ಕನ್ನಡ ವಾರ್ತೆಗಳು

ನಂದಿನಿ ಗೋಲ್ಡ್’ ಪಶು ಆಹಾರದ ದರದಲ್ಲಿ ಪ್ರತಿ ಟನ್‍ಗೆ ರು 1,000 ರಿಯಾಯಿತಿ

Pinterest LinkedIn Tumblr

nandini milk

ಬೆಂಗಳೂರು,ಜ.31  : ಬೇಸಿಗೆಯಲ್ಲಿ ಹಸಿರು ಹುಲ್ಲಿನ ಮೇವು ಹಾಗೂ ನೀರಿನ ಕೊರತೆ ಉಂಟಾಗುತ್ತಿರುವುದರಿಂದ ಫೆ .1 ರಿಂದ ಮೇ ಅಂತ್ಯದವರೆಗೆ `ನಂದಿನಿ ಗೋಲ್ಡ್’ ಪಶು ಆಹಾರದ ದರದಲ್ಲಿ ಪ್ರತಿ ಟನ್‍ಗೆ ರು 1,000 ರಿಯಾಯಿತಿ ನೀಡಲಾಗುವುದು ಎಂದು ಕರ್ನಾಟಕ ಹಾಲು ಮಹಾಮಂಡಳಿ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ತಿಳಿಸಿದ್ದಾರೆ. ಬೇಸಿಗೆಯಲ್ಲಿ ಹಾಲು ಉತ್ಪಾದನಾ ಪ್ರಮಾಣ ಪ್ರತಿ ವರ್ಷ ಇಳಿಮುಖಗೊಳ್ಳುತ್ತಿದೆ. ಹಸಿರು ಮೇವು ಹಾಗೂ ನೀರಿನ ಕೊರತೆಯಿಂದ ಉತ್ಪಾದನಾ ಕೊರತೆಯ ನಷ್ಟ ಸರಿದೂಗಿಸಲು ಈ ನೀತಿ ಜಾರಿ ಗೊಳಿಸಲಾಗಿದೆ.

ಸಮಸ್ತ ಹಾಲು ಉತ್ಪಾದಕ ರೈತರು ಮಂಡಳಿ ಘೋಷಿಸಿರುವ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಕೆಎಂಎಫ್ ಬಿಡುಗಡೆ ಮಾಡಿದ್ದ `ನಂದಿನಿ ಗೋಲ್ಡ್’ ಪಶು ಆಹಾರಕ್ಕೆ ರೈತರಿಂದ ಉತ್ತಮ ಬೇಡಿಕೆ ಬಂದಿದ್ದು, ಹಾಲಿನ ಪ್ರಮಾಣದಲ್ಲಿ 1 ರಿಂದ 1.5 ಲೀ. ಹೆಚ್ಚಳ ಕಂಡುಬಂದಿದೆ. ವಿವಿಧ ಭಾಗಗಳ ಹಲವಾರು ಹಾಲು ಉತ್ಪಾದಕ ರೈತರು ದೂರವಾಣಿ ಮೂಲಕ ಈ ವಿಷಯ ತಿಳಿಸಿದ್ದು, ಪ್ರವಾಸ ಕೈಗೊಂಡಾಗಲೂ ಅನೇಕ ರೈತರು ಪಶು ಆಹಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಾಲಿನಲ್ಲಿ ಎಸ್‍ಎನ್‍ಎಫ್ , ಕೊಬ್ಬಿನಾಂಶ ಹೆಚ್ಚಾಗಿರುವುದರಿಂದ ರೈತರಿಗೆ ವರ್ಷಕ್ಕೆ ಸುಮಾರು ರು 400 ರಿಂದ ರು. 500 ಕೋಟಿ ಹೆಚ್ಚುವರಿ ಆದಾಯ ಬರುವಂತಾಗಿದೆ. ಈ ಮೊದಲು ನೀಡುತ್ತಿದ್ದ ಪಶು ಆಹಾರವನ್ನು ಹಿರಿಯ ಪಶು ಆಹಾರ ವಿಜ್ಞಾನಿಗಳ ಸಲಹೆ ಮೇರೆಗೆ ಪರಿಷ್ಕರಿಸಲಾಗಿದೆ. ಈ ಆಹಾರದಲ್ಲಿ ಕಚ್ಚಾ ಸಾರಜನಕ ಶೇ.18 ರಿಂದ 19, ಕೊಬ್ಬಿನಾಂಶ ಶೇ.3 ರಿಂದ 3.5, ಕಚ್ಚಾ ನಾರಿನ ಅಂಶ ಶೇ.5.5 ರಿಂದ 6.0, ಒಟ್ಟು ಪಚನವಾಗುವ ಪೌಷ್ಠಿಕಾಂಶ ಶೇ.72 ರಿಂದ 75, ತೇವಾಂಶ ಶೇ.10 ರಿಂದ 11ಕ್ಕೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕ್ಷೀರಭಾಗ್ಯ 5 ದಿನಕ್ಕೆ ವಿಸ್ತರಣೆ :
ಬೆಂಗಳೂರು: ಸರ್ಕಾರದ ಕ್ಷೀರಭಾಗ್ಯಯೋಜನೆ ಮುಂದಿನ ಬಜೆಟ್ ವೇಳೆಗೆ ಇನ್ನಷ್ಟು ಹಿಗ್ಗುವ ಸಾಧ್ಯತೆ ಇದೆ. ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ವಾರ ದಲ್ಲಿ 3 ದಿನ ಹಾಲು ನೀಡುತ್ತಿರುವ ಸರ್ಕಾರ ಇನ್ನು ಮುಂದೆ 5 ದಿನಗಳೂ ಹಾಲು ವಿತರಿಸಲು ಚಿಂತಿಸಿದೆ. ಹಾಲಿನ ಪುಡಿ ಸದ್ಬಳಕೆ ನಿಟ್ಟಿನಲ್ಲಿ ಸರ್ಕಾರ ಹಾಲು ವಿತರಣೆಯನ್ನು 3 ರಿಂದ 5 ದಿನಕ್ಕೆ ವಿಸ್ತರಿಸಬೇಕೆಂದು ಕೆಎಂಎಫ್ ಸಾಕಷ್ಟು ಬಾರಿ ವಿನಂತಿಸಿತ್ತು. ಇತ್ತೀಚಿಗೆ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ಪ್ರಾಥಮಿಕ ಶಿಕ್ಷಣ ಸಚಿವರಿಗೂ ಪತ್ರವನ್ನೂ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಮಕ್ಕಳಿಗೆ 5 ದಿನ ಹಾಲು ನೀಡುವ ಬಗ್ಗೆ ಮುಂದಿನ ಬಜೆಟ್‍ನಲ್ಲಿ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದೆ.

Write A Comment