ಕನ್ನಡ ವಾರ್ತೆಗಳು

ಆಧಾರ್‌ ಕಾರ್ಡ್  ಯೋಜನೆಯಲ್ಲಿ ಶೇ.100 ಸಾಧನೆ ಮಾಡಿ : ಡಿಸಿ ಇಬ್ರಾಹಿಂ

Pinterest LinkedIn Tumblr

dc_office_press_1

ಮಂಗಳೂರು,ಫೆ.13  : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಯೋಜನೆಯಲ್ಲಿ ಶೇ.77 ಸಾಧನೆ ಮಾಡಿದ್ದು, ಇನ್ನೂ ನಾಲ್ಕು ಲಕ್ಷ ಮಂದಿ ಕಾರ್ಡ್ ಪಡೆಯಬೇಕಾಗಿದೆ. ಶೇ.100 ಸಾಧನೆ ಮಾಡಲು ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಬೆಂಗಳೂರಿನ ಆಡಳಿತ ಕೇಂದ್ರ ಮತ್ತು ದ.ಕ. ಜಿಲ್ಲಾಡಳಿತ ವತಿಯಿಂದ ಅಟಲ್‌ಜೀ ಜನಸ್ನೇಹಿ ಕೇಂದ್ರ (ಕೆಆರ್‌ಡಿಎಚ್)ಗಳಲ್ಲಿ ಶಾಶ್ವತ ಆಧಾರ್ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ನಾನಾ ಯೋಜನೆಗಳಡಿಯಲ್ಲಿ ಆಧಾರ್ ಕಾರ್ಡ್ ಸಂಖ್ಯೆಯ ಹೊಂದಾಣಿಕ ಮಾಡುವ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿಗೆ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

dc_office_press_2dc_office_press_5

2010ರಲ್ಲಿ ಆಧಾರ್ ಯೋಜನೆ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿದ್ದರೂ, ಕೆಲವೊಂದು ಅವ್ಯವಸ್ಥೆ, ಸರಕಾರದ ಬದಲಾವಣೆಯಿಂದ ಸ್ಥಗಿತ ಸಾಧ್ಯತೆ ಎಂಬ ಸಂಶಯದಿಂದ ಕುಂಠಿತಗೊಂಡಿದೆ. ಇದೀಗ ಯೋಜನೆಗೆ ಮರುಜೀವ ಸಿಕ್ಕಿದೆ. ಎಲ್ಲ 17 ನಾಡ ಕಚೇರಿ ಮತ್ತು ನಾಲ್ಕು ಮಂಗಳೂರು ಒನ್ ಕೇಂದ್ರಗಳಿಗೆ ಶಾಶ್ವತ ನೋಂದಣಿ ಯಂತ್ರ ಬಂದಿದೆ. ನಮ್ಮ ಸಿಬ್ಬಂದಿಯೇ ಅದರ ನಿರ್ವಹಣೆ ಮಾಡಲಿದ್ದಾರೆ. ಆಧಾರ್ ಕಾರ್ಡ್ ಹಂಚಿಕೆಯಲ್ಲಿ ಜಿಲ್ಲೆ 9ನೇ ಸ್ಥಾನದಲ್ಲಿದ್ದು, ಪ್ರಥಮ ಸ್ಥಾನಕ್ಕೆ ಬರಲು ಸಿಬ್ಬಂದಿ ಆಸಕ್ತಿಯಿಂದ ಕೆಲಸ ಮಾಡಬೇಕು. ಮುಂದೆ ಎಲ್ಲ ಸಾಮಾಜಿಕ ಭದ್ರತಾ ಯೋಜನೆಗಳನ್ನೂ ಆಧಾರ್‌ಗೆ ಜೋಡಿಸಲಾಗುತ್ತದೆ ಎಂದು ಎಂದು ಡಿಸಿ ಹೇಳಿದರು. ಜಿಲ್ಲಾ ಪಂಚಾಯಿತಿ ಸಿಇಒ ತುಳಸಿ ಮದ್ದಿನೇನಿ, ಮಹಾನಗರ ಪಾಲಿಕೆ ಆಯುಕ್ತೆ ಹೆಫ್ಸಿಬಾ ರಾಣಿ ಕೊರ್ಲಪತಿ, ಎಸ್ಪಿ ಡಾ.ಶರಣಪ್ಪ ಎಸ್.ಡಿ. ಉಪಸ್ಥಿತರಿದ್ದರು.

ಇ ಆಡಳಿತದ ಸಲಹೆಗಾರ ಸಂದೀಪ್ ಪಾಟೀಲ್, ಆಧಾರ್ ನಿರ್ವಹಣೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ, ಸಂವಾದ ನಡೆಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಕಾರ್ಯಕ್ರಮ ನಿರೂಪಿಸಿದರು.

Write A Comment