ಕುಂದಾಪುರ : ಭಾರತ ಸ್ವಾತಂತ್ರ್ಯ ಪಡೆಯುವಲ್ಲಿ ಅದೆಷ್ಟೋ ಜನ ಹೋರಾಡಿದ್ದಾರೆ. ಮಹಾತ್ಮಾ ಗಾಂಧೀಜಿಯ ಹೆಸರು ಮೊದಲ ಸಾಲಿನಲ್ಲಿ ನಿಲ್ಲುತ್ತದೆಯಾದರೂ ದೇಶದಾದ್ಯಂತ ಗ್ರಾಮೀಣ ಭಾಗಗಳಲ್ಲಿ ಗಾಂಧೀಜಿಯ ಅಹಿಂಸಾತ್ಮಕ ಹೋರಾಟದ ಅನುಯಾಯಿಗಳಾಗಿ ಸ್ವಾಂತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ ಅದೆಷ್ಟೋ ಜೀವಗಳು ಎಲೆ ಮರೆಯ ಕಾಯಿಯಂತೆ ಬಾಳಿ ಬದುಕಿ ಸ್ವರ್ಗಸ್ಥರಾಗಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ದಿನ ಕಾಟಾಚಾರಕ್ಕೆಂಬಂತೆ ಇಂತಹಾ ಹೋರಾಟಗಾರರನ್ನು ಸ್ಮರಿಸುವ ಕೆಲಸಗಳಾಗುತ್ತಿವೆ.
ಆದರೆ ವಾಸ್ತವವಾಗಿ ಇಂತಹಾ ಅದೆಷ್ಟೋ ಜೀವಗಳು ಸ್ವಾತಂತ್ರ್ಯಾನಂತರ ತಮ್ಮ ಬದುಕನ್ನು ದುರಂತಮಯವನ್ನಾಗಿಸಿಕೊಳ್ಳುತ್ತಲೇ ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಕನಿಷ್ಟ ಮೂಲಭೂತ ಸೌಕರ್ಯವನ್ನೂ ಸರ್ಕಾರದಿಂದ ಪಡೆಯುವಲ್ಲಿ ವಿಫಲರಾಗಿದ್ದಾರೆ ಎನ್ನುವುದಕ್ಕೆ ಬುಧವಾರ ತಡರಾತ್ರಿ ದಿವಂಗತರಾದ ಕುಂದಾಫುರ ತಾಲೂಕಿನ ಹಕ್ಲಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಣಿಕೋಲು ಎಂಬಲ್ಲಿ ತನ್ನದಲ್ಲದ ಆದರೆ ತನ್ನ ಸ್ವಾಧೀನವಿರುವ ಸರ್ಕಾರೀ ಜಾಗದಲ್ಲಿಯೇ ಚಿಮಿಣಿ ಬೆಳಕಿನಲ್ಲಿಯೇ ಕೊನೆಯುಸಿರೆಳೆದ ಗಂಗೆ ಮನೆ ನಿವಾಸಿ ರಾಮ ಮೊಗವೀರ(87) ಸಾಕ್ಷಿಯಾಗಿದ್ದಾರೆ.
ಭಾರತದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿಯವರನ್ನು ಬೆಂಬಲಿಸಿದ ರಾಮ ಮೊಗವೀರ ಭಾರತಕ್ಕೆ ಸ್ವಾತಂತ್ರ್ಯವನ್ನೇನೋ ತಂದುಕೊಡುವಲ್ಲಿ ಪ್ರಯತ್ನಿಸಿದ್ದಾರೆ. ಆದರೆ ಅವರ ಸ್ವಾತಂತ್ರ್ಯವನ್ನು ಸರ್ಕಾರ ಹಾಗೂ ಇಲಾಖೆಗಳಿಂದ ಪಡೆದುಕೊಳ್ಳಲು ಬದುಕಿನುದ್ದಕ್ಕೂ ಹೋರಾಟ ನಡೆಸುತ್ತಲೇ ಸ್ವರ್ಗಸ್ಥರಾಗಿರುವುದು ಮಾತ್ರ ಬಹುದೊಡ್ಡ ದುರಂತವೇ ಸರಿ.
ರಾಮ ಮೊಗವೀರರಿಗೆ ನಾಲ್ಕು ಜನ ಮಕ್ಕಳು. ಅದರಲ್ಲಿ ಮೂರು ಗಂಡು ಒಂದು ಹೆಣ್ಣು, ಗಂಡು ಮಕ್ಕಳು ಕೂಲಿ ನಾಲಿ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಮಗಳು ತಂದೆಯ ಜೊತೆಗಿದ್ದವರು. ಹಿಂದೆ ಹಳೆಯದಾದ ಗುಡುಸಲಿನಲ್ಲಿ ಬದುಕುತ್ತಿದ್ದ ಇವರಿಗೆ ಸರ್ಕಾರದಿಮದ ಲಭಿಸಿದ ಸಹಾಯವೆಂದರೆ ಪೆನ್‌ಶನ್ ಮಾತ್ರ. ಉಳಿದಂತೆ ವರ್ಷದ ಹಿಂದೆ ಹರಕು ಮನೆಗೆ ಭಾಗ್ಯ ಜ್ಯೋತಿ ಎನ್ನುವ ಒಚಿಟಿ ಬಲ್ಬ್ ಬೆಳಕಿನ ವ್ಯವಸ್ಥೆಯಾಗಿತ್ತು. ಕಳೆದ ಜೂನ್‌ನಲ್ಲಿ ಮಳೆ ಆರಂಭವಾದಾಗ ಬೀಳುವ ಸ್ಥಿತಿಯಲ್ಲಿದ್ದ ಈ ಮನೆಯನ್ನು ತೊರೆದ ರಾಮಮೊಗವೀರ ಮತ್ತು ಅವರ ಮಗಳು ಹಾಗೂ ಮೊಮ್ಮಕ್ಕಳು ಪಕ್ಕದಲ್ಲಿಯೇ ಸಣ್ಣದಾದ ಶೆಡ್ ನಿರ್ಮಿಸಿ ಬದುಕುತ್ತಿದ್ದವರು.
