ಅಂತರಾಷ್ಟ್ರೀಯ

ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್‌ ಹುಟ್ಟಿದ ಮನೆ 1930ರಿಂದಲೂ ನಾಜಿಗಳ ಪವಿತ್ರ ಸ್ಥಳ

Pinterest LinkedIn Tumblr

pvec15hitler

1945ರಲ್ಲಿ ಆಸ್ಟ್ರಿಯದ ಬ್ರೌನೌ ಆಮ್‌ ಇನ್‌ ನಗರವನ್ನು ಅಮೆರಿಕದ ಭದ್ರತಾ ಪಡೆಗಳು ಸುತ್ತುವರಿದ ನಂತರ, ಅಲ್ಲಿನ ಮೂರು ಅಂತಸ್ತಿನ ಕಟ್ಟಡವೊಂದನ್ನು ನೆಲಸಮಗೊಳಿಸಲು ಜರ್ಮನಿಯ ಸೈನಿಕರು ಯತ್ನಿಸಿದ್ದರು. ಆದರೆ, ಅಮೆರಿಕದ ಸೈನಿಕರು ಅದಕ್ಕೆ ಅವಕಾಶ ಕೊಡಲಿಲ್ಲ. ಆ ಕಟ್ಟಡ 1930ರಿಂದಲೂ ನಾಜಿಗಳ ಪವಿತ್ರ ಸ್ಥಳವಾಗಿ ಮಾರ್ಪಟ್ಟಿತ್ತು.

ಎರಡನೇ ಮಹಾಯುದ್ಧಕ್ಕೆ ಕಾರಣನಾದ ನಾಜಿ ಪಕ್ಷದ ಮುಖ್ಯಸ್ಥ, ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್‌ ಹುಟ್ಟಿದ ಮನೆ ಅದು. ಆ ಕಟ್ಟಡ ನೆಲಸಮಕ್ಕೆ ಅವಕಾಶ ನಿರಾಕರಿಸುವ ಮೂಲಕ, ಬ್ರೌನೌ ಆಮ್‌ ಇನ್‌ ನಗರದ ನಿವಾಸಿಗಳು ಯಾರೊಂದಿಗೂ ಹಂಚಿಕೊಳ್ಳಲು ಬಯಸದ ಪರಂಪರೆಯೊಂದಕ್ಕೆ (ಹಿಟ್ಲರ್‌ ತಮ್ಮ ಊರಿನಲ್ಲಿ ಜನಿಸಿದವನು ಎಂಬ) ಅಮೆರಿಕದ ಭದ್ರತಾ ಪಡೆ ಅಡಿಗಲ್ಲು ಹಾಕಿತ್ತು.

‘ಇನ್‌’ ನದಿ ದಂಡೆಯಲ್ಲಿರುವ ಈ ನಗರವನ್ನು ಜಗತ್ತು ಯಾವ ರೀತಿ ಗುರುತಿಸಬೇಕು ಎಂಬುದರ ಬಗ್ಗೆ ಇಲ್ಲಿನ ಜನರಿಗೆ ಹಲವು ಕಲ್ಪನೆಗಳಿವೆ. ‘ಶಾಂತಿ’ಗೆ ಹೆಸರಾದ ನಗರ, ‘ಅತ್ಯುತ್ತಮ ಕಾರ್ಖಾನೆಗಳ ತವರು’ ಎಂದೆಲ್ಲ ಗುರುತಿಸುವುದನ್ನು ಅವರು ಅಪೇಕ್ಷಿಸುತ್ತಾರೆ. ‘ಸ್ತೋತ್ರಗಳ ಸೃಷ್ಟಿಕರ್ತನ’ ನಗರ ಎಂದು ಕರೆಯಬೇಕು ಎಂದು ಇಚ್ಛಿಸುತ್ತಾರೆ. ಆದರೆ, ಇಲ್ಲಿನ ಜನ ಪ್ರತಿ ಬಾರಿ ಹೊರಗಿನವರಿಂದ ಆ ಮೂರಂತಸ್ತಿನ ಕಟ್ಟಡದ ಬಗ್ಗೆಯೇ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ.

