ಕುಂದಾಪುರ: ಸಂಚಾರಿ ಸಮಸ್ಯೆಯಿಂದ ಬಳಲುತ್ತಿರುವ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಇದೀಗ ತ್ಯಾಜ್ಯ ವಿಲೇವಾರಿಯಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಸಾರ್ವಜನಿಕರು ಹಾಗೂ ಸ್ಥಳೀಯರು ದೂರಿಕೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದೀಗ ಕಳೆದ ಮೂರು ದಿನಗಳಿಂದ ಪುರಸಭಾ ವ್ಯಾಪ್ತಿಯ ಆರು ಮತ್ತು ಒಂಭತ್ತನೇ ವಾರ್ಡನ್ನು ವಿಭಜಿಸುವ ಕಾಂಕ್ರೀಟ್ ರಸ್ತೆಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಲಾಗಿದ್ದರೂ ಅದನ್ನು ವಿಲೇವಾರಿ ಮಾಡುವ ಗೋಜಿಗೆ ಪುರಸಭೆ ಪ್ರಯತ್ನಿಸಿಲ್ಲ.
ಈ ಬಗ್ಗೆ ಸ್ಥಳೀಯರಿಗೆ ಮೂಗು ಬಿಡಲಾಗದೇ ಇದ್ದರೂ, ಪುರಸಭೆಯ ಗಮನಕ್ಕೂ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗುತ್ತಿದೆ. ಮೂರು ದಿನಗಳ ಹಿಂದೆ ಪುರಸಭೆಯ ಸಿಬ್ಬಂದಿಗಳು ರಸ್ತೆ ಬದಿಯ ಕಸ ಗುಡಿಸಿ ಸ್ವಚ್ಚ ಮಾಡಿದ್ದಾರಾದರೂ ಗುಡಿಸಿದ ಕಸವನ್ನು ರಸ್ತೆ ಪಕ್ಕದ ಚರಂಡಿಯಲ್ಲಿಯೇ ಬಿಡಲಾಗಿದೆ. ಪಕ್ಕದಲ್ಲಿಯೇ ಕುರಿ ಹಾಗೂ ಆಡುಗಳ ತ್ಯಾಜ್ಯಗಳನ್ನು ಗೋಣಿ ಚೀಲದಲ್ಲಿ ತುಂಬಿಸಿ ಎಸೆಯಲಾಗಿದೆ. ರಸ್ತೆಗೆ ತಾಗಿಯೇ ಇರುವ ಮನೆಗಳಲ್ಲಿ ವಾಸಿಸುತ್ತಿರುವ ನಾಗರೀಕರಿಗೆ ವಾಸನೆಯಿಂದ ಹೊರಗೆ ಬರಲಾಗುತ್ತಿಲ್ಲ. ನಿತ್ಯವೂ ವಾಸನೆ ತಿಂದೂ ತಿಂದು ಆರೋಗ್ಯ ಹದಗೆಟ್ಟಿರುವ ಘಟನೆಗಳೂ ನಡೆದಿವೆ, ಆದರೆ ಸಂಬಂಧಪಟ್ಟ ಸ್ಥಳೀಯ ಜನಪ್ರತಿನಿಧಿಗಳು ಮಾತ್ರ ಇತ್ತ ತಲೆ ಹಾಕಿಲ್ಲ.
ಕಸ ಕೊಂಡೊಯ್ಯುವ ಪುರಸಭೆಯ ವಾಹನಗಳಿಗೂ ಮೇಲ್ಹಾಸು ಹಾಕದೇ ವಾಹನ ಓಡಿಸುವುದರಿಂದಲೂ ಇಂತಹಾ ಘಟನೆಗಳು ನಡೆಯುತ್ತಿದ್ದು, ಟ್ರ್ಯಾಕ್ಟರ್ ಹಾಗೂ ಲಾರಿಗಳಲ್ಲಿ ಕಸ ಸಾಗಿಸುವಾಗ ಇಂತಹಾ ತ್ಯಾಜದ ಚೀಲಗಳು ರಸ್ತೆಯಲ್ಲಿ ಎಲ್ಲೆಂದರಲ್ಲಿ ಬೀಳುವ ಮೂಲಕ ನಿತ್ಯ ಸಂಚಾರಿಗಳಿಗೆ ಹಾಗೂ ಸ್ಥಳೀಯ ಮನೆಗಳಿಗೆ ತೊಂದರೆಯಾಗುತ್ತಿದೆ.
ಹಲವು ಬಾರಿ ಈ ಬಗ್ಗೆ ಪುರಸಭೆಯಲ್ಲಿ ಮನವಿ ಮಾಡಿಕೊಂಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆನಪ್ರತಿನಿಧಿಗಳೂ ಈ ಬಗ್ಗೆ ಮಾತನಾಡುತ್ತಿಲ್ಲ. ದಿನನಿತ್ಯ ವಾಸನೆ ನುಂಗುವುದೇ ನಮ್ಮ ಗೋಳಾಗಿದೆ– ಶಕುಂತಲಾ, (ಸ್ಥಳೀಯ ನಿವಾಸಿ, ಪುರಸಭೆ ವಾರ್ಡ್ 6)

