ಕರ್ನಾಟಕ

ಪೊಲೀಸ್‌ ಹಲ್ಲೆ : ನಟ ಚೇತನ್ ಆರೋಪ; ಎಸ್‌ಐ, ಎಸಿಪಿ ವಿರುದ್ಧ ಕಮಿಷನರ್‌ಗೆ ದೂರು

Pinterest LinkedIn Tumblr

pvec300115Chethan_0

ಬೆಂಗಳೂರು: ‘ಕಬ್ಬನ್‌ಪಾರ್ಕ್‌ ಠಾಣೆಯ ಎಸ್‌ಐ ನವೀನ್ ಸುಬೇಕರ್ ಹಾಗೂ ಹಲಸೂರು ಗೇಟ್ ಉಪವಿಭಾಗದ ಎಸಿಪಿ ಅಮರನಾಥ್ ರೆಡ್ಡಿ ಅವರು ನನ್ನ ಮೇಲೆ ಹಲ್ಲೆ ನಡೆಸಿ, ದುಂಡಾವರ್ತಿ ಪ್ರದರ್ಶಿ­ಸಿದರು’ ಎಂದು ಆರೋಪಿಸಿ ‘ಆ ದಿನಗಳು’ ಸಿನಿಮಾ ಖ್ಯಾತಿಯ ನಟ ಚೇತನ್‌, ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ಅವರಿಗೆ ದೂರು ಕೊಟ್ಟಿದ್ದಾರೆ.

ವಿಧಾನ ಪರಿಷತ್ ಸದಸ್ಯೆ ತಾರಾ ಅನೂರಾಧ ಅವರ ಜತೆ ಗುರುವಾರ ಕಮಿಷನರ್ ಕಚೇರಿಗೆ ಬಂದಿದ್ದ ಚೇತನ್,  ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.

‘ಜ.24ರಂದು ರಾತ್ರಿ 1.30ಕ್ಕೆ ಕರೆ ಮಾಡಿದ ಸ್ನೇಹಿತರು, ನಾವು ಚರ್ಚ್‌ಸ್ಟ್ರೀಟ್‌ನಲ್ಲಿ ಇದ್ದೇವೆ. ಮನೆಗೆ ಹೋಗಲು ಕ್ಯಾಬ್‌ ಸಿಗುತ್ತಿಲ್ಲ ಎಂದರು. ಹೀಗಾಗಿ ಅವರನ್ನು ಡ್ರಾಪ್‌ ಮಾಡಲು ಕಾರಿನಲ್ಲಿ ತೆರಳಿದೆ. ಆಗ ಸ್ಥಳದಲ್ಲಿದ್ದ ಎಸ್‌ಐ ನವೀನ್ ಅವರು ಕಾರಿನ ಕೀ ತೆಗೆದುಕೊಂಡು, ನನ್ನ ಜತೆ ವಿನಾ ಕಾರಣ ಜಗಳ ಪ್ರಾರಂಭಿಸಿದರು. ಏಕವಚನದಿಂದ ನಿಂದಿಸಿ­ದ್ದಲ್ಲದೆ, ಠಾಣೆಗೆ ಎಳೆದೊಯ್ಯುವುದಾಗಿ ಜೀಪಿನಲ್ಲಿ ಕೂರಿಸಿಕೊಂಡರು. ನಂತರ ಐದಾರು ಬಾರಿ ಮುಖ ಮತ್ತು ತಲೆಗೆ ಗುದ್ದಿದರು’ ಎಂದು ಚೇತನ್ ಆರೋಪಿಸಿದರು.

‘ಘಟನೆ ವೇಳೆ ನಾನು ಮದ್ಯಪಾನ ಮಾಡಿ­ರಲಿಲ್ಲ. ನನ್ನಿಂದ ಸಣ್ಣ ತಪ್ಪು ಕೂಡ ಆಗಿರಲಿಲ್ಲ. ಈ ಬಗ್ಗೆ ಅರಿವಾದ ನಂತರ ಎಸ್‌ಐ ನನ್ನನ್ನು ಬಿಟ್ಟು ಕಳುಹಿಸಿದರು. ಆದರೆ, ವಿನಾ ಕಾರಣ ಹಲ್ಲೆ ನಡೆಸಿದ್ದರಿಂದ ಅವರ ವಿರುದ್ಧ ದೂರು ದಾಖಲಿಸಲು ಬೆಳಗಿನ ಜಾವ 3.30ಕ್ಕೆ ಖುದ್ದು ಠಾಣೆಗೆ ತೆರಳಿದೆ. ಆಗಲೂ ನವೀನ್ ಹಲ್ಲೆ ನಡೆಸಿದರು. ಅಲ್ಲದೆ, ಸಿಬ್ಬಂದಿಯ ನೆರವಿನಿಂದ ಲಾಕಪ್‌ನಲ್ಲಿ ಕೂಡಿ ಹಾಕಿದರು’ ಎಂದು ಹೇಳಿದರು.