ನಗರದ ಸಾಲ್ಜ್‌ಬರ್ಗರ್‌ ವರ್ಸ್ಟಾಟ್ ರಸ್ತೆಯಲ್ಲಿರುವ ಈ ಕಟ್ಟಡ ಧ್ವಂಸವಾಗದೇ ಉಳಿದಾಗಿನಿಂದ ಇಂದಿನವರೆಗೂ ಬಗೆಹರಿಯದ ಬಿಕ್ಕಟ್ಟಾಗಿದೆ. ಆಸ್ಟ್ರಿಯ ಸರ್ಕಾರಕ್ಕೆ ಈಗಲೂ ಈ ಕಟ್ಟಡ ದೊಡ್ಡ ತಲೆನೋವು.

ಖಾಸಗಿ ಮಾಲೀಕತ್ವ ಹೊಂದಿರುವ ಮೂರಂತಸ್ತಿನ ಕಟ್ಟಡವನ್ನು ಸರ್ಕಾರ ಬಾಡಿಗೆಗೆ ಪಡೆದುಕೊಂಡಿದೆ. ಡಿಸೆಂಬರ್‌ ತಿಂಗಳಿನಿಂದ ಅದು ಖಾಲಿಯಾಗಿದೆ. ಯಾವೊಬ್ಬ ಬಾಡಿಗೆದಾರರೂ ಬರುತ್ತಿಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಆದರೆ, ಪರಿಹಾರ ಇನ್ನೂ ಸಿಕ್ಕಿಲ್ಲ. ಕಟ್ಟಡವನ್ನು ನವೀಕರಣ ಮಾಡಿದರೆ ಬಾಡಿಗೆದಾರರು ಸಿಗುವ ಸಾಧ್ಯತೆ ಇದೆ. ಹಾಗಾಗಿ ಅದನ್ನು ಖರೀದಿಸಲು ಸರ್ಕಾರ ಮುಂದಾಗಿದೆ. ಒಂದು ವೇಳೆ, ಕಟ್ಟಡದ ವಾರಸುದಾರರು ನವೀಕರಣಕ್ಕೆ ಅಡ್ಡಿಪಡಿಸಿದರೆ, ಬಲವಂತವಾಗಿಯಾದರೂ ಅದನ್ನು ವಶಕ್ಕೆ ಪಡೆದುಕೊಳ್ಳುವ ಬಗ್ಗೆಯೂ ಆಡಳಿತ ಚಿಂತನೆ ನಡೆಸಿದೆ.

ಹಲವು ವರ್ಷಗಳ ಕಾಲ ಈ ಕಟ್ಟಡವು ತಾತ್ಕಾಲಿಕ ಮ್ಯೂಸಿಯಂ, ಶಾಲೆ ಮತ್ತು ಗ್ರಂಥಾಲಯಗಳಾಗಿ ಕಾರ್ಯ ನಿರ್ವಹಿಸಿದೆ. ಅಂಗವಿಕಲರಿಗೆ ನೆರವಾಗುವ ಸಂಸ್ಥೆಯೊಂದು ಮೂರು ದಶಕಗಳಿಗೂ ಹೆಚ್ಚು ಕಾಲ ಇದನ್ನು ಮಳಿಗೆ ಹಾಗೂ ಕಾರ್ಖಾನೆಯಾಗಿ ಬಳಸಿತ್ತು. 2011ರಲ್ಲಿ ಆ ಸಂಸ್ಥೆಯು ಕಟ್ಟಡವನ್ನು ತೆರವುಗೊಳಿಸಿತು. ಆ ಸಂದರ್ಭದಲ್ಲೂ ಆಸ್ಟ್ರಿಯ ಸರ್ಕಾರಕ್ಕೆ ಈಗ ಎದುರಾಗಿರುವ ಸಮಸ್ಯೆಯೇ ತಲೆದೋರಿತ್ತು.

ಈ ಕಟ್ಟಡವನ್ನು ಯಾವ ಉದ್ದೇಶಕ್ಕೆ ಬಳಸಬಹುದು ಎಂಬ ಬಗ್ಗೆ ಕಲ್ಪನೆಗಳಿಗೆ ಬರವಿಲ್ಲ. ಅಲ್ಲಿನ ಆಡಳಿತಗಾರರಲ್ಲಿ ಸಾಕಷ್ಟು ಯೋಚನೆಗಳಿವೆ. ಆದರೆ ಕಾರ್ಯರೂಪಕ್ಕೆ ಬರುತ್ತಿಲ್ಲ ಅಷ್ಟೆ. ‘ನಿರಾಶ್ರಿತರು ಯಾಕೆ ಅಲ್ಲಿ ಆಶ್ರಯ ಪಡೆಯಬಾರದು?’ ಎಂದು ಪ್ರಶ್ನಿಸುತ್ತಾರೆ ಬ್ರೌನೌ ಕಮಿಷನರ್‌ ಜಾರ್ಜ್‌ ವೊಜಕ್‌. ‘ನಮಗೆ ಈ ಮನೆ ಬೇಡ. ಆದರೆ, ನಿರಾಶ್ರಿತರ ಬಳಕೆಗೆ ಈ ಕಟ್ಟಡ ಅತ್ಯಂತ ಸೂಕ್ತ’ ಎಂದು ಅವರು ಹೇಳುತ್ತಾರೆ.

