ಕನ್ನಡ ವಾರ್ತೆಗಳು

ನೃತ್ಯ ‘ಚಿಕಿತ್ಸೆ’ ಗೊತ್ತೆ?

Pinterest LinkedIn Tumblr

errrrrrrrrrrr

ಚಿಕಿತ್ಸಕ ರೋಗಿಯ ಚಲನೆಯನ್ನು ಅನುಕರಣೆ ಮಾಡುತ್ತಾನೆ. ಈ ಚಲನೆ ಹಲವು ಸುಪ್ತ ಮನಸ್ಸಿನ ಭಾವನೆಗಳನ್ನು ಹೊರಹಾಕುತ್ತದೆ. ನಿಧಾನವಾಗಿ ಚಲನೆಯನ್ನು ಬದಲಾವಣೆ ಮಾಡಲು ಚಿಕಿತ್ಸಕ ಪ್ರಯತ್ನಿಸುತ್ತಾನೆ. ಈ ರೀತಿಯ ಪ್ರಯತ್ನಗಳು ರೋಗಿಗೆ ಭಾವನೆಗಳನ್ನು ಹೊರಹಾಕುವ ಹಲವು ಹೊಸ ರೀತಿಗಳನ್ನು ಕಲಿಸುತ್ತದೆ.

ಏನಿದು ‘ನೃತ್ಯ ಚಿಕಿತ್ಸೆ’ ಅಥವಾ ಡಾನ್ಸ್ ಥೆರಪಿ? ಎಲ್ಲ ಚಿಕಿತ್ಸೆಗೂ ‘ಥೆರಪಿ’ ಅಂತಾರಲ್ಲ, ಹಾಗೆನೇ ಇದೂ ಒಂದು ಅಂತೀರಾ? ಅಲ್ಲ, ‘ನೃತ್ಯ ಚಿಕಿತ್ಸೆ’ ಒಂದು ವೈಜ್ಞಾನಿಕ ಸಿದ್ಧ ಪಟ್ಟ  ಮನೋಚಿಕಿತ್ಸೆ. ಸುಮ್ಮನೇ ಕುಣಿದರೆ ಅಥವಾ ಯಾವುದೇ ರೀತಿಯ ನೃತ್ಯವನ್ನು ಸಂತೋಷಕ್ಕಾಗಿಯೇ ಅಥವಾ ಪ್ರದರ್ಶನಕ್ಕಾಗಿ ಇಲ್ಲವೇ ಒಂದು ವಿದ್ಯೆಯಾಗಿ ಕಲಿತರೆ ಅದರಿಂದಲೂ ಪ್ರಯೋಜನಗಳು ಬಹಳಷ್ಟು. ಆದರೆ ಈ ನೃತ್ಯ ‘ನೃತ್ಯ ಚಿಕಿತ್ಸೆ’ ಎನಿಸಿಕೊಳ್ಳಲಾರದು.

ಹಾಗಿದ್ದರೆ ‘ನೃತ್ಯ ಚಿಕಿತ್ಸೆ’ ಎಂದರೆ ಏನು? ಅದು ಒಂದು ರೀತಿಯ ಮನೋಚಿಕಿತ್ಸೆ. ಚಲನೆಯ ಪ್ರಕ್ರಿಯೆಯನ್ನು ಭಾವನೆಗಳನ್ನು ಹೊರಹಾಕಲು, ನಿಯಂತ್ರಿಸಲು ಮತ್ತು ಬೇರೆಯವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಉಪಯೋಗಿಸುವುದು ನೃತ್ಯ ಚಿಕಿತ್ಸೆ. ಅದರ ಮೂಲ ತಳಹದಿ ದೇಹ-ಮನಸ್ಸುಗಳಿಗಿರುವ ಸಂಬಂಧ. ವ್ಯಕ್ತಿಯೊಬ್ಬ ಮಾತನಾಡದೇ ವ್ಯಕ್ತಪಡಿಸುವ ದೈಹಿಕ- ಮುಖದ ಚಲನೆಗಳು ಆತನ ಅನುಭವದ ಮೇಲೆ ಅವಲಂಬಿಸಿರುತ್ತವೆ. ಅವು ಹೆಜ್ಜೆ ಹಾಕುವವ ಚಲನೆಯ ಲಯ, ಸ್ನಾಯು ಬಿಗಿತ, ಚಲನೆಯ ಮೇಲೆ ಹಾಕುವ ಶಕ್ತಿ ಇವುಗಳನ್ನು ನೃತ್ಯ ಮಾಡುವಾಗ ಹೊರಹಾರುತ್ತವೆ.

