ಮನೋರಂಜನೆ

ನಿರುದ್ಯೋಗದಿಂದ ಹೆಚ್ಚಿನ ಆತ್ಮಹತ್ಯೆ: ಅಧ್ಯಯನ

Pinterest LinkedIn Tumblr

Sucide

ಲಂಡನ್: ಆತ್ಮಹತ್ಯೆಗೆ ಮುಖ್ಯವಾಗಿ ನಿರುದ್ಯೋಗವೇ ಕಾರಣ. ಆತ್ಮಹತ್ಯೆಗೆ ಶರಣಾಗುವ ಪ್ರತಿ ಐವರಲ್ಲಿ ಒಬ್ಬರು ನಿರುದ್ಯೋಗದಿಂದ ಬೇಸತ್ತು ಈ ಕೃತ್ಯಎಸಗುತ್ತಾರೆ ಎಂಬ ಆತಂಕಕಾರಿ ಅಂಶ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಸುಮಾರು 63 ದೇಶಗಳಲ್ಲಿ 2000 ದಿಂದ 2011ರವರೆಗೆ ಸಮೀಕ್ಷೆ ನಡೆಸಿ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ. ಈ ಎಲ್ಲಾ ದೇಶಗಳನ್ನು ಉತ್ತರ ಮತ್ತು ದಕ್ಷಿಣ ಅಮೆರಿಕ, ಉತ್ತರ ಮತ್ತು ಪಶ್ಚಿಮ ಯುರೋಪ್, ದಕ್ಷಿಣ ಮತ್ತು ಪೂರ್ವ ಯುರೋಪ್ ಮತ್ತು ಅಮೆರಿಕ ಹೊರತಾದ ಹಾಗೂ ಯುರೋಪ್ ಹೊರತಾದ ರಾಷ್ಟ್ರಗಳು ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಆದರೆ ಭಾರತ ಮತ್ತು ಚೀನಾಗಳಲ್ಲಿ ಯಾವುದೇ ದತ್ತಾಂಶ ಲಭ್ಯವಿರಲಿಲ್ಲ.

ಈ ನಾಲ್ಕೂ ವಲಯಗಳಲ್ಲೂ ಆತ್ಮಹತ್ಯೆ ಮತ್ತು ನಿರುದ್ಯೋಗದ ನಡುವೆ ಗಾಢವಾದ ಸಂಬಂಧವಿತ್ತು ಎಂದು ಸಂಶೋಧನಾ ಪ್ರಬಂಧದ ಪ್ರಧಾನ ಲೇಖಕ ಜ್ಯೂರಿಚ್ ವಿವಿಯ ಕಾರ್ಲೋಸ್ ನೊರ್ಡಾ ಹೇಳಿದ್ದಾರೆ.

ಹೆಚ್ಚುತ್ತಿರುವ ನಿರುದ್ಯೋಗದ ದರ ವಿಭಿನ್ನ ವಯೋಮಾನ ಮತ್ತು ಲಿಂಗದವರ ಮೇಲೆ ಒಂದೇ ಬಗೆಯ ಪರಿಣಾಮ ಬೀರಿದೆ ಎಂದು ಪ್ರಬಂಧದಲ್ಲಿ ಹೇಳಲಾಗಿದೆ.

ಜಾಗತಿಕ ಆರ್ಥಿಕ ಹಿಂಜರಿತ ಕಂಡ 2008ರಲ್ಲಿ ಸಂಭವಿಸಿದ 46 ಸಾವಿರ ಆತ್ಮಹತ್ಯೆ ಪ್ರಕರಣಗಳು ನಿರುದ್ಯೋಗದ ಕಾರಣದಿಂದ ಆದವು ಎಂದು ಅದು ತಿಳಿಸಿದೆ.

ಹಾಗಾಗಿ ನಿರುದ್ಯೋಗದ ದರ ಹೆಚ್ಚಿರುವ ದೇಶಗಳಲ್ಲಿ ಉದ್ಯೋಗಾವಕಾಸ ಸೃಷ್ಟಿಸುವ, ಆರೋಗ್ಯಕರ ಕೆಲಸದ ವಾತಾವರಣ ಸೃಷ್ಟಿಸುವ ಯೋಜನೆಗಳಲ್ಲಿ ಹೆಚ್ಚಿನ ಹಣ ತೊಡಗಿಸಬೇಕು. ಜತೆಗೇ ಆತ್ಮಹತ್ಯೆ ತಡೆ ಕ್ರಮಗಳಿಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ‘ದ ಲ್ಯಾನ್ಸೆಟ್ ಸೈಕಿಯಾಟ್ರಿ’ ಜರ್ನಲ್‌ನಲ್ಲಿ ಪ್ರಕಟವಾಗಿರುವ ಪ್ರಬಂಧದಲ್ಲಿ ಹೇಳಲಾಗಿದೆ.

Write A Comment