ಇನ್ಸ್‌ಬ್ರುಕ್‌ನ ಇತಿಹಾಸ ತಜ್ಞ ಆಂಡ್ರಿಯಾಸ್‌ ಮೈಸ್ಲಿಂಗರ್‌ ಅವರ ತಲೆಯಲ್ಲಿ ಅತ್ಯುತ್ತಮ ಯೋಚನೆಯೊಂದಿದೆ. ಈ ಕಟ್ಟಡವನ್ನು ಅಂತರ ರಾಷ್ಟ್ರೀಯ ಸ್ಮಾರಕ ಮತ್ತು ಶಾಂತಿ ಸಾರುವ ಕೇಂದ್ರವಾಗಿ ರೂಪಿಸಲು ಅವರು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ಯುವಜನತೆಯನ್ನು ಸೇರಿಸಿಕೊಂಡು ಅಂತರ ರಾಷ್ಟ್ರೀಯ ಸಹಕಾರದಲ್ಲಿ ಈ ಯೋಜನೆ ಕಾರ್ಯಗತಗೊಳಿಸಿ, ಆ ಸ್ಥಳದ ವಿಶಿಷ್ಟತೆಯನ್ನು ಜಗತ್ತಿನ ಮುಂದಿಡುವುದು ಅವರ ಬಯಕೆ.

‘ಬ್ರೌನೌ ಒಂದು ಸ್ಮಾರಕವಾಗಲು ಯೋಗ್ಯವಾದ ಜಾಗ. ಇಲ್ಲಿ ಯಾವುದೇ ಅಪರಾಧ ಚಟುವಟಿಕೆಗಳು ನಡೆದಿಲ್ಲ. ಅದಕ್ಕೆ ಪೂರಕವಾದಂತಹ ನಿರ್ಧಾರಗಳನ್ನು ಸಹ ಇಲ್ಲಿ ಕೈಗೊಂಡಿಲ್ಲ. ಆದರೂ ದಶಕಗಳಿಂದ ಈ ಸ್ಥಳದ ಬಗ್ಗೆ ನಾವು ಪೂರ್ವಗ್ರಹಪೀಡಿತರಾಗಿದ್ದೇವೆ’ ಎಂದು ಮೈಸ್ಲಿಂಗರ್‌ ಹೇಳುತ್ತಾರೆ.

‘ಬ್ರೌನೌ ಒಂದು ಸಂಕೇತ. ದುಷ್ಟ ಶಕ್ತಿ ಜಗತ್ತಿಗೆ ಪ್ರವೇಶ ಪಡೆದಿದ್ದು ಇಲ್ಲಿಂದಲೇ’ ಎಂದು ಅವರು ಅಭಿಪ್ರಾಯಪಡುತ್ತಾರೆ.
ವಿರೋಧಿ ನಿಲುವು: ಎರಡನೇ ಮಹಾಯುದ್ಧದ ನಂತರ ಹಿಟ್ಲರ್‌ಗೆ ಸಂಬಂಧಿಸಿದ ಎಲ್ಲ ಕಟ್ಟಡಗಳನ್ನೂ ನೆಲಸಮಗೊಳಿಸಲು ಜರ್ಮನಿ ಹಾಗೂ ಇತರ ಭದ್ರತಾ ಪಡೆಗಳು ಬಯಸಿದ್ದವು. ಇದೇ ನಿಲುವು ಈಗಲೂ ಜರ್ಮನಿ ಜನಪ್ರತಿನಿಧಿಗಳಲ್ಲಿದೆ. ತಮ್ಮ ಯೋಜನೆ ಜಾರಿಗೆ ಶ್ರಮಿಸುತ್ತಿರುವ ಮೈಸ್ಲಿಂಗರ್‌ ಅವರಿಗೆ ಇದರ ಅನುಭವವಾಗಿದೆ. ಜರ್ಮನಿಯ ಕೆಲವು ಸಂಸದರು ಕಟ್ಟಡವನ್ನು ಧ್ವಂಸಗೊಳಿಸಲು ಒಲವು ತೋರುತ್ತಿದ್ದಾರೆ.