ನಟಿ ಹಾಗೂ ವಿಧಾನ ಪರಿಷತ್ ಸದಸ್ಯ
‘ನಂತರ ಠಾಣೆಗೆ ಬಂದ ಹಲಸೂರು ಗೇಟ್‌ ಉಪವಿಭಾಗದ ಎಸಿಪಿ ಅಮರನಾಥ್ ರೆಡ್ಡಿ, ‘ಎಸ್‌ಐ ನವೀನ್ ಅವರ ಬಳಿ ಕ್ಷಮೆ ಕೋರಿ. ಇಲ್ಲದಿದ್ದರೆ ಇಲ್ಲಿಂದ ಹೊರಗೆ ಹೋಗಲು ಬಿಡುವುದಿಲ್ಲ’ ಎಂದು ಬೆದರಿಸಿದರು. ನನ್ನ ತಪ್ಪಿಲ್ಲದ ಕಾರಣ ಕ್ಷಮೆ ಕೋರಲು ಒಪ್ಪಲಿಲ್ಲ. ಬೆಳಿಗ್ಗೆ 6.30ಕ್ಕೆ ಇನ್‌ಸ್ಪೆಕ್ಟರ್‌ ಬಾಲಕೃಷ್ಣ ಅವರು ಠಾಣೆಗೆ ಬಂದು, ಪ್ರಕರಣದ ತನಿಖೆ ನಡೆಸಿದರು. ಆಗ ಎಸ್‌ಐ ನವೀನ್ ಅವರ ತಪ್ಪು ಗೊತ್ತಾಗಿದ್ದರಿಂದ ನನ್ನನ್ನು ಬಿಟ್ಟು ಕಳುಹಿಸಿದರು’ ಎಂದು ವಿವರಿಸಿದರು. ‘ಹಲ್ಲೆ ನಡೆಸಿ ಗೌರವಕ್ಕೆ ಧಕ್ಕೆ ಉಂಟು ಮಾಡಿದ ಎಸ್‌ಐ ಹಾಗೂ ಎಸಿಪಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಂ.ಎನ್‌.ರೆಡ್ಡಿ ಅವರಲ್ಲಿ ಮನವಿ ಮಾಡಿದ್ದೇವೆ. ತನಿಖೆ ನಡೆಸಿ ಒಂದು ವಾರದೊಳಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ಕೊಟ್ಟಿದ್ದಾರೆ’ ಎಂದರು.

ಕುಡಿದ ಮತ್ತಿನಲ್ಲಿ ಗಲಾಟೆ: ಪೊಲೀಸರ ಆರೋಪ
ಬೆಂಗಳೂರು: ‘ಚೇತನ್ ಅವರ ಗೆಳತಿಯರು ರಾತ್ರಿ ಎರಡು ಗಂಟೆಗೆ ಚರ್ಚ್‌ಸ್ಟ್ರೀಟ್‌ನಲ್ಲಿ ಕುಡಿಯುತ್ತಾ ಕುಳಿತಿದ್ದರು. ಸುರಕ್ಷತೆ ದೃಷ್ಟಿಯಿಂದ ಮನೆಗೆ ಕಳುಹಿಸಲು ಮುಂದಾದಾಗ ಮದ್ಯದ ಅಮಲಿನಲ್ಲಿ ಆ ಯುವತಿ ಯರೇ ಮೊದಲು ಜಗಳ ಪ್ರಾರಂಭಿಸಿದರು’ ಎಂದು ಘಟನಾ ದಿನ ಗಸ್ತಿನಲ್ಲಿದ್ದ ಹಿರಿಯ ಅಧಿಕಾರಿಗಳು ಹೇಳಿದರು.

‘ವಿಪರೀತ ಕುಡಿದಿದ್ದ ಆ ಯುವತಿಯರಿಗೆ ಬೇಗನೆ ಮನೆಗೆ ಹೋಗು ವಂತೆ ಸೂಚಿಸಿದೆವು. ಈ ವೇಳೆ ಒಬ್ಬಾಕೆ, ‘ನಮಗೆ ರಾತ್ರಿ ವೇಳೆ ಹೊರಗೆ ಬರಲು ಸ್ವಾತಂತ್ರ್ಯ ಇಲ್ಲವೇ. ನಾವು ಹೋಗುವುದಿಲ್ಲ’ ಎಂದು ಪಟ್ಟು ಹಿಡಿದಳು. ಮತ್ತೊಬ್ಬಳು, ಚೇತನ್‌ಗೆ ಕರೆ ಮಾಡಿದಳು’ ಎಂದರು.