ಅಲ್ಲಿಂದ ಇದ್ದ ಒಂದೇ ಒಂದು ಬಲ್ಬ್ ಬೆಳಕು ಕೂಡಾ ಇವರಿಗೆ ಮರೀಚಿಕೆಯಾಯ್ತು. ಮನೆ ಪಕ್ಕದಲ್ಲಿಯೇ ಹಾದು ಹೋಗುತ್ತಿರುವ ವಿದ್ಯುತ್ ಕಂಬವಿದ್ದರೂ ಇವರ ಮನೆಗೆ ದೀಪ ಅಳವಡಿಸುವ ವ್ಯವಸ್ಥೆಗೆ ಇಲಾಖೆಗಳು ಮನಸ್ಸು ಮಾಡಲೇ ಇಲ್ಲ. ಇದಕ್ಕಾಗಿ ನೂರಾರು ಸಲ ಕಚೇರಿಗೆ ಅಲೆದಾಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಎನ್ನುತ್ತಾರೆ ರಾಮ ಮೊಗವೀರರ ಮಗಳು ಭಾರತಿ.
ಐದು ವರ್ಷದ ಹಿಂದೆ ರಾಜೀವ ಗಾಂಧೀ ವಸತಿ ಯೋಜನೆಯಡಿಯಲ್ಲಿ ಮನೆ ಕಟ್ಟಲು ತೊಡಗಿದ್ದರೂ ಇದುವರೆಗೆ ಮನೆ ಪೂರ್ಣಗೊಳಿಸಲು ರಾಮಮೊಗವೀರರ ಕುಟುಂಬಕ್ಕೆ ಸಾಧ್ಯವಾಗಲೇ ಇಲ್ಲ. ಸಾಯುವ ಮೊದಲು ಮನೆ ನೋಡಬೇಕು ಮತ್ತು ವಿದ್ಯುತ್ ಬೆಳಕು ನೋಡಬೇಕು ಎನ್ನುವ ರಾಮ ಮೊಗವೀರರ ಕನಸು ಕನಸಾಗಿಯೇ ಉಳಿದು ಹೋಗಿದೆ. ಕಳೆದ ಮೂರು ವರ್ಷಗಳಿಂದ ವಯೋ ಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ ರಾಮ ಮೊಗವೀರರ ಆರೋಗ್ಯದ ಸುಧಾರಣೆಗೆ ಯಾವ ಇಲಾಖೆಯಾಗಲೀ, ಸಂಘ ಸಂಸ್ಥೆಗಳಾಗಲೀ ಮುಂದೆ ಬರದಿರುವುದು ವಿಪರ್ಯಾಸವೇ ಸರಿ. ಇದೇನಾ ಭಾರತದ ಸ್ವಾತಂತ್ರ್ಯ..?
ಇನ್ನಾದರೂ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಅವರ ಕುಟುಂಬಕ್ಕೆ ಸಲ್ಲಬೇಕಾದ ಕನಿಷ್ಟ ಮೂಲಭೂತ ಸೌಕರ್ಯವನ್ನಾದರೂ ಇಲಾಖೆ ಹಾಗೂ ಸರ್ಕಾರ ಒದಗಿಸಬಲ್ಲುದೇ ಕಾದು ನೋಡಬೇಕಾಗಿದೆ.
ವಿದ್ಯುತ್ ಸಂಪರ್ಕಕ್ಕಾಗಿ ಕಚೇರಿಗೆ ಅಲೆದೂ ಅಲೆದು ಸಾಕಾಗಿ ಹೋಗಿದೆ. ಮಗಾ ಸಾಯುವ ಮೊದಲು ಬೆಳಕು ಕಾಣುತ್ತೇನೆಯೇ? ನಾನು ನನ್ನ ಮನೆಯನ್ನು ನೋಡಿಯೇ ಸಾಯುತ್ತೇನೆ ಎಂದು ತಂದೆ ಹೇಳುತ್ತಿದ್ದರು. ಆದರೆ ಅವರ ಕನಸು ನನಸು ಮಾಡಲು ಸಾಧ್ಯವಾಗಲೇ ಇಲ್ಲ.
– ಭಾರತಿ, ರಾಮ ಮೊಗವೀರರ ಮಗಳು


