಾಲು ಸೊಸೈಟಿ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಅವಿನಾಶ್ ಪಂಜ ಜೇಸೀಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ವಿವಿಧ ಸಂಘ ಟನೆಗಳಲ್ಲಿ ಸಕ್ರಿಯರಾಗಿದ್ದರು. ಘಟನೆ ನಡೆದು ಸಾಕಷ್ಟು ಹೊತ್ತಾದರೂ ಪೊಲೀಸರು ಸ್ಥಳಕ್ಕೆ ಬರಲಿಲ್ಲ ಹಾಗೂ 108 ವಾಹನವೂ ಬರಲಿಲ್ಲ ಎಂದು ಊರವರು ಆರೋಪಿಸಿದ್ದಾರೆ. ಗಾಯಾಳುಗಳನ್ನು ಸಂಪಾಜೆ ಸೊಸೈಟಿಯ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಯವರ ಜೀಪಿನಲ್ಲೇ ಆಸ್ಪತ್ರೆಗೆ ಸಾಗಿಸಲಾಯಿತು.

Write A Comment