‘10 ನಿಮಿಷದಲ್ಲೇ ಸ್ಥಳಕ್ಕೆ ಬಂದ ಚೇತನ್, ಗೆಳತಿಯರ ಜತೆ ಸೇರಿಕೊಂಡು ಪೊಲೀಸರೊಂದಿಗೆ ಜಗಳ ಪ್ರಾರಂಭಿಸಿದರು. ವಿಷಯ ಅರಿಯದೆ ಗಲಾಟೆ ಮಾಡಿದ ಕಾರಣಕ್ಕೆ ಎಸ್‌ಐ ನವೀನ್, ಚೇತನ್‌ ಜತೆ ವಾಗ್ವಾದಕ್ಕಿಳಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಚೇತನ್‌ ಅವರನ್ನು ವಶಕ್ಕೆ ಪಡೆದ ನವೀನ್, ನಂತರ ಹಿರಿಯ ಅಧಿಕಾರಿಗಳ ಸೂಚನೆ ಯಂತೆ ಬಿಟ್ಟು ಕಳುಹಿಸಿದರು’ ಎಂದು ವಿವರಿಸಿದರು.

ನಂತರ ಸ್ನೇಹಿತನ ಕಾರಿನಲ್ಲಿ ಗೆಳತಿಯರನ್ನು ಮನೆಗೆ ಕಳುಹಿಸಿದ ಚೇತನ್, ಸ್ವಲ್ಪ ಹೊತ್ತಿನ ನಂತರ ಪುನಃ ಠಾಣೆಗೆ ಬಂದು ಸಿಬ್ಬಂದಿಯನ್ನು ಏಕವಚನ ದಿಂದ ನಿಂದಿಸಿದರು. ಇದರಿಂದ ಕೋಪಗೊಂಡ ನವೀನ್, ಅವರ ಮೇಲೆ ಹಲ್ಲೆ ನಡೆಸಿದರು. ಚೇತನ್‌ ನೀಡಿರುವ ದೂರನ್ನು ಸಾಮಾನ್ಯ ಪ್ರಕರಣ (ಎನ್‌ಸಿ) ಎಂದು ಪರಿಗಣಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು   ಹೇಳಿದರು. ‘ಚೇತನ್, ಎಸ್‌ಐ ನವೀನ್, ಎಸಿಪಿ ಅಮರನಾಥ್ ರೆಡ್ಡಿ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ. ಪ್ರಕರಣದ ತನಿಖೆಯನ್ನು ಕಬ್ಬನ್‌ಪಾರ್ಕ್‌ ಉಪ ವಿಭಾಗದ ಎಸಿಪಿ ಶೋಭಾರಾಣಿ ಅವರಿಗೆ ವಹಿಸ ಲಾಗಿದೆ. ಅವರು ಸಲ್ಲಿಸುವ ವರದಿ ಆಧರಿಸಿ ಕ್ರಮ ಕೈಗೊಳ್ಳಲಾ ಗುವುದು’ ಎಂದು ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದರು.

ಬೇಸರದ ಸಂಗತಿ
ಚೇತನ್‌ ಅವರನ್ನು ಮೊದಲ ಸಿನಿಮಾ­ದಿಂದಲೂ ನೋಡುತ್ತಿದ್ದೇನೆ.  ಅವರು ಸರ್ಕಾ­ರೇತರ ಸಂಸ್ಥೆಗಳ ಜತೆಗೂಡಿ ಹಲವು ಸಮಾಜ­ಮುಖಿ ಕೆಲಸ ಮಾಡಿದ್ದಾರೆ. ಅವರ ಸ್ವಭಾವದ ಬಗ್ಗೆ ಚೆನ್ನಾಗಿ ಗೊತ್ತಿದೆ. ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿದ ವಿಷಯ ಕೇಳಿ ಗಾಬರಿಯಾಯಿತು. ಎಸಿಪಿ ಅವರ ಸಮ್ಮುಖದಲ್ಲೇ ನಟನ ಮೇಲೆ ದೌರ್ಜನ್ಯ ನಡೆದಿರುವುದು ಬೇಸರದ ಸಂಗತಿ.
– ತಾರಾ ಅನೂರಾಧ

Write A Comment