ಕಟ್ಟಡವನ್ನು ನಿರ್ಮಿಸಿದ ಕುಟುಂಬಕ್ಕೆ ಸೇರಿದ ಗೆರ್ಲಿಂಡ್ ಪೊಮ್ಮರ್‌ ಎಂಬುವವರು ಈಗ ಅದರ ಮಾಲೀಕತ್ವ ಹೊಂದಿದ್ದಾರೆ. ಈ ಸ್ಥಳ ನಾಜಿ ಬೆಂಬಲಿಗರ ಯಾತ್ರಾ ಕ್ಷೇತ್ರವಾಗಿ ಬದಲಾಗಬಹುದು ಎಂಬ ಆತಂಕದಿಂದ ಆಸ್ಟ್ರಿಯ ಸರ್ಕಾರ 1972ರಲ್ಲಿ ಈ ಕಟ್ಟಡವನ್ನು ಬಾಡಿಗೆಗೆ ಪಡೆದಿತ್ತು. ನೆಲ ಮಹಡಿಯಲ್ಲಿ ಹೋಟೆಲ್‌ ಹೊಂದಿದ್ದ  ಕಟ್ಟಡದ ಮೇಲಿನ ಅಂತಸ್ತುಗಳಲ್ಲಿ ಮನೆಗಳಿದ್ದವು. 1889ರಲ್ಲಿ ಹಿಟ್ಲರ್‌ ಜನಿಸುವುದಕ್ಕೂ ಮೊದಲು ಅವರ ಪೋಷಕರು ಇಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದಿದ್ದರು.

ಕಟ್ಟಡ ನವೀಕರಣಕ್ಕೆ ಗೆರ್ಲಿಂಡ್ ಪೊಮ್ಮರ್‌ ವಿರೋಧಿಸುತ್ತಿದ್ದುದರಿಂದ 2011ರಲ್ಲಿ ಅಂಗವಿಕಲರಿಗಾಗಿ ದುಡಿಯುತ್ತಿದ್ದ ಸಂಸ್ಥೆಯು ಆ ಸ್ಥಳವನ್ನು ತೊರೆದಿತ್ತು. ಮಾಲೀಕರ ವಿರೋಧದಿಂದಾಗಿ ಬೇರೆಯವರು ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಾಗಿದ್ದರೂ ಆಸ್ಟ್ರಿಯ ಸರ್ಕಾರ ಆಕೆಗೆ ಪ್ರತಿ ತಿಂಗಳೂ 5,600 ಡಾಲರ್‌ (ಅಂದಾಜು ₨ 3.36 ಲಕ್ಷ) ಬಾಡಿಗೆ ನೀಡುತ್ತಿದೆ.

ಈ ಕಟ್ಟಡದಲ್ಲಿ ಅಲ್ಯೂಮಿನಿಯಂ ಕಾರ್ಖಾನೆ ಸ್ಥಾಪನೆಗೆ ಅವಕಾಶ ನೀಡುವ ಯೋಚನೆ ಬ್ರೌನೌ ಮೇಯರ್‌ ಜೊಹಾನ್ಸ್‌ ವೈಡ್‌ಬಾಷರ್‌ ಅವರದ್ದು. ಸರ್ಕಾರ ಸೇರಿದಂತೆ ಎಲ್ಲರಿಗೂ ಒಪ್ಪಿಗೆಯಾಗುವಂತಹ ಕೆಲಸಕ್ಕೆ ಕಟ್ಟಡವನ್ನು ಬಳಸುವಂತಾಗಬೇಕು ಎಂಬ ಉದ್ದೇಶದಿಂದ ಅವರು ಹಲವು ತಿಂಗಳಿನಿಂದ ನಗರಪಾಲಿಕೆ ಮತ್ತು ಇತರ ಸಂಸ್ಥೆಗಳೊಂದಿಗೆ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಈಗ ಅವರು ಕೈಕಟ್ಟಿ ಕುಳಿತಿದ್ದಾರೆ. ಈ ನಗರ ಮತ್ತು ಆ ಕಟ್ಟಡದ ಪ್ರಸ್ತಾಪವಾದಾಗಲೆಲ್ಲ ಬೇಡ ಬೇಡವೆಂದರೂ ವಿವಾದಾತ್ಮಕ ಇತಿಹಾಸ ಕಣ್ಣೆದುರಿಗೆ ಬರುತ್ತದೆ ಎಂಬುದು ಅವರ ನೋವು.