ನೃತ್ಯ ಚಿಕಿತ್ಸೆಯ ಮೊದಲ ಅಲೆ 1942ರಲ್ಲಿ ಅಮೆರಿಕೆಯಲ್ಲಿ ಆರಂಭವಾಯಿತು. ಮೇರಿಯನ್ ಚೇಸ್ ಎಂಬ ನೃತ್ಯಗಾತಿ 1942ರಲ್ಲಿ ಮೊದಲ ಸಲ ವೈದ್ಯಕೀಯ ಜಗತ್ತಿನಲ್ಲಿ ನೃತ್ಯವನ್ನು ಪರಿಚಯಿಸಿದಳು. ತನ್ನ ನೃತ್ಯ ಶಾಲೆಯಲ್ಲಿ ನೃತ್ಯದ ಚಲನೆಗಳು ತನ್ನ ಶಿಷ್ಯರ ಮೇಲೆ ಬೀರುತ್ತಿದ್ದ ಬದಲಾವಣೆಗಳನ್ನು ಗಮನಿಸಿದ್ದಳು. ವಾಷಿಂಗ್ಟನ್ನಿನ ಸೇಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕಲಿಸುವಂತೆ ಮೇರಿಯನ್ ಚೇಸ್‌ಳನ್ನು ಕೇಳಲಾಯಿತು. ಬಹು ಬೇಗ ಅದನ್ನು ಒಂದು ಪೂರಕ ಚಿಕಿತ್ಸೆಯಾಗಿ ಮನೋವೈದ್ಯಕೀಯ ಜಗತ್ತು ಒಪ್ಪಿಕೊಂಡಿತು.

‘ನೃತ್ಯ ಚಿಕಿತ್ಸೆ’ ಕೆಲಸ ಮಾಡುವ ಬಗೆ ಹೇಗೆ?
ದೇಹ ಮತ್ತು ಮನಸ್ಸು ಪರಸ್ಪರ ಅವಲಂಬಿತ. ಆದ್ದರಿಂದ ಚಲನೆಯ ಬದಲಾವಣೆ ಇಡೀ ಮನೋದೈಹಿಕ ಕಾರ್ಯವನ್ನು ಸೂಚಿಸುತ್ತದೆ. ಚಲನೆ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಚಿಕಿತ್ಸಕ ರೋಗಿಯ ಚಲನೆಯನ್ನು ಅನುಕರಣೆ ಮಾಡುತ್ತಾನೆ. ಈ ಚಲನೆ ಸುಪ್ತ ಮನಸ್ಸಿನ ಹಲವು ಭಾವನೆಗಳನ್ನು ಹೊರಹಾಕುತ್ತದೆ. ನಿಧಾನವಾಗಿ ಚಲನೆಯನ್ನು ಬದಲಾವಣೆ ಮಾಡಲು ಚಿಕಿತ್ಸಕ ಪ್ರಯತ್ನಿಸುತ್ತಾನೆ. ಈ ರೀತಿಯ ಪ್ರಯತ್ನ ರೋಗಿಗೆ ಭಾವನೆಗಳನ್ನು ಹೊರಹಾಕುವ ಹಲವು ಹೊಸ ರೀತಿಗಳನ್ನು ಕಲಿಸುತ್ತದೆ. ಈ ಎಲ್ಲವೂ ಹೇಳಿದಷ್ಟು ಸುಲಭವೇನೂ ಅಲ್ಲ.

ಸರಿಯಾದ ರೀತಿಯಲ್ಲಿ ನಡೆಯುವ ನೃತ್ಯಚಿಕಿತ್ಸೆ ರೋಗಿಯ ಸಾಮಾಜಿಕ ಕೌಶಲಗಳನ್ನು ಉತ್ತಮಗೊಳಿಸಬೇಕು. ತನ್ನ ಚಲನೆಗಳು-ದೇಹ ಇವುಗಳ ಅರಿವು ಮೂಡಿಸಿ ಆತ್ಮವಿಶ್ವಾಸ ಮೂಡಿಸಬೇಕು. ಒಟ್ಟಿನಲ್ಲಿ ದೇಹ-ಮನಸ್ಸು-ಕೊನೆಗೆ ಸುಪ್ತಪ್ರಜ್ಞೆ ಇವುಗಳೆಲ್ಲಕ್ಕೂ ಚಿಕಿತ್ಸೆ ನೀಡುವ ಪರಿಪೂರ್ಣ ಚಿಕಿತ್ಸೆ!