ನಾಜಿ ಪಕ್ಷದೊಂದಿಗೆ ಗುರುತಿಸಿಕೊಳ್ಳುವ ಸ್ಥಳದಲ್ಲಿ ಜೀವಿಸುವುದು ಕಷ್ಟದ ಕೆಲಸ ಎಂಬುದು ಅಲ್ಲಿನ ನಿವಾಸಿಗಳ ಅಳಲು. ನಗರದ ಹೆಸರೂ ನಾಜಿ ಪಕ್ಷದೊಂದಿಗೆ ಬೆರೆತಿದೆ ಎಂಬುದು ಅವರ ವಾದ. ‘ಬ್ರೌನ್‌’ (braun), ಜರ್ಮನಿಯಲ್ಲಿ ಕಂಡುಬರುವ ಸಾಮಾನ್ಯವಾದ ಮನೆತನದ ಹೆಸರು. ಉಚ್ಚಾರಣೆಯಲ್ಲಿ ಕಂದು (brown) ಬಣ್ಣವೂ ಹೌದು. ಈ ಬಣ್ಣ ನಾಜಿ ಪಕ್ಷದ ಜೊತೆಯೂ ಗುರುತಿಸಿಕೊಂಡಿದೆ. ಅದಕ್ಕಾಗಿ, ನಗರದ ವರ್ಚಸ್ಸು ಹೆಚ್ಚಿಸುವುದಕ್ಕಾಗಿ ‘ಬ್ರೌನೌ ಅಂದರೆ ಬ್ರೌನ್‌ ಅಲ್ಲ’ (brauno is not brown) ಎಂಬ ಘೋಷ ವಾಕ್ಯವನ್ನು ಘೋಷಿಸಲಾಗಿದೆ.

ಇತ್ತೀಚೆಗೆ ಅಲ್ಲಿ ‘ಬ್ರೌನೌ’ ಪದಕ್ಕೂ ‘ಶಾಂತಿ’ಗೂ ಸಂಬಂಧ ಕಲ್ಪಿಸುವ ಪ್ರಯತ್ನಗಳು ಹೆಚ್ಚು ಹೆಚ್ಚು ನಡೆಯುತ್ತಿವೆ. ವೊಜಕ್‌ ಅವರು 2008ರಲ್ಲಿ ಕಮಿಷನರ್‌ ಆಗಿ ಅಧಿಕಾರ ವಹಿಸಿಕೊಂಡ ನಂತರ, ಶಾಂತಿಯ ದ್ಯೋತಕವಾಗಿರುವ ನಿಂಬೆ ಗಿಡಗಳನ್ನು (linden) ನಗರದಾದ್ಯಂತ ನೆಟ್ಟಿದ್ದಾರೆ. ಇದಲ್ಲದೇ, ನಗರದ ಮೇಲೆ ಬಿದ್ದಿರುವ ಹಿಟ್ಲರ್‌ ಕರಿಛಾಯೆಯನ್ನು ದೂರ ಮಾಡಲು ಸ್ಥಳೀಯ ಜನರು ಸಮುದಾಯ ತಂಡಗಳನ್ನು ಕಟ್ಟಿಕೊಂಡು ಬೇರೆ ಬೇರೆ ಕೆಲಸಗಳಲ್ಲಿ ನಿರತರಾಗಿದ್ದಾರೆ. ನಾಜಿ ವಿರೋಧಿ ಹೋರಾಟಗಾರ ಫ್ರಾಂಜ್‌ ಜಾಗರ್‌ಸ್ಟಾಟರ್‌ ಅಂತಹವರ ಗೌರವಾರ್ಥವಾಗಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ, ಖ್ಯಾತ ಗೀತ ರಚನೆಕಾರ ಫ್ರಾಂಜ್‌ ಕ್ಸೇವರ್‌ ಗ್ರುಬರ್‌ ಅವರ ಪುತ್ಥಳಿಗಳನ್ನು ನಿರ್ಮಿಸಿದ್ದಾರೆ.

ಆ ಮೂರಂತಸ್ತಿನ ಕಟ್ಟಡ, ಅದರ ಇತಿಹಾಸ ಹಾಗೂ ಅದು ಹುಟ್ಟುಹಾಕಿರುವ ಕೆಟ್ಟ ಪರಂಪರೆಯಿಂದ ಬ್ರೌನೌ ನಗರದ ಜನರು ಎಷ್ಟರ ಮಟ್ಟಿಗೆ ಬೇಸತ್ತಿದ್ದಾರೆ ಎಂದರೆ, ಅದರ ಸಮೀಪವೇ ಹಾದು ಹೋಗುವ ನಿವಾಸಿಗಳು ಮತ್ತು ಪಕ್ಕದಲ್ಲೇ ಇರುವ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುವ ಪ್ರಯಾಣಿಕರು, ಕಟ್ಟಡದ ಮುಂದೆ ನೆಟ್ಟಿರುವ, ನಿರಂಕುಶ ಆಡಳಿತದ ಅಪಾಯದ ಬಗ್ಗೆ ಎಚ್ಚರಿಸುವ ಸಾಲುಗಳನ್ನೊಳಗೊಂಡ ಶಿಲಾ ಸ್ಮಾರಕದತ್ತ ದೃಷ್ಟಿಯನ್ನೂ ಹಾಯಿಸುವುದಿಲ್ಲ!

ಹಿಟ್ಲರ್‌ ಖ್ಯಾತಿ ಮತ್ತು ಪ್ರಭಾವ ಹೆಚ್ಚಾಗುತ್ತಿದ್ದಂತೆಯೇ ಅವರ ಜನ್ಮಸ್ಥಳ ಮತ್ತು ಆ ಮೂಲಕ ಬ್ರೌನ್‌ಗೂ ಹೆಚ್ಚಿನ ಮಹತ್ವ ದೊರೆಯುತ್ತಾ ಬಂತು. ಎರಡನೇ ಮಹಾಯುದ್ಧ ಮುಗಿದ ದಶಕಗಳ ನಂತರವೂ ಇಲ್ಲಿಗೆ ಭೇಟಿ ನೀಡುತ್ತಿದ್ದ, ಅದರಲ್ಲೂ ಹಿಟ್ಲರ್‌ ಜನ್ಮದಿನದ ಸಂದರ್ಭದಲ್ಲಿ ಬರುತ್ತಿದ್ದ ನಾಜಿ ಬೆಂಬಲಿಗರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನುತ್ತಾರೆ ಸ್ಥಳೀಯ ಪೊಲೀಸರು.

ಆದಾಗ್ಯೂ ಇಲ್ಲಿನ ಕೆಲವರು ಹೊರಗಿನವರ ಮುಂದೆ ತಾವು ಈ ಊರಿನವರು ಎಂದು ಗುರುತಿಸಿಕೊಳ್ಳಲು ಇಚ್ಛಿಸುವುದಿಲ್ಲ. ‘ನಾನು ಹೊರದೇಶಕ್ಕೆ ಪ್ರಯಾಣಿಸುವಾಗಲೆಲ್ಲ ನೀವು ಎಲ್ಲಿನವರು ಎಂದು ಯಾರಾದರೂ ಕೇಳಿದರೆ ಮೊದಲು ನನ್ನ ನಗರದ ಹೆಸರು ಹೇಳುವುದಿಲ್ಲ. ಸಾಲ್‌್ಸಬರ್ಗ್‌ ಸಮೀಪದವನು ಅಥವಾ ಮ್ಯೂನಿಚ್‌ಗೆ ಹತ್ತಿರದ ಊರಿನವನು ಎನ್ನುತ್ತೇನೆ. ಆದರೂ ಅವರಿಗೆ ಅರ್ಥವಾಗದಿದ್ದಾಗ ಅನಿವಾರ್ಯವಾಗಿ ಬ್ರೌನೌ ಹೆಸರು ಹೇಳಲೇಬೇಕಾಗುತ್ತದೆ. ಆದರೆ ಹಾಗೆಂದ ಕೂಡಲೇ, ಓಹೋ ಹಿಟ್ಲರನ ಜನ್ಮಸ್ಥಳ. ಅದನ್ನು ಆಗಲೇ ಯಾಕೆ ಹೇಳಲಿಲ್ಲ? ಎಂಬ ಪ್ರತಿಕ್ರಿಯೆಯೇ ಎಲ್ಲರಿಂದಲೂ ಬರುತ್ತದೆ’ ಎಂದು ಹೇಳುತ್ತಾರೆ ಸ್ಥಳೀಯ ನಿವಾಸಿ ಹ್ಯಾನ್‌್ಸ ಸ್ವಾರ್ಜ್‌ಮೇರ್‌.

Write A Comment