ಚಿಕಿತ್ಸೆ ನೀಡುವ  ಹಂತಗಳು ಹೀಗಿವೆ..
*ಸಿದ್ಧತೆಯ ಹಂತ- ವ್ಯಾಯಾಮಗಳ ಹಂತ. ಇಲ್ಲಿ ಮೈಯನ್ನು ವ್ಯಾಯಾಮಗಳ ಮೂಲಕ ಸಿದ್ಧಗೊಳಿಸುವುದು. ಸುರಕ್ಷತೆಯನ್ನೂ ಗಮನಿಸಲಾಗುವುದು. (ಪ್ರಚೋದಿತ, ಆಕ್ರಮಣಶೀಲ ಪ್ರವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು)
*ವಿಶ್ರಾಂತ ಹಂತ- ಜಾಗೃತ ಮನಸ್ಸನ್ನು ವಿಶ್ರಾಂತಿಸ್ಥಿತಿಗೆ ಇಳಿಸಿ ಚಲನೆಗಳನ್ನು ಮಾಡುತ್ತಾ ಸಾಗುವುದು.
*ಜಾಗೃತ ಹಂತ – ಚಲನೆಗಳಿಗೆ ಅರ್ಥಗಳು ಸಿಕ್ಕುವುದು ಈ ಅರ್ಥಗಳು ಧನಾತ್ಮಕ ಇಲ್ಲವೇ ಋಣಾತ್ಮಕವಾಗಿರಬಹುದು.
*ಪರಿಶೀಲನಾ ಹಂತ- ಪ್ರತಿಯೊಂದು ಅರ್ಥದ ಪ್ರಕ್ರಿಯೆಯ ಪ್ರಾಮುಖ್ಯವನ್ನು ಚರ್ಚಿಸುವುದು.
ನೃತ್ಯ ತರಗತಿಗಳಲ್ಲಿ ಸಾಮಾನ್ಯವಾದ ಬೈಯುವಿಕೆ, ಶಿಕ್ಷೆ, ಅತಿಯಾದ ಪರಿಪೂರ್ಣತೆಯೆಡೆಗೆ ಗಮನ, ಭಂಗಿಗಳ ಸ್ಥಿರತೆ ಇವುಗಳ ಬಗೆಗೆ ‘ನೃತ್ಯ ಚಿಕಿತ್ಸೆ’ ಯಲ್ಲಿ ತಲೆಕೆಡಿಸಿಕೊಳ್ಳುವುದಿಲ್ಲ. ಇಲ್ಲಿಯ ಉದ್ದೇಶ ಸ್ಪಷ್ಟ – ರೋಗಿಯ ಮನಸ್ಸಿನ ಭಾವನೆಗಳ ಸಂವಹನ.

ನೃತ್ಯ ಚಿಕಿತ್ಸೆ ಎಷ್ಟು ಪರಿಣಾಮಕಾರಿ? ಸಂಶೋಧನೆಗಳು ನಡೆಯುತ್ತಲೇ ಇವೆ. ಹೆಚ್ಚಿನ ಮನೋದೈಹಿಕ ಕಾಯಿಲೆಗಳಲ್ಲಿ, ನರರೋಗಗಳಲ್ಲಿ ನೃತ್ಯ ಚಿಕಿತ್ಸೆಯನ್ನು ಈಗಾಗಲೇ ಪ್ರಯೋಗ ಮಾಡಲಾಗಿದೆ. ಯಾವುದೇ ರೀತಿಯ ಅಡ್ಡಪರಿಣಾಮಗಳಂತೂ ಕಂಡು ಬಂದಿಲ್ಲ. ಮಕ್ಕಳಲ್ಲಿ ಕಂಡುಬರುವ ಆಟಿಸಂ, ಕಲಿಕೆಯ ತೊಂದರೆಗಳು, ಬುದ್ಧಿಮಾಂದ್ಯತೆ, ಹಾಗೆಯೇ ಖಿನ್ನತೆ ಮತ್ತು  ಆತಂಕಗಳ ಸಮಸ್ಯೆಗಳು ನೃತ್ಯಚಿಕಿತ್ಸೆಯ ಉಪಯುಕ್ತತೆ ಹೆಚ್ಚು.

ಭಾರತೀಯ ಶಾಸ್ತ್ರೀಯ ನೃತ್ಯಗಳನ್ನು ಉದಾಹರಣೆಗೆ ಭರತನಾಟ್ಯವನ್ನು ‘ನೃತ್ಯಚಿಕಿತ್ಸೆ’ ಯಲ್ಲಿ  ಪರಿಣಾಮಕಾರಿಯಾಗಿ ಉಪಯೋಗಿಸಲು ಸಾಧ್ಯವಿದೆ. ನೃತ್ಯದ ವಿವಿಧ ಅಂಗಗಳಾದ ಅಡವು, ಅಭಿನಯ-ನವರಸಗಳು, ಸಂಚಾರೀ ಭಾವಗಳನ್ನು ಮನೋರೋಗಗಳ ಕೆಲವು ಲಕ್ಷಣಗಳಿಗೆ ಚಿಕಿತ್ಸೆಯಾಗಿ ಉಪಯೋಗಿಸುವುದು. ಆದರೆ ಹಾಗೆ ಮಾಡಲು ‘ಒಂದು ನಿರ್ದಿಷ್ಟವಾದ ಲಕ್ಷಣಕ್ಕೆ ಒಂದು ನಿರ್ದಿಷ್ಟ ತಂತ್ರ’ ಎಂಬ ರೂಪುರೇಷೆ ಅಗತ್ಯ. ಪಾಶ್ಚಿಮಾತ್ಯ ಜಗತ್ತಿನ ವಿಶ್ರಾಂತ-ವಿಶಾಲ ಮಾದರಿಯ ಬದಲು ಹೆಚ್ಚು ಕೇಂದ್ರೀಕೃತ, ಸರಳ ಭಾರತೀಯ ರೋಗಿಗಳಿಗೆ ಉಪಯುಕ್ತವಾದೀತು. ಭಾರತೀಯ ನೃತ್ಯಗಳಲ್ಲಿ ಅಡಕವಾಗಿರುವ ಲಯ-ತಾಳ ಗಣಿತದ ಪ್ರಾಯೋಗಿಕ ರೂಪ ಸರಳ ಹಂತಗಳಿಂದ ಸಂಕೀರ್ಣವಾಗುವ ನೃತ್ಯದ ಅಂಶಗಳು ‘ಕಲಿಕೆಯ ತೊಂದರೆ’ ಗಳಿಗೆ ಸುಲಭ ಚಿಕಿತ್ಸೆಯಾಗಬಲ್ಲವು.

ನೃತ್ಯಚಿಕಿತ್ಸೆಯನ್ನು ಮಾಡುವ ಚಿಕಿತ್ಸಕ ವಿಶೇಷ ಪರಿಣತಿ ಹೊಂದಿರುವುದು ಅತ್ಯಗತ್ಯ. ಇದಕ್ಕಾಗಿಯೇ ವಿಶೇಷ ಕೋರ್ಸ್‌ಗಳೂ ಲಭ್ಯ. ‘ನೃತ್ಯ ಚಿಕಿತ್ಸೆ’ಯ ಬಗ್ಗೆ ತಪ್ಪು ಮಾಹಿತಿ ನೀಡುವವರ ಬಗ್ಗೆ ಎಚ್ಚರಿಕೆ ಅಗತ್ಯ. ‘ನೃತ್ಯಚಿಕಿತ್ಸೆ’ ಸರಿಯಾದ ರೀತಿಯಲ್ಲಿ ಮಾಡದಿರುವುದು ಅಥವಾ ಅದೊಂದನ್ನೇ ಚಿಕಿತ್ಸೆಯಾಗಿ ಪಡೆದು ಕಾಯಿಲೆ ಉಲ್ಬಣಿಸುವ ಅಪಾಯಗಳು ಇಂಥ ‘ಚಿಕಿತ್ಸಕ’ ರ ಕಾರಣದಿಂದ ಸಾಮಾನ್ಯ. ನೃತ್ಯಚಿಕಿತ್ಸೆಯ ಕುರಿತಾದ ಸಂಶೋಧನೆಗಳು ಹೆಚ್ಚಿದಷ್ಟೂ, ಅದರ ಕುರಿತಾಗಿ ಸರಿಯಾದ ಮಾಹಿತಿ ಜನರಿಗೆ ಲಭ್ಯವಾದಷ್ಟೂ ನೃತ್ಯಚಿಕಿತ್ಸೆಯ ಸರಿಯಾದ ವಿಧಾನ, ಲಾಭ ಎರಡೂ ಹೆಚ್ಚು ಹೆಚ್ಚು ದೊರೆಯುತ್ತವೆ.

Write